ಕೋಟಿ ಮಂತ್ರಗಳಲ್ಲಿ ಶಿವಮಂತ್ರವೇ ಶ್ರೇಷ್ಠ’: ಡಿಗ್ಗಿ ಗ್ರಾಮದಲ್ಲಿ ಸನ್ಮಾರ್ಗದ ಬೆಳಕು ಚೆಲ್ಲಿದ ಶ್ರೀಗಳು
ಕೋಟಿ ಮಂತ್ರಗಳಲ್ಲಿ ಶಿವಮಂತ್ರವೇ ಶ್ರೇಷ್ಠ’: ಡಿಗ್ಗಿ ಗ್ರಾಮದಲ್ಲಿ ಸನ್ಮಾರ್ಗದ ಬೆಳಕು ಚೆಲ್ಲಿದ ಶ್ರೀಗಳು
ಕಮಲನಗರ: ತಾಲೂಕಿನ ಐತಿಹಾಸಿಕ ಡಿಗ್ಗಿ ಗ್ರಾಮದ ಶ್ರೀ ಮಡಿವಾಳೇಶ್ವರ ದೇವಾಲಯದಲ್ಲಿ ‘ಶ್ರೀ ಮಡಿವಾಳೇಶ್ವರ ಜಾತ್ರಾ ಮಹೋತ್ಸವ-2026’ರ ಅಂಗವಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ವಿಶೇಷ ಪ್ರವಚನ ಕಾರ್ಯಕ್ರಮದ ಗುರುವಾರ ಎರಡನೇ ದಿನದ ಸಭೆಯನ್ನುದ್ದೇಶಿಸಿ ಸಂಸ್ಥಾನ ಮಠ ಶಿವಣಿ ಹಲಬರ್ಗಾ ಹೈದರಾಬಾದ್ ಅಲಿಯಂಬರನ ಪೂಜ್ಯ ಡಾ. ಹಾವಗಿ ಲಿಂಗೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪ್ರವಚನದಲ್ಲಿ ಮಾತನಾಡಿದ ಶ್ರೀಗಳು, "ನಮ್ಮೆಲ್ಲರ ದೈವ ಶಿವ ಪರಮಾತ್ಮನ ಧ್ಯಾನ ಹಾಗೂ ದಾನವನ್ನು ಪ್ರತಿ ಕ್ಷಣವೂ ಮಾಡಬೇಕು. ಕೇವಲ ಧನ ಸಂಪತ್ತು ಮತ್ತು ಶ್ರೀಮಂತಿಕೆ ಹೊಂದಿದವರು ನಿಜವಾದ ಶ್ರೀಮಂತರಲ್ಲ, ಯಾರ ಮನಸ್ಸಿನಲ್ಲಿ ನಿಷ್ಕಲ್ಮಶ ಭಕ್ತಿ ಇದೆಯೋ ಅವರೇ ಎಲ್ಲರಿಗಿಂತ ದೊಡ್ಡ ಶ್ರೀಮಂತರು," ಎಂದು ಪ್ರತಿಪಾದಿಸಿದರು.
"ಏಳು ಕೋಟಿ ಮಂತ್ರಗಳಲ್ಲಿ 'ಓಂ ನಮಃ ಶಿವಾಯ' ಮಂತ್ರ ಅತ್ಯಂತ ಶ್ರೇಷ್ಠವಾದುದು. ಶಿವ ಮಂತ್ರ ಜಪಿಸುವುದು ಬೆಲೆ ಕಟ್ಟಲಾಗದ ಸಂಪತ್ತಾಗಿದ್ದು, ಶಿವಧ್ಯಾನವು ನಮ್ಮನ್ನು ಸನ್ಮಾರ್ಗ ಹಾಗೂ ಸ್ವರ್ಗದ ಹಾದಿಗೆ ಕೊಂಡೊಯ್ಯುತ್ತದೆ," ಎಂದು ತಿಳಿಸಿದ ಶ್ರೀಗಳು, ಆಸ್ತಿಕ ಮತ್ತು ನಾಸ್ತಿಕ ಇಬ್ಬರು ಸಹೋದರರ ಕಥೆಯ ಮೂಲಕ ಶಿವ ದಾನದ ಮಹತ್ವವನ್ನು ಜನರಿಗೆ ಅತ್ಯಂತ ಮಾರ್ಮಿಕವಾಗಿ ಮನವರಿಕೆ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಪರಮೇಶ ರಾಂಪುರೆ ಸ್ವಾಗತಿಸಿದರು, ಮಡಿವಾಳಪ್ಪ ಮುರ್ಕೆ ನಿರೂಪಣೆ ಮಾಡಿದರು.
ದೇವೇಂದ್ರ ಪಾಟೀಲ ವಂದನಾರ್ಪಣೆ ಮಾಡಿದರು.
ಶ್ರೀ ಮಡಿವಾಳೇಶ್ವರ ದೇವಾಲಯ ಟ್ರಸ್ಟ್‌ನ ಸದಸ್ಯರು, ಭಜನೆ ಮಂಡಳಿಯವರು ಹಾಗೂ ಡಿಗ್ಗಿ, ಕಮಲನಗರ, ಕೋಟಗ್ಯಾಳ, ಡೋಣಗಾಂವ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ಆಗಮಿಸಿದ ಎಲ್ಲಾ ಭಕ್ತರಿಗೆ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿತ್ತು.

