ವಿದ್ಯಾರ್ಥಿ ಸಂಘದ ಚುನಾವಣೆ: ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಮತದಾನ

ವಿದ್ಯಾರ್ಥಿ ಸಂಘದ ಚುನಾವಣೆ: ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಮತದಾನ

ವಿದ್ಯಾರ್ಥಿ ಸಂಘದ ಚುನಾವಣೆ: ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ಮತದಾನ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಉತ್ಸವಭರಿತ ಹಾಗೂ ಪ್ರಜಾಸತ್ತಾತ್ಮಕ ವಾತಾವರಣದಲ್ಲಿ ನಡೆಯಿತು.

ಚುನಾವಣೆಯಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಹಕ್ಕಿನ ಮತ ಚಲಾಯಿಸಿದರು. ಬಿ.ಎ., ಬಿ.ಎಸ್ಸಿ. ಹಾಗೂ ಬಿ.ಕಾಂ ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿನಿಯರು ವರ್ಗ ಪ್ರತಿನಿಧಿ ಹುದ್ದೆಗಳಿಗೆ ನಾಮಪತ್ರ ಸಲ್ಲಿಸಿ, ಪ್ರಚಾರ ನಡೆಸಿ, ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡರು. ಎಲ್ಲಾ ವರ್ಗ ಪ್ರತಿನಿಧಿ ಹುದ್ದೆಗಳಿಗೂ ಬಿರುಸಿನ ಪೈಪೋಟಿ ನಡೆದಿದ್ದು ಗಮನ ಸೆಳೆಯಿತು.

ವಿದ್ಯಾರ್ಥಿನಿಯರು ಅಭ್ಯರ್ಥಿಗಳ ನಾಯಕತ್ವದ ಗುಣ, ಜವಾಬ್ದಾರಿತನ, ಪ್ರಾಮಾಣಿಕತೆ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಪರಿಗಣಿಸಿ ಮತ ಚಲಾಯಿಸಿದರು. ನಂತರ ಮಧ್ಯಾಹ್ನ 2 ಗಂಟೆಗೆ ವಿದ್ಯಾರ್ಥಿ ಸಂಘದ ವಿವಿಧ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿನಿ ಅಕ್ಷತಾ ಉಪಾಧ್ಯಕ್ಷರಾಗಿ, ಬಿ.ಎಸ್ಸಿ. ಅಂತಿಮ ವರ್ಷದ ವಿದ್ಯಾರ್ಥಿನಿ ಪ್ರಿಯಾ ಪ್ರಧಾನ ಕಾರ್ಯದರ್ಶಿಯಾಗಿ, ಬಿ.ಎ. ಅಂತಿಮ ವರ್ಷದ ವಿದ್ಯಾರ್ಥಿನಿ ಉಮೈಮಾ ಶಿರಿನ್ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶ್ರದ್ಧಾ ಹಾಗೂ ಶ್ವೇತಾ ಎಸ್.ಕೆ. ಆಯ್ಕೆಯಾದರು.

2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಠೇವಣಿ ಸಲ್ಲಿಕೆ, ಪ್ರಚಾರ, ಮತದಾನ, ಮತ ಎಣಿಕೆ, ಫಲಿತಾಂಶ ಪ್ರಕಟಣೆ ಹಾಗೂ ವಿಜೇತರ ಸಂಭ್ರಮ ಸೇರಿದಂತೆ ಚುನಾವಣೆಯ ಎಲ್ಲ ಪ್ರಕ್ರಿಯೆಗಳು ಅರ್ಥಪೂರ್ಣವಾಗಿ ನಡೆಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ಅವರು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಚುನಾವಣೆಯ ಮಹತ್ವ ಕುರಿತು ಮಾತನಾಡಿ, ವಿದ್ಯಾರ್ಥಿನಿಯರನ್ನು ಪ್ರೋತ್ಸಾಹಿಸಿದರು.

ಕಾಲೇಜಿನ ಚುನಾವಣಾ ಸಂಘದ ಕಾರ್ಯದರ್ಶಿ ಶ್ರೀಮತಿ ಗೀತಾ ಪಾಟೀಲ್ ಹಾಗೂ ಸಂಘದ ಸದಸ್ಯರಾದ ಡಾ. ನಾಗರತ್ನ ಎಸ್., ಶ್ರೀಮತಿ ರೀಟಾ ಕುಲಕರ್ಣಿ ಮತ್ತು ಶ್ರೀಮತಿ ಅಂಬಿಕಾ ಪಾಟೀಲ್ ಅವರು ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಚುನಾವಣೆಯಲ್ಲಿ ಕಾಲೇಜಿನ ಎಲ್ಲಾ ಸಿಬ್ಬಂದಿ ವರ್ಗದವರು ಉತ್ಸಾಹದಿಂದ ಪಾಲ್ಗೊಂಡರು ಎಂದು ಕಾಲೇಜಿನ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.