ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ
ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಲಹೆ
ಕಲಬುರಗಿ : ಮನುಷ್ಯನ ಆಲಸ್ಯವನ್ನು ದೂರಮಾಡಿ ವಿದ್ಯಾವಂತರಾಗಿ ಜೀವನದಲ್ಲಿಉತ್ತಮ ಬದುಕು ಕಟ್ಟಿಕೊಡುವ ಶಕ್ತಿ ಪುಸ್ತಕಗಳಿಗಿದೆ ಎಂದು ಪ್ರಕಾಶಕರಾದ ಡಾ. ಬಸವರಾಜ ಕೊನೇಕ್ ಹೇಳಿದರು.
ಸಾಹಿತಿ ಶ್ರೀಮತಿ ಮಲ್ಲಮ್ಮ ಶಿವರಾಜ ಕಾಳಗಿ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮವನ್ನು ಮಲ್ಲಮ್ಮ ಕಾಳಗಿ ಅವರು ರಚಿಸಿದ ಲಾಲ ಬಹುದ್ದೂರ ಶಾಸ್ತ್ರೀ ಹಾಗೂ ರಾಷ್ಟ್ರಪತಿಗಳು ಕೃತಿ ಬಿಡುಗಡೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು,ಗ್ರಂಥಾಲಯ ಶಿಕ್ಷಣ ಕ್ಷೇತ್ರದ ಹೃದಯ ಭಾಗ. ಅದನ್ನು ಅರಿತುಕೊಂಡು ಪ್ರತಿಯೊಬ್ಬರು ಉತ್ತಮವಾಗಿ ಬಳಕೆ ಮಾಡಿಕೊಂಡು ಓದಿನಲ್ಲಿ ಮುಂದಾದಾಗ ಜೀವನ ಸಾರ್ಥಕತೆ ಹೊಂದಲು ಸಾಧ್ಯ ಎಂದರು.
ಪುಸ್ತಕಗಳಿಗೆ ಬಡವ, ಶ್ರೀಮಂತ ಎಂಬ ಭೇದಭಾವವಿಲ್ಲ. ಪುಸ್ತಕವನ್ನು ಪ್ರೀತಿಸಿ ಅದರಲ್ಲಿರುವ ವಿಷಯವನ್ನು ಸಮರ್ಪಕವಾಗಿ ಅರ್ಥಯಿಸಿಕೊಂಡಾಗ ಜಗತ್ತನ್ನು ಕಂಡ ನಾಯಕರಾಗುವುದರಲ್ಲಿಸಂಶಯವಿಲ್ಲ. ನಮ್ಮ ಜೀವನವನ್ನು ಅಭಿವೃದ್ಧಿ ಪಡಿಸುವುದರಲ್ಲಿ ಪುಸ್ತಕಗಳು ಮುಖ್ಯವಾಗುತ್ತವೆ. ಅದನ್ನು ಅರಿತುಕೊಂಡು ನಾವು ಪುಸ್ತಕದಲ್ಲಿನ ವಿಷಯ ಮನದಟ್ಟು ಮಾಡಿಕೊಂಡು ಓದುವಿನತ್ತ ಗಮನಹರಿಸಿದಾಗ ಯಶಸ್ಸು ಕಾಣಲು ಸಾಧ್ಯ ಎಂದರು.
ಕಾರ್ಯಕ್ರಮದ ಅತಿಥಿ ಯಾದ ಕಲ್ಯಾಣಕುಮಾರ ಶಿಲವಂತ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿಸಾಮಾಜಿಕ ಜಾಲತಾಣ ಹಾಗೂ ವೈಜ್ಞಾನಿಕ ತಂತ್ರಜ್ಞಾನದ ಬಳಕೆಯಿಂದ ಪುಸ್ತಕಗಳ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕುಂಟಿತವಾಗುತ್ತದೆ. ಅದನ್ನು ಅರಿತುಕೊಂಡು ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವ ಮತ್ತು ಬುದ್ಧಿಮಟ್ಟ ಹೆಚ್ಚಿಸಿಕೊಂಡು ಸಮಾಜ ಗುರುತಿಸುವಂತ ವ್ಯಕ್ತಿಗಳಾಗಿ ಹೊರಹೊಮ್ಮಲು ಪುಸ್ತಕ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬರು ಪುಸ್ತಕವನ್ನು ಓದುವ ಹವ್ಯಾಸವನ್ನು ಬಳಸಿಕೊಳ್ಳಬೇಕು ಎಂದರು.
ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಎಚ್.ನಿರಗುಡಿ ಮಾತನಾಡಿ, ''ಪುಸ್ತಕಗಳ ಮೂಲಕ ಮನುಕುಲದ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ವರ್ಷದಿಂದ ಪುಸ್ತಕ ಪ್ರಧಿಕಾರ ನಡೆಸುತ್ತಿರುವ ಮನೆಗೊಂದು ಗ್ರಂಥಾಲಯ ತುಂಬಾ ಯಶಸ್ಸು ಕಂಡಿದ್ದು ಮಲ್ಲಮ್ಮ ಶಿವರಾಜ ಕಾಳಗಿ ಅವರು ತುಂಬಾ ಅಚ್ಚುಕಟ್ಟಾಗಿ ಗ್ರಂಥಾಲಯ ರೂಪಿಸಿದ್ದು ಅವರಿಗೆ ಪುಸ್ತಕ ಪ್ರಾಧಿಕಾರದಿಂದ ಅಭಿನಂದನಾ ಪತ್ರ ನೀಡಿ ಅಭಿನoದಿಸುತಿದ್ದದ್ದು ಹರ್ಷದಾಯಕ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿಯ ಸದಸ್ಯರಾದ ರೇವಣಸಿದ್ದಪ್ಪ ದುಕಾನ, ಶೋಭಾದೇವಿ ಚೆಕ್ಕಿ,ಡಾ. ನಾಗಪ್ಪ ಗೋಗಿ, ಪರ್ವೀನ್ ಸುಲ್ತಾನ, ಮಹೇಶ ಗoವಾರ ಹಾಗೂ ಉದಯಕುಮಾರ ವೀರಶೆಟ್ಟಿ,ಶಿವರಾಜ ಕಾಳಗಿ,ಶ್ವೇತಾ ವಡ್ಡನಕೇರಿ, ವಿದ್ಯಾಧರ ಬೆಳಮಗಿ, ಸಿದ್ದು ಗೋಗಿ , ಮೋಹನ ಗೌಳಿ, ಕಲಾವತಿ ಇದ್ದರು.ಡಾ. ಶರಣಬಸಪ್ಪ ವಡ್ಡನಕೇರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ,ಕುಮಾರ ಬಸವಪ್ರಭು ಪ್ರಾರ್ಥಿಸಿದರೆ, ಶೋಭಾದೇವಿ ಚೆಕ್ಕಿ ನಿರೂಪಿಸಿದರು ಶಿವರಾಜ ಕಾಳಗಿ ವಂದಿಸಿದರು.

