ಐನಾಪೂರ ರೈತರ ಹೋರಾಟದ ಧ್ವನಿಗೆ ಸ್ಪಂದಿಸಿದ ಕಾಂಗ್ರೆಸ್ ಸರಕಾರ : ರೈತರಲ್ಲಿ ಸಂತಸ 15 ದಿನಗಳ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಲಾಗುವುದು : ಇಇ ಸತ್ಯಪ್ರಕಾಶ ಮುಲ್ಗೆ
ಐನಾಪೂರ ರೈತರ ಹೋರಾಟದ ಧ್ವನಿಗೆ ಸ್ಪಂದಿಸಿದ ಕಾಂಗ್ರೆಸ್ ಸರಕಾರ : ರೈತರಲ್ಲಿ ಸಂತಸ
15 ದಿನಗಳ ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಲಾಗುವುದು : ಇಇ ಸತ್ಯಪ್ರಕಾಶ ಮುಲ್ಗೆ
ಚಿಂಚೋಳಿ :ತಾಲೂಕಿನ ಐನಾಪೂರ ಜಿ.ಪಂ. ಕ್ಷೇತ್ರದ ರೈತರ ಬಹುದಿನಗಳ ಹೋರಾಟದ ಬೇಡಿಕೆಯಾಗಿದ್ದ ಐನಾಪೂರ ಏತ ನೀರಾವರಿ ಯೋಜನೆ ಜಾರಿಗೆ ಕಾಂಗ್ರೆಸ್ ಸರಕಾರ ಸ್ಪಂದಿಸಿ, ಚಾಲನೆಗೆ ಸಿದ್ದತೆ ಮಾಡಿಕೊಳ್ಳುತ್ತಿರುವುದಕ್ಕೆ ರೈತರಲ್ಲಿ ಸಂತಸ ತಂದಿದೆ. ಐನಾಪೂರ ಜಿ.ಪಂ ಕ್ಷೇತ್ರದ 17 ಗ್ರಾಮಗಳ ರೈತರಿಗೆ ನೀರಾವರಿ ಬೆಳೆ ಬೆಳೆಯಲು ಯೋಜನೆ ಅನುಷ್ಠಾನದಿಂದ ಅನುಕೂಲವಾಗಲಿದೆ. ಹಿಂದುಳಿದ ಚಿಂಚೋಳಿ ತಾಲೂಕಿನ ಐನಾಪೂರ ಭಾಗದ ರೈತರ ಆರ್ಥಿಕವಾಗಿ ಬಲಿಷ್ಠಗೊಳಿಸಲು ಐನಾಪೂರ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಶಿವಾನಂದ ಮಾಲಿ ಪಾಟೀಲ ಅವರ ನೇತೃತ್ವದಲ್ಲಿ ಮೂರು ದಶಕಗಳ ಕಾಲ ನಿರಂತರವಾಗಿ ಹೋರಾಟಗಳು ನಡೆಸಿ ಮನವಿ ಸಲ್ಲಿಸಿದರ ಫಲಕ್ಕೆ ಇಂದಿನ ಕಾಂಗ್ರೇಸ್ ಸರಕಾರ ಯೋಜನೆಯ ಕಾಮಗಾರಿ ಟೆಂಡರ್ ಪೂರ್ಣಗೊಳಿಸಿ ಅನುದಾನ ಒದಗಿಸಿದೆ. ಈಗ ಯೋಜನೆ ಕಾಮಗಾರಿ ಪ್ರಾರಂಭಿಸಿ, ಚಾಲನೆಗೆ ಗುತ್ತಿಗೆದಾರ ಸೈಯದ್ ಮನ್ನಾನ್ ಅವರು ಯೋಜನೆ ಸ್ಥಳದಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿರುವುದಕ್ಕೆ ಐನಾಪೂರ ಭಾಗದ ರೈತರಲ್ಲಿ ಸಂತಸ ತಂದಿದೆ. ಯೋಜನೆ ಅನುಷ್ಠಾನದಿಂದ ಕಬ್ಬು, ಬಾಳೆ, ತರಕಾರಿ, ತೋಟಗಾರಿಕೆ ಬೆಳೆಗಳು, ತೊಗರಿ ಬೆಳೆಗೆ ಅನುಕೂಲವಾಗಿ ರೈತರ ಆರ್ಥಿಕ ಸ್ಥಿತಿ ಉತ್ತಮಗೊಳಲಿದ್ದು, ಸರಕಾರ ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ, ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳಬೇಕೆಂಬುದು ಐನಾಪೂರ ಭಾಗದ ರೈತರ ಒತ್ತಾಯವಾಗಿದೆ.
• ಐನಾಪೂರ ಭಾಗದ ರೈತರ ಬಹುದಿನದ ಹೋರಾಟದ ಕೂಗಿಗೆ ಚಿಂಚೋಳಿಯ ಸ್ಥಳೀಯ ಶಾಸಕರು ಸ್ಪಂದಿಸಿ ಯೋಜನೆ ಅನುಷ್ಠಾನಕ್ಕೆ ತರಲು ಅಂದಿನ ಬಿಜೆಪಿ ಆಡಳಿತ ಸರಕಾರಕ್ಕೆ ಒತ್ತಾಯಿಸಿಲ್ಲ. ಇಂದಿನ ಕಾಂಗ್ರೇಸ್ ಸರಕಾರ ಮಾತು ಕೊಟ್ಟಂತೆ ರೈತರ ಬಹುದಿನದ ಹೋರಾಟಕ್ಕೆ ಸ್ಪಂದಿಸಿದ್ದು, ರೈತರ ಮುಖದಲ್ಲಿ ಸಂತಸ ತಂದಿದೆ. – ಶಿವಾನಂದ ಮಾಲಿ ಪಾಟೀಲ್ ಐನಾಪೂರ ಏತ ನೀರಾವರಿ ಸಮಿತಿ ಅಧ್ಯಕ್ಷ
• ಈಗಾಗಲೇ ಸರಕಾರ ಯೋಜನೆ ಜಾರಿಗೆ 95 ಕೋಟಿ ರು ಅನುದಾನ ಬಿಡುಗಡೆಗೊಳಿಸಲಾಗಿದ್ದು, ಕಾಮಗಾರಿ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಳಿಸಲಾಗಿದೆ. ಇಲಾಖೆ ಹಂತದಲ್ಲಿ ಅದರ ಪ್ರಕ್ರಿಯೆಗಳು ನಡೆಯುತ್ತಿದೆ. ಈ ತಿಂಗಳ ಅಂತ್ಯದೊಳಗೆ ಯೋಜನೆ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. – ಸತ್ಯಪ್ರಕಾಶ ಮುಲ್ಗೆ ಇಇ ಕರ್ನಾಟಕ ನೀರಾವರಿ ಅಭಿವೃದ್ದಿ ನಿಗಮ ಕಲಬುರಗಿ
• ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೇಸ್ ಸರಕಾರ ಆಡಳಿತಕ್ಕೆ ಬಂದರೆ ಐನಾಪೂರ ಏತ ನೀರಾವರಿ ಯೋಜನೆ ಪ್ರಾರಂಭಿಸಲು ಅನುದಾನ ಒದಗಿಸಲಾಗುತ್ತದೆ ಎಂದು ಕಾಂಗ್ರೇಸ್ ಪಕ್ಷದ ನಾಯಕರು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬೀದರ ಸಂಸದ ಸಾಗರ ಖಂಡ್ರೆ, ಮುಖಂಡ ಸುಭಾಶ ರಾಠೋಡ ಅವರು ರೈತರಿಗೆ ಭರವಸೆ ನೀಡಲಾಗಿತ್ತು. ಅದರಂತೆ ಕೊಟ್ಟ ಮಾತಿನಂತೆ ನಡೆದುಕೊಂಡು ಐನಾಪೂರ ಏತ ನೀರಾವರಿ ಯೋಜನೆ ಜಾರಿಗೆ ಕಾಂಗ್ರೇಸ್ ಸರಕಾರ ಕ್ರಮ ಕೈಗೊಂಡು ಭರವಸೆ ಉಳಿಸಿಕೊಂಡಿದೆ. – ನಾಗೇಶ ಗುಣಾಜಿ ಚಿಂಚೋಳಿ ಕಾಂಗ್ರೇಸ್ ಯುವ ಮುಖಂಡ

