ದಾರಿದೀಪಗಳನ್ನು ತಕ್ಷಣ ದುರಸ್ತಿ ಮಾಡಿ: ಪೊಲೀಸ್ ಆಯುಕ್ತರಿಗೆ ಗ್ರಾಮಸ್ಥರ ಮನವಿ

ದಾರಿದೀಪಗಳನ್ನು ತಕ್ಷಣ ದುರಸ್ತಿ ಮಾಡಿ: ಪೊಲೀಸ್ ಆಯುಕ್ತರಿಗೆ ಗ್ರಾಮಸ್ಥರ ಮನವಿ

ದಾರಿದೀಪಗಳನ್ನು ತಕ್ಷಣ ದುರಸ್ತಿ ಮಾಡಿ: ಪೊಲೀಸ್ ಆಯುಕ್ತರಿಗೆ ಗ್ರಾಮಸ್ಥರ ಮನವಿ

ಕಲಬುರಗಿ, ಆ. 1: ನಗರದ ಹೊರವಲಯದಲ್ಲಿರುವ ರಾಮಮಂದಿರ ವೃತ್ತದಿಂದ ಕೋಟನೂರ (ಡಿ) ಗ್ರಾಮದ ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಯವರೆಗೆ ಇರುವ ಸುಮಾರು 32 ದಾರಿದೀಪಗಳಲ್ಲಿ ಬಹುತೇಕವು ಹಲವು ದಿನಗಳಿಂದ ಕಾರ್ಯನಿರ್ವಹಿಸದಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕಲಬುರಗಿ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ರಸ್ತೆಯ ಮೂಲಕ ಖಣದಾಳ, ಇಟಗಾ, ಸಿರನೂರು, ಪಣೆಗಾಂವ, ಸೀತನೂರು, ನಂದಿಕೂರು ಹಾಗೂ ಕೋಟನೂರ ಗ್ರಾಮಗಳ ಸಾವಿರಾರು ಜನರು ಪ್ರತಿದಿನ ಸಂಚರಿಸುತ್ತಾರೆ. ರಾತ್ರಿ ವೇಳೆಯಲ್ಲಿ ದಾರಿದೀಪಗಳು ಬೆಳಗದಿರುವುದರಿಂದ ಮಹಿಳೆಯರು, ವಿದ್ಯಾರ್ಥಿಗಳು, ಕಾರ್ಮಿಕರು, ವಯೋವೃದ್ಧರು ಹಾಗೂ ಬಸ್ ಪ್ರಯಾಣಿಕರು ಆತಂಕದ ವಾತಾವರಣದಲ್ಲಿ ಓಡಾಡುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ದಾರಿದೀಪಗಳ ಕೊರತೆಯಿಂದ ಕಳ್ಳತನ, ದರೋಡೆ, ಬೆದರಿಕೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳಿಗೆ ಅವಕಾಶ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಜೀವ ಮತ್ತು ಆಸ್ತಿಯ ಸುರಕ್ಷತೆಗೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರಾಮಮಂದಿರ ವೃತ್ತದಿಂದ ಕೋಟನೂರ (ಡಿ) ಗ್ರಾಮದವರೆಗೆ ಇರುವ ಎಲ್ಲಾ ದಾರಿದೀಪಗಳನ್ನು ತುರ್ತಾಗಿ ದುರಸ್ತಿ ಮಾಡಿ ವಿದ್ಯುತ್ ವ್ಯವಸ್ಥೆಯನ್ನು ಪುನರಾರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು. ಜೊತೆಗೆ ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಬೇಡಿಕೆಯನ್ನು ಶೀಘ್ರದಲ್ಲಿ ಈಡೇರಿಸದಿದ್ದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ರಾಮಮಂದಿರ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ಹಾಗೂ ರಸ್ತೆ ತಡೆ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಪವನಕುಮಾರ ಬಿ. ವಳಕೇರಿ ಅವರ ನೇತೃತ್ವದಲ್ಲಿ ರವೀಂದ್ರ ವಿಭೂತಿ, ಸಂಗಮೇಶ್ ನಾಗನಹಳ್ಳಿ, ಮಲ್ಲಿಗೆನಾಥ ನಾಗನಹಳ್ಳಿ, ಲೋಹಿತ್ ವೈಕಲ್ಲೂರು ವಿಶ್ವಕರ್ಮ, ವೈಭವ ಬಬಲಾದ, ಹರ್ಷದ್ ಖಾನ್, ಶಿವಶರಣಪ್ಪ ಹೂಗಾರ್, ವೀರಗುಂಡ ಸೇರಿದಂತೆ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.