ಸಪ್ತ ನೇಕಾರ ಸಂಘದ ವತಿಯಿಂದ ಶರಣಪ್ಪ ಜಡಿ ಅವರಿಗೆ ಗೌರವ ಸನ್ಮಾನ

ಸಪ್ತ ನೇಕಾರ ಸಂಘದ ವತಿಯಿಂದ ಶರಣಪ್ಪ ಜಡಿ ಅವರಿಗೆ ಗೌರವ ಸನ್ಮಾನ

ಸಪ್ತ ನೇಕಾರ ಸಂಘದ ವತಿಯಿಂದ ಶರಣಪ್ಪ ಜಡಿ ಅವರಿಗೆ ಗೌರವ ಸನ್ಮಾನ

ಕಲಬುರಗಿ, ಜೂ. 24: ಸಂವಿಧಾನದ ಅನುಚ್ಛೇದ 371(ಜೆ) ಸಂರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲೆಯ ಹೋರಾಟಗಾರ ಶರಣಪ್ಪ ಜಡಿ ಅವರು ಸಂಘಟನಾ ಕಾರ್ಯ ನಿಮಿತ್ತ ಕಲಬುರಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಪ್ತ ನೇಕಾರ ಸಂಘದ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.

ಜಿಲ್ಲಾ ಘಟಕಗಳ ರಚನೆ ಹಾಗೂ 371(ಜೆ) ಸಂರಕ್ಷಣಾ ಹೋರಾಟ ಸಮಿತಿಯ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿರುವುದಾಗಿ ಶರಣಪ್ಪ ಜಡಿ ತಿಳಿಸಿದರು. ಕಳೆದ ನಾಲ್ಕು ವರ್ಷಗಳಿಂದ ಸಪ್ತ ನೇಕಾರ ಸಂಘದ ಕಾರ್ಯಚಟುವಟಿಕೆಗಳನ್ನು ಗಮನಿಸುತ್ತಿದ್ದು, ರಾಜ್ಯದಲ್ಲಿಯೇ ನೇಕಾರ ಸಮುದಾಯದ ಒಗ್ಗಟ್ಟಿನ ವಿಶಿಷ್ಟ ಮಾದರಿಯನ್ನು ಈ ಸಂಘ ಪ್ರದರ್ಶಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನುಚ್ಛೇದ 371(ಜೆ)ಯನ್ನು ಸಮರ್ಪಕವಾಗಿ ಜಾರಿಗೆ ತರಲು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಘಟಕಗಳನ್ನು ರಚಿಸಿ, ಜನರ ಹಕ್ಕುಗಳಿಗಾಗಿ ಸಾಮೂಹಿಕ ಹೋರಾಟ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಬೀದರ್ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯ ಹೋರಾಟಗಾರರೊಂದಿಗೆ ಚರ್ಚಿಸಿ, ಸಂರಕ್ಷಣಾ ಸಮಿತಿ ರಚನೆಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸಪ್ತ ನೇಕಾರ ಸಂಘದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ ಅವರು ಸ್ವಾಗತಿಸಿದರು. ಬಳಿಕ ಸಂಘದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಉಪಾಧ್ಯಕ್ಷ ಶ್ರೀನಿವಾಸ್ ಬಲಪುರ ಅವರು ಶಾಲು ಹೊದಿಸಿ, ನೂಲಿನ ಹಾರ ಹಾಕುವ ಮೂಲಕ ಶರಣಪ್ಪ ಜಡಿ ಅವರನ್ನು ಗೌರವಿಸಿದರು.

ಸಂಘದ ಸಂಚಾಲಕ, ನ್ಯಾಯವಾದಿ ಹಾಗೂ ಕಲಂ 171(1) ತಿದ್ದುಪಡಿ ಹೋರಾಟ ಸಮಿತಿಯ ವಿಭಾಗೀಯ ಅಧ್ಯಕ್ಷ ಜೇನವೆರಿ ವಿನೋದಕುಮಾರ ಅವರು ಆತ್ಮೀಯವಾಗಿ ಬರಮಾಡಿಕೊಂಡು, ವಿವಿಧ ಸಂಘಟನೆಗಳ ಸಮನ್ವಯ ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಕುರಿತು ಚರ್ಚಿಸಿದರು. ಮುಂದಿನ ದಿನಗಳಲ್ಲಿ ಜಂಟಿಯಾಗಿ ಹೋರಾಟ ರೂಪಿಸುವುದಾಗಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಸಮಿತಿಯ ಸಂಚಾಲಕ ಶರಣಪ್ರಸಾದ್ ಜೆ.ಷಹಾಗೂ ಸಪ್ತ ನೇಕಾರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.