ಜೀವನ್ ಗೊಳಸಂಗಿ: ನೆನಪು-೧
ಜೀವನ್ ಗೊಳಸಂಗಿ: ನೆನಪು-೧
ಮಕ್ಕಳು ಜೀವನದ ಆಸ್ತಿ.ಕೆಲವರಿಗೆ ಮಕ್ಕಳು ಸದಾ ತಮ್ಮ ಜೊತೆಗೆ ಅಪ್ಪನ ಮಡಿಲಲ್ಲಿ ಸೇರಿರುತ್ತಾರೆ.ಅಪ್ಪನ ಹೆಗಲ ಮೇರೆ ಏರಿ ತಮ್ಮ ಕನಸುಗಳನ್ನು ನನಸು ಮಾಡುತ್ತಾ ಹೋಗುವರು.ಅದೇ ಅಪ್ಪ ಪಟ್ಟ ಶ್ರಮ,ಬೆವರಿನ ಮೂಲಕ ತನ್ನ ಅಪ್ಪ ಹೊಂದಿದ ಕನಸು ನನಸಿಗಾಗಿ ಹಗಲಿರುಳು ಶ್ರಮಿಸುವ,ಅವರ ಆಶೆ,ಆಕಾಂಕ್ಷೆಗಳನ್ನು ಈಡೇರಿಸುವ ಸಲುವಾಗಿ ಹೊಸ ಭರವಸೆ ಹೊತ್ತ ಮಗ ಕೂಡಾ ಅಷ್ಟೇ ಪ್ರಾಮುಖ್ಯತೆ ಪಡೆಯುತ್ತಾನೆ. ಇಂತಹ ಸಾಲಿನಲ್ಲಿ ಸಿಗುವ ಅಪರೂಪದ ಮಗ,ಯುವಕ ಶ್ರೀ ಜೀವನ್ ಅರ್ಜುನ ಗೊಳಸಂಗಿ ಒಬ್ಬರು.
ನಾನು ಕಂಡ ಅಪರೂಪದ ಯುವಕ.ಪಾದರಸದಂತೆ ಓಡಾಡುವ, ಅಂಕಲ್,ಆಂಟಿ,ಸರ್ ಎನ್ನುವ ಮೂಲಕ ಎಲ್ಲರ ಮನದ ತುಂಬಿಕೊಂಡ ಇಂದಿಗೂ ಹಚ್ಚ ಹಸಿರಾಗಿ ನಿಂತು ನಮ್ಮೆಲ್ಲರಿಗೂ ಬೆರಗು ಹುಟ್ಟಿಸಿದವನು.ಒಂದು ವರ್ಷ ಇಲ್ಲದ ಆತ....ಬದುಕೇ ಶೂನ್ಯವಾತಾವರಣ ಆವರಿ ಸಿಕೊಂಡು ಬಿಟ್ಟಿತು.
ಜೀವನ್ ಕೇವಲ ಇಪ್ಪತ್ಮೂರು ವರುಷದ ಸುಂದರ ಹುಡುಗ, ಅಪ್ಪನ ಜೊತೆಗೆ ಹಾಡು, ಓದು, ಸಂಘಟನೆಗ ಳಲ್ಲಿ ತನ್ನನ್ನು ಬಾಲ್ಯದಿಂದಲೇ ತೊಡಗಿಸಿಕೊಂಡು ಬಂದವನು. ಸಾಂಸ್ಕೃತಿಕ ಆಯಾಮದೊಂದಿಗೆ ನಿಂತ ಚಿತ್ರರಂಗದಲ್ಲಿ ಹೆಜ್ಜೆಯೂರುವ,ನ್ಯೂಸ್ ಚಾನಲ್ ಗಳಲ್ಲಿ ಹೆಜ್ಜೆ ಇಡಲು ತವಕಿಸಿ, ತನ್ನ ಶ್ರಮ ವಿನಿಯೋಗಿಸಿ; ತನ್ನ ಗೆಳೆಯ ಗೆಳತಿಯರ ಒಂದು ಹೊಸ ತಂಡ ಕಟ್ಟಬೇಕೆಂಬ ಕನಸುಗಳೊಂದಿಗೆ ಮಾಯಾನಗರಿ ಬೆಂಗಳೂರು ಸೇರಿದ್ದ.ಹೊಸ ಚಾನಲ್ ಗಳ ಶೋಧದಲ್ಲಿದ್ದು; ತನ್ನ ಪಡೆ ನಿರ್ಮಿಸಿ ಚಿತ್ರರಂಗ- ನ್ಯೂಸ್ ಚಾನಲ್ ಗಳಲ್ಲಿ ಭರವಸೆ ಹೊಂದಿದ ಚಿಗುರು ಮೀಸೆಯ ಯುವಕ, ತನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಮತ್ತು ಯಾವುದೋ ಚಾನಲ್ ಗೆ ಸಂದರ್ಶನ ನೀಡಲು ಕನಸು ಹೊತ್ತು ಹೋದವನು.ತನ್ನ ಗೆಳೆಯರೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ.ದಿನ ನಿತ್ಯ ವು ಹೆತ್ತೊಡಲ ಕರುಳ ಜೀವಿಯೊಂದಿಗೆ ಮೊಬೈಲ್ ಮೂಲಕ ಮಾತನಾಡುತ್ತಲೇ ತನ್ನ ದಿನಚರಿ ಹೇಳುತ್ತ ಹೋಗುವವ.ತಂದೆ ಪಟ್ಟ ಸಂಘರ್ಷದ ಬದುಕು ಕಣ್ಣ ಮುಂದೆ ನೋಡುತ್ತ ಬೆಳೆದವನು.ಚಿಕ್ಕ ಚೊಕ್ಕ ಕುಟುಂಬದ ಜೀವ ಸೆಲೆಯಾದವನು.ತನಗೆ ಅರಿವು ಬಂದಾಗಿನಿಂದ ಕುಟುಂಬದೊಂದಿಗೆ- ಬಂಧುಗಳೊಂದಿಗೆ- ಸ್ನೇಹಿತರೊಂ ದಿಗೆ- ದಲಿತ ಸಾಹಿತ್ಯ ಪರಿಷತ್ತಿನೊಂದಿಗೆ ಸದಾ ತನ್ಮಯತೆ ಯಿಂದ ಓಡಾಡುವ,ಸಂಬಂಧ ಬೆಸೆಯುವ ಕೊಂಡಿ.ತಂದೆ ಯ ಯಾವುದೇ ಕಾರ್ಯಕ್ರಮ ಇರಲಿ ಮುಂದೆ ನಿಂತು ಮಾಡುವ ಎದೆಗಾರಿಕೆ ಇತ್ತು.ಬಂದವರಿಗೆಲ್ಲ ತನ್ನ ಮುಗುಳ್ನಗೆಯ ಮೂಲಕ ಕಳಿಸುವ,ಕರೆಯವ ತವಕದಲ್ಲಿ ಇದ್ದವನು.ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಗೆ ಅತಿಥಿಗಳನ್ನು ಕರೆ ತಂದು ಕಳಿಸುವ; ಊರಿಗೆ ಹೋಗುವವರಿಗರ ಸೂಕ್ತ ಸಲಹೆ ಸೂಚನೆ ಕೊಡುತ್ತಾ ತಂದೆಯ ಭಾಗವಾಗಿದ್ದ. ಆತ ಕಾಣದಿದ್ಧರೆ ಅಲ್ಲೊಂದು ಏನೋ ಕೊರತೆ ಕಾಣುತ್ತಿತ್ತು. ಇತ್ತೀಚಿನ ಎರಡು ವರ್ಷದಲ್ಲಿ ಬಹು ಕ್ರೀಯಾಶೀಲನಾಗಿದ್ದ ವಿಜಯಪುರ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಅಂಬೇಡ್ಕರ್ ಚಿತ್ರದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ಧ; ರಾಯಚೂರಿನಲ್ಲಿ ನಡೆಯುವ ಸಮ್ಮೇಳನಕ್ಕೆ ಹಲವು ಕನಸು ಕಂಡಿದ್ದ. ತಂದೆಗೆ ನಾನು ದುಡಿಯುತ್ತೇನೆ ಅಮ್ಮನನ್ನು ನಿನ್ನ ಮತ್ತು ತಂಗಿಯನ್ನು ನೋಡಿಕೊಳ್ಳುತ್ತೇನೆ.ನಿಮ್ಮ ಕಷ್ಟಗಳಿಗೆ ಅಂತ್ಯ ಹಾಡುತ್ತೇನೆಂದು ಹೇಳಿದ ಮಾತುಗಳು.... ಆತನ ನಿಜವಾದ ಕಳಕಳಿ. ಎಲ್ಲರಿಗೂ ಇಷ್ಟವಾಗಿದ್ದ.ನಮಗೆಲ್ಲ ಆತನ ಕ್ರಿಯಾಶೀಲತೆ ಬೆರಗು ಹುಟ್ಟಿಸಿತ್ತು. ಆದರೆ ವಿಧಿ.. ಎಷ್ಟು ಕ್ರೂರಿ.. ಸಂತಸಪಡುವ,ನಿರಾಳವಾಗಿ ತಂದೆ- ತಾಯಿ ತಂಗಿಯ ಜೊತೆ ಕಳೆಯ ಬೇಕಾದ ಆಗಲೇ ತನ್ನ ಹದಿಹರೆಯದ ಕನಸು ನನಸು ಆಗುವ ಮುನ್ನವೇ ಹೃದಯಾಘಾತಕ್ಕೆ ಒಳಗಾದದ್ದು ಬರಸಿಡಿಲಿನಂತೆ ಅಪ್ಪಳಿಸಿದೆ.೧೫-೦೬-೨೦೨೫ ಕ್ಕೆ ಸಂಭ್ರಮಪಟ್ಟ ದಿನ ಆದರೆ ಬೆಳಗು ಹರಿಯುವ ೧೬-೦೬-೨೦೨೫ ರ
೯-೩೦ ಕ್ಕೆ ಡಾ.ಎಚ್..ಬಿ. ಕೊಲ್ಕಾರರ ಪೋನ್ ನಮ್ಮನ್ನು ಗದ್ಗರಿಸಿತು. ಕೇವಲ ತಂದೆ- ತಾಯಿಗಲ್ಲ ಇಡಿ ದಲಿತ ಸಾಹಿತ್ಯ ಪರಿಷತ್ತು ಮತ್ತು ಸಾಂಸ್ಕೃತಿಕ ಲೋಕದ ಮಗನಾಗಿದ್ದ...ಆತನ ನೆನಪು ಬರಿ ಈಗ.. ಆತನ ಕನಸು ಯೋಜನೆಗೆ ನಾವೆಲ್ಲ ಸೇರಿ ಶಾಶ್ವತವಾಗಿ ಉಳಿಯುವಂತೆ ಮಾಡೋಣ...
ಡಾ.ಗವಿಸಿದ್ಧಪ್ಪ ಎಚ್.ಪಾಟೀಲ ಕಲಬುರಗಿ ೧೬-೦೬-೨೦೨೬
