ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ

ಪ್ರಿಯಾಂಕ್ ಖರ್ಗೆ ಅವರಿಗೆ ಡಿಸಿಎಂ ಸ್ಥಾನ ನೀಡಲು ಆಗ್ರಹ :..

ಶಹಾಬಾದ : - ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಯುವಕರ ಕಣ್ಮಣಿಯಾಗಿ ಹಾಗೂ ದಕ್ಷ ಆಡಳಿತಗಾರರಾಗಿ ಗುರುತಿಸಿಕೊಂಡಿರುವ ಜನಪ್ರಿಯ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನವನ್ನು ನೀಡಬೇಕು ಎಂದು ಚಿತ್ತಾಪುರ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಸಂಯೋಜಕರಾದ ಶರಣಗೌಡ ದಳಪತಿ ಹಾಗೂ ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಜಲಂದರ ಅವರು ಪಕ್ಷದ ರಾಜ್ಯ ಮತ್ತು ರಾಷ್ಟ್ರೀಯ ನಾಯಕರಲ್ಲಿ ಜಂಟಿಯಾಗಿ ಮನವಿ ಮಾಡಿದ್ದಾರೆ.

ಈ ಕುರಿತು ಜಂಟಿ ಹೇಳಿಕೆ ನೀಡಿರುವ ಅವರು, ಪಿಎಸ್‌ಐ ನೇಮಕಾತಿ ಹಗರಣ ಹಾಗೂ ಕ್ರಿಪ್ಟೋ ಕರೆನ್ಸಿ ಹಗರಣಗಳನ್ನು ಅತ್ಯಂತ ಧೈರ್ಯ ಮತ್ತು ಚಾಣಾಕ್ಷತೆಯಿಂದ ಬಯಲಿಗೆಳೆದ ಕೀರ್ತಿ ಪ್ರಿಯಾಂಕ್ ಖರ್ಗೆ ಅವರಿಗೆ ಸಲ್ಲುತ್ತದೆ. ವಿರೋಧ ಪಕ್ಷಗಳ ಪ್ರತಿಯೊಂದು ಟೀಕೆ ಹಾಗೂ ಆರೋಪಗಳಿಗೆ ತಕ್ಕ ಸಾಕ್ಷ್ಯಾಧಾರಗಳೊಂದಿಗೆ, ತೀಕ್ಷ್ಣವಾಗಿ ಉತ್ತರ ನೀಡುವ ಚಾಣಾಕ್ಷತೆ ಮತ್ತು ವಾಗ್ಪಟುತ್ವ ಅವರಲ್ಲಿದೆ ಎಂದಿದ್ದಾರೆ. 

ಪ್ರಿಯಾಂಕ್ ಖರ್ಗೆ ಅವರು ಸದಾ ಯುವಕರ ಪರವಾಗಿ ಯೋಚಿಸುವ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಒತ್ತು ನೀಡುವ ನಾಯಕರಾಗಿದ್ದಾರೆ. ಇವರನ್ನು ಉಪ ಮುಖ್ಯಮಂತ್ರಿ ಮಾಡಿದರೆ ರಾಜ್ಯದಾದ್ಯಂತ ಇರುವ ಲಕ್ಷಾಂತರ ಯುವಕರು ಕಾಂಗ್ರೆಸ್ ಪಕ್ಷದ ಕಡೆಗೆ ಮತ್ತಷ್ಟು ಆಕರ್ಷಿತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪಕ್ಷದ ಸಂಘಟನೆಗೆ ಇವರಿಂದ ದೊಡ್ಡ ಶಕ್ತಿ ಸಿಗಲಿದೆ.

ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲು, ಗ್ರಾಮೀಣ ಭಾಗದ ಉದ್ಧಾರಕ್ಕೆ ಹಾಗೂ ಕಲ್ಯಾಣ ಕರ್ನಾಟಕದ ಹಿತದೃಷ್ಟಿಯಿಂದ ಹೈಕಮಾಂಡ್ ಮತ್ತು ರಾಜ್ಯದ ಹಿರಿಯ ನಾಯಕರು ತಕ್ಷಣವೇ ಸೂಕ್ತ ನಿರ್ಧಾರ ಕೈಗೊಂಡು, ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಜವಾಬ್ದಾರಿಯನ್ನು ವಹಿಸಿಕೊಡಬೇಕು ಎಂದು ಶರಣಗೌಡ ದಳಪತಿ ಹಾಗೂ ಮಲ್ಲಿಕಾರ್ಜುನ ಜಲಂದರ ಅವರು ಒತ್ತಾಯಿಸಿದ್ದಾರೆ.