ಕಾಕೋಳಿನಲ್ಲಿ ಆ. 8ರಿಂದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥರ 6ನೇ ಚಾತುರ್ಮಾಸ್ಯ ಮಹೋತ್ಸವ ಸೆ. 26ರವರೆಗೆ

ಕಾಕೋಳಿನಲ್ಲಿ ಆ. 8ರಿಂದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥರ 6ನೇ ಚಾತುರ್ಮಾಸ್ಯ ಮಹೋತ್ಸವ ಸೆ. 26ರವರೆಗೆ

ಕಾಕೋಳಿನಲ್ಲಿ ಆ. 8ರಿಂದ ಶ್ರೀ ವಿದ್ಯಾವಲ್ಲಭ ಮಾಧವತೀರ್ಥರ 6ನೇ ಚಾತುರ್ಮಾಸ್ಯ ಮಹೋತ್ಸವ

ಸೆ. 26ರವರೆಗೆ ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮಗಳ ಸರಣಿ • ಆ. 7ರಂದು ಭವ್ಯ ಪುರಪ್ರವೇಶ • ಆ. 8ರಂದು ಚಾತುರ್ಮಾಸ್ಯ ವ್ರತ ಸಂಕಲ್ಪ

ಬೆಂಗಳೂರು, ಜು. 30: ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಪರಂಪರೆಗೆ ಸೇರಿದ ಕೋಲಾರ ಜಿಲ್ಲೆಯ ತಂಬಿಹಳ್ಳಿಯ ಶ್ರೀಮನ್ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಚತುರ್ವೇದಭಾಷ್ಯಾಚಾರ್ಯ ಶ್ರೀಮನ್ಮಾಧವತೀರ್ಥ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭ ಮಾಧವತೀರ್ಥ ಶ್ರೀಪಾದರ 6ನೇ ಚಾತುರ್ಮಾಸ್ಯ ಮಹೋತ್ಸವವು ಆಗಸ್ಟ್ 8ರಿಂದ ಸೆಪ್ಟೆಂಬರ್ 26ರವರೆಗೆ ಬೆಂಗಳೂರಿನ ಯಲಹಂಕ–ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಕಾಕೋಳು ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ.

ಶ್ರೀಪಾದರಾಜ ಪ್ರತಿಷ್ಠಿತ ಬೃಂದಾವನಾಂತರ್ಗತ ಚತುರ್ಭುಜ ಶ್ರೀ ವೇಣುಗೋಪಾಲಸ್ವಾಮಿ ಹಾಗೂ ಶ್ರೀ ವ್ಯಾಸರಾಜರಿಂದ ಪ್ರತಿಷ್ಠಾಪಿತ ಕಂಬದ ಆಂಜನೇಯಸ್ವಾಮಿಯ ದಿವ್ಯಸನ್ನಿಧಿಯಲ್ಲಿ ಚಾತುರ್ಮಾಸ್ಯ ಮಹೋತ್ಸವ ನಡೆಯಲಿದೆ. ಪಾಂಚಜನ್ಯ ಪ್ರತಿಷ್ಠಾನ ಹಾಗೂ ತಿರುಮಲ ತಿರುಪತಿ ದೇವಸ್ಥಾನದ ಹಿಂದೂ ಧರ್ಮ ಪ್ರಚಾರ ಪರಿಷತ್ ಸಹಯೋಗದಲ್ಲಿ ಶ್ರೀಮಠದ ಉಪಾಸ್ಯಮೂರ್ತಿಯಾದ ಶ್ರೀ ವೀರರಾಮದೇವರಿಗೆ ಪ್ರತಿದಿನ ವಿಶೇಷ ಪೂಜೆ, ಪಾರಾಯಣ, ಪ್ರವಚನ, ಭಜನೆ, ದಾಸವಾಣಿ ಸೇರಿದಂತೆ ವಿವಿಧ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಆಗಸ್ಟ್ 7ರಂದು ಸಂಜೆ 5.30ಕ್ಕೆ ಕಾಕೋಳಿನ ಪ್ರವೇಶದ್ವಾರದಿಂದ ಮಂಗಳವಾದ್ಯ, ವಿವಿಧ ಭಜನಾ ಮಂಡಳಿಗಳ ಭವ್ಯ ಮೆರವಣಿಗೆಯೊಂದಿಗೆ ಶ್ರೀಗಳವರ ಪುರಪ್ರವೇಶ ಸ್ವಾಗತ ನಡೆಯಲಿದೆ.

ಆಗಸ್ಟ್ 8ರಂದು ಬೆಳಿಗ್ಗೆ 9 ಗಂಟೆಗೆ ಶ್ರೀಗಳವರಿಂದ 6ನೇ ಚಾತುರ್ಮಾಸ್ಯ ವ್ರತ ಸಂಕಲ್ಪ, ವೇದವ್ಯಾಸ ಪೂಜೆ ಹಾಗೂ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ.

ಆಗಸ್ಟ್ 16ರಂದು ಶ್ರೀಪಾದರ 85ನೇ ವರ್ಧಂತಿ ಅಂಗವಾಗಿ ಧನ್ವಂತರಿ ಹೋಮ ಹಾಗೂ ಮೃತ್ಯುಂಜಯ ಹೋಮ ನಡೆಯಲಿದ್ದು, ಪ್ರಾಣೇಶ್ ಪಿ. ಭಾರದ್ವಾಜ್ ತಂಡದಿಂದ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸೆಪ್ಟೆಂಬರ್ 4ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಂಜೆ ಮೂಲ ದೇವರಿಗೆ ಬೆಣ್ಣೆ ಅಲಂಕಾರ, ಕಲ್ಪೋಕ್ತ ಪೂಜೆ ಹಾಗೂ ರಾತ್ರಿ ಅರ್ಘ್ಯ ಪ್ರದಾನ ಹಮ್ಮಿಕೊಂಡಿದೆ.

ಸೆಪ್ಟೆಂಬರ್ 25ರಂದು ಸಾಮೂಹಿಕ ಅನಂತಪದ್ಮನಾಭ ವ್ರತ ಜರುಗಲಿದ್ದು, ಸೆಪ್ಟೆಂಬರ್ 26ರಂದು ಭಾದ್ರಪದ ಪೂರ್ಣಿಮೆಯಂದು ಚಾತುರ್ಮಾಸ್ಯ ವ್ರತ ಸಮಾಪ್ತಿ, ಸೀಮೋಲ್ಲಂಘನ ಹಾಗೂ ಸಮಾರೋಪ ಸಮಾರಂಭ ನೆರವೇರಲಿದೆ ಎಂದು ಚಾತುರ್ಮಾಸ್ಯ ಸ್ವಾಗತ ಸಮತಿ ಗೌರವಾಧ್ಯಕ್ಷ ಕೆ.ವಿ.ಗೋಪಾಲಕೃಷ್ಣ ಮತ್ತು ಶ್ರೀಮಠದ ಕಾರ್ಯದರ್ಶಿ ಭದ್ರಾವತಿ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಾತುರ್ಮಾಸ್ಯದ ಅವಧಿಯಲ್ಲಿ ವಿವಿಧ ಸೇವೆಗಳಲ್ಲಿ ಪಾಲ್ಗೊಳ್ಳಲು ಆಸಕ್ತ ಭಕ್ತರು 91418 26180 ಹಾಗೂ 63642 59787 ಸಂಖ್ಯೆಗೆ ಸಂಪರ್ಕಿಸಬಹುದು.