ಕಲಾಮಂಡಲದಲ್ಲಿ ವೈಭವದ ‘ನೃತ್ಯೋತ್ಸವ’ ವಿವಿಧ ಕಲಾತಂಡಗಳ ಮನಮೋಹಕ ಪ್ರದರ್ಶನಕ್ಕೆ ಪ್ರೇಕ್ಷಕರು ಫಿದಾ
ಕಲಾಮಂಡಲದಲ್ಲಿ ವೈಭವದ ‘ನೃತ್ಯೋತ್ಸವ’
ವಿವಿಧ ಕಲಾತಂಡಗಳ ಮನಮೋಹಕ ಪ್ರದರ್ಶನಕ್ಕೆ ಪ್ರೇಕ್ಷಕರು ಫಿದಾ
ಕಲಬುರಗಿ: ನಗರದ ಅನ್ನಪೂರ್ಣ ಕ್ರಾಸ್ ಬಳಿಯ ಕಲಾಮಂಡಲದಲ್ಲಿ ಭಾನುವಾರ ಸಂಜೆ ಜ್ಞಾನದೀಪ ನೃತ್ಯ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ‘ನೃತ್ಯೋತ್ಸವ’ ಕಾರ್ಯಕ್ರಮವು ಅತ್ಯಂತ ವೈಭವ ಹಾಗೂ ಸಂಭ್ರಮದಿಂದ ಜರುಗಿತು.
ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಲಕ್ಷ್ಮಿ ದತ್ತಾತ್ರಯ ಪಾಟೀಲ್ ರೇವೂರ ಉದ್ಘಾಟಿಸಿ ಮಾತನಾಡಿ, “ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ನೃತ್ಯ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಕಲಾವಿದರಾದ ಶ್ರೀ ಸೂರ್ಯಕಾಂತ ನಂದೂರ ಹಾಗೂ ಹಿರಿಯ ನೃತ್ಯ ಕಲಾವಿದ ಶ್ರೀ ಯಂಕಪ್ಪ (ಅಕ್ಷಯ್) ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ತಂದರು. ಗೌರವ ಅತಿಥಿಯಾಗಿ ನೃತ್ಯ ಕಲಾವಿದ ಶ್ರೀ ಸೂರಜ್ ಲೋನಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಲೇಖಕಿ ಶ್ರೀಮತಿ ಪಲ್ಲವಿ ಆರ್. ಕುಲಕರ್ಣಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅವರ ಸಾಹಿತ್ಯ ಸೇವೆಯನ್ನು ಅತಿಥಿಗಳು ಶ್ಲಾಘಿಸಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಹೆಸರಾಂತ ಕಲಾತಂಡಗಳಿಂದ ಭರತನಾಟ್ಯ, ಜಾನಪದ ಹಾಗೂ ಸಮೂಹ ನೃತ್ಯಗಳ ವೈವಿಧ್ಯಮಯ ಪ್ರದರ್ಶನಗಳು ನಡೆದವು. ಪಂಚಾಕ್ಷರಿ ಸಂಗೀತ ಕಲಾತಂಡ, ಪ್ರಿಯಾ ನೃತ್ಯಾಲಯ, ವಿ.ವಿ.ಎನ್ ನೃತ್ಯ ಕಲಾತಂಡ, ಸೂರಜ್ ಲೋನಾರ್ ಕಲಾತಂಡ, ಶಾಂತಲೇ ಸಾಂಸ್ಕೃತಿಕ ನೃತ್ಯ ತಂಡ, ಜ್ಯೋತಿ ಜಾನಪದ ಕಲಾತಂಡ, ಮನಸ್ವಿ ಸಾಂಸ್ಕೃತಿಕ ನಾಟ್ಯ ಕಲಾತಂಡ ಹಾಗೂ ಜ್ಞಾನ ಸುರಭಿ ಕಲಾತಂಡಗಳ ಕಲಾವಿದರು ತಮ್ಮ ಅದ್ಭುತ ನೃತ್ಯ ಚಾತುರ್ಯದ ಮೂಲಕ ಪ್ರೇಕ್ಷಕರ ಮನಗೆದ್ದರು.
ಕಾರ್ಯಕ್ರಮವನ್ನು ಶರಣಬಸಪ್ಪ ಬಮನಳ್ಳಿ ನಿರೂಪಿಸಿದರು. ಸಂಸ್ಥೆಯ ಅಧ್ಯಕ್ಷ ಪ್ರೇಮ ಭಾವಿಮನಿ ಹಾಗೂ ಕಾರ್ಯದರ್ಶಿ ಶ್ವೇತಾ ಕಟ್ಟಿಮನಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
