ಶನಿದೇವ ಕರ್ಮಕ್ಕೆ ತಕ್ಕ ಫಲ ನೀಡುವ ನ್ಯಾಯದೇವತೆ: ಶಿವರಾಜ ಅಂಡಗಿ

ಶನಿದೇವ ಕರ್ಮಕ್ಕೆ ತಕ್ಕ ಫಲ ನೀಡುವ ನ್ಯಾಯದೇವತೆ: ಶಿವರಾಜ ಅಂಡಗಿ

ಶನಿದೇವ ಕರ್ಮಕ್ಕೆ ತಕ್ಕ ಫಲ ನೀಡುವ ನ್ಯಾಯದೇವತೆ: ಶಿವರಾಜ ಅಂಡಗಿ

ಕಾಳಗಿ, ಮೇ 20: ಶನಿದೇವನು ನ್ಯಾಯಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡುವ ದೇವರಾಗಿದ್ದು, ಕರ್ಮಕ್ಕೆ ತಕ್ಕ ಫಲವನ್ನು ನೀಡುವವನೇ ಶನಿದೇವ ಎಂದು ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.

ತಾಲ್ಲೂಕಿನ ಟೆಂಗಳಿ ಗ್ರಾಮದ ಶ್ರೀ ಭೀಮೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಶನಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಶನಿದೇವನು ತಂದೆ-ತಾಯಿ ಎಂಬ ಭೇದಭಾವವಿಲ್ಲದೆ ಧರ್ಮದ ಮಾರ್ಗದಲ್ಲಿ ನಡೆದುಕೊಂಡವನು. ತನ್ನ ತಂದೆ ಸೂರ್ಯನಿಗೂ ಶಿಕ್ಷೆ ನೀಡಿದ್ದು ದ್ವೇಷದಿಂದಲ್ಲ, ಧರ್ಮಕ್ಕಾಗಿ. ಅಧರ್ಮ ಮಾಡಿದವರಿಗೆ ಶಿಕ್ಷೆ ಅನಿವಾರ್ಯ ಎಂಬ ಸಂದೇಶವನ್ನು ಶನಿದೇವನು ಸಾರಿದ್ದಾನೆ” ಎಂದು ತಿಳಿಸಿದರು.

“ಜನರಲ್ಲಿ ಶನಿದೇವರ ಕುರಿತು ಅನೇಕ ತಪ್ಪು ಕಲ್ಪನೆಗಳಿವೆ. ಮನೆಗಳಲ್ಲಿ ಶನಿದೇವರ ಭಾವಚಿತ್ರ ಇಡಬಾರದು ಎಂಬ ಭಯವೂ ಇದೆ. ಆದರೆ ಶನಿದೇವನು ಸುಮ್ಮನೆ ಯಾರನ್ನೂ ಕಾಡುವುದಿಲ್ಲ. ಕೆಟ್ಟ ಕೆಲಸ ಮಾಡಿದವರಿಗೆ ಮಾತ್ರ ಶಿಕ್ಷೆ ನೀಡುವುದು ಅವನ ನಿಯಮ. ಆದ್ದರಿಂದ ಎಲ್ಲರೂ ಸಾಧ್ಯವಾದಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ, ನೊಂದವರಿಗೆ ಸಹಾಯ ಸಹಕಾರ ನೀಡಬೇಕು” ಎಂದು ಹೇಳಿದರು.

ಕೆಲವು ವರ್ಷಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾದ ‘ಶನಿ ಮಹಾತ್ಮೆ’ ಧಾರಾವಾಹಿಯನ್ನು ನೆನಪಿಸಿಕೊಂಡ ಅವರು, ಶನಿದೇವನ ತತ್ವಗಳು ಇಂದಿಗೂ ಜನಜೀವನಕ್ಕೆ ಮಾರ್ಗದರ್ಶಿಯಾಗಿವೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಭೀಮೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿರೇಂದ್ರ ವಾಲಿ ಶನಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹಿರಿಯ ಹಾರ್ಮೋನಿಯಂ ಕಲಾವಿದ ವಿಶ್ವನಾಥ ಬಾಳದೆ ಮಾಲಾರ್ಪಣೆ ಮಾಡಿದರು. ತಬಲಾ ಕಲಾವಿದ ಚಂದ್ರಶೇಖರ ಎಲ್ಹೇರಿ ಕಾಯಿ-ಕರ್ಪೂರ ಅರ್ಪಿಸಿದರು.

ಭೀಮರಾಯ ನೀಲಹಳ್ಳಿ, ಗುಂಡುರಾಯ ಸರಡಗಿ, ಬಸವರಾಜ ಕಡಲಿ, ಡಾ. ವಿವೇಕಾನಂದ ಬುಳ್ಳಾ, ಸಂಗನಬಸವ ಬೂದನಮಠ, ರೇವಶೆಟ್ಟಿ ತುಪ್ಪದ, ಶರಣಯ್ಯ ಮಠಪತಿ, ಜಗದೀಶ ಮಠಪತಿ, ಬಾರಿಗಿಡದ ಸೇರಿದಂತೆ ಹಲವರು ಉಪಸ್ಥಿತರಿದ್ದರು.