ಸಚಿವ ಡಿ.ಸುಧಾಕರ್ ನಿಧನ

ಸಚಿವ ಡಿ.ಸುಧಾಕರ್ ನಿಧನ

ಸಚಿವ ಡಿ.ಸುಧಾಕರ್ ನಿಧನ 

ಚಿತ್ರದುರ್ಗ ಜಿಲ್ಲೆಗೆ ಸೋಮವಾರ ಸಾರ್ವಜನಿಕ ರಜೆ, ರಾಜ್ಯಾದ್ಯಂತ ಮೂರು ದಿನ ಶೋಕಾಚರಣೆ

ಬೆಂಗಳೂರು/ಚಿತ್ರದುರ್ಗ: ಕರ್ನಾಟಕ ಸರ್ಕಾರದ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಹಿರಿಯ ರಾಜಕೀಯ ನಾಯಕ ಡಿ.ಸುಧಾಕರ್ ಅವರು ಅನಾರೋಗ್ಯದಿಂದ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ವೈದ್ಯರ ನಿರಂತರ ಪ್ರಯತ್ನಗಳ ನಡುವೆಯೂ ಇಂದು ಕೊನೆಯುಸಿರೆಳೆದಿದ್ದಾರೆ.

ಜನಸೇವೆಯನ್ನೇ ಧ್ಯೇಯವನ್ನಾಗಿ ಮಾಡಿಕೊಂಡಿದ್ದ ಡಿ.ಸುಧಾಕರ್ ಅವರು ಸಾರ್ವಜನಿಕ ಬದುಕಿನಲ್ಲಿ ಅಪಾರ ಕಾಳಜಿ, ಬದ್ಧತೆ ಮತ್ತು ಸರಳತೆಯಿಂದ ಗುರುತಿಸಿಕೊಂಡಿದ್ದರು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಅಭಿವೃದ್ಧಿ ಪರ ಚಿಂತನೆಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ರಾಜ್ಯ ರಾಜಕೀಯದಲ್ಲಿ ಪ್ರಾಮಾಣಿಕ ಹಾಗೂ ಜನಪರ ನಾಯಕರೆಂದು ಹೆಸರುವಾಸಿಯಾಗಿದ್ದರು.

 ಡಿ.ಸುಧಾಕರ್ ಅವರ ನಿಧನದ ಗೌರವಾರ್ಥ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಪ್ರಕಟಣೆ ಪ್ರಕಾರ, ದಿನಾಂಕ 11.05.2026ರ ಸೋಮವಾರ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಸಾರ್ವಜನಿಕ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳಿಗೆ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಜೊತೆಗೆ, ನೆಗೋಷಿಯಬಲ್ ಇನ್ಸುಮೆಂಟ್ ಆಕ್ಟ್–1881ರ ಅನ್ವಯವೂ ಈ ದಿನವನ್ನು ಸಾರ್ವಜನಿಕ ರಜೆಯಾಗಿ ಘೋಷಿಸಲಾಗಿದೆ.

ಇದರೊಂದಿಗೆ, ದಿನಾಂಕ 10.05.2026ರಿಂದ 12.05.2026ರವರೆಗೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ನಡೆಯಲಿದೆ. ಈ ಅವಧಿಯಲ್ಲಿ ರಾಜ್ಯದಾದ್ಯಂತ ಯಾವುದೇ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳನ್ನು ನಡೆಸದಂತೆ ಸೂಚಿಸಲಾಗಿದೆ.

ಶೋಕಾಚರಣೆಯ ಭಾಗವಾಗಿ, ನಿಯಮಿತವಾಗಿ ರಾಷ್ಟ್ರಧ್ವಜ ಹಾರಿಸುವ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.

ಮೃತ ನಾಯಕ ಡಿ.ಸುಧಾಕರ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲು ಸರ್ಕಾರ ಆದೇಶಿಸಿದೆ.

ಡಿ.ಸುಧಾಕರ್ ಅವರ ಅಗಲಿಕೆಯಿಂದ ರಾಜ್ಯ ರಾಜಕೀಯಕ್ಕೆ ಅಪಾರ ನಷ್ಟ ಉಂಟಾಗಿದ್ದು, ಸರ್ಕಾರದ ಈ ಕ್ರಮವು ಅವರಿಗೆ ಸಲ್ಲಿಸಿದ ಗೌರವದ ಸಂಕೇತವಾಗಿದೆ.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಕುಟುಂಬ ಸದಸ್ಯರು, ಬಂಧುಬಳಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಹಲವರು ಸಂತಾಪ ಸೂಚಿಸಿದ್ದಾರೆ.