ಕೌಶಲ್ಯವೇ ಉದ್ಯೋಗದ ಮೆಟ್ಟಿಲು: 65 ವಿದ್ಯಾರ್ಥಿನಿಯರಿಗೆ ಉದ್ಯೋಗಾರ್ಹತಾ ತರಬೇತಿ ಯಶಸ್ವಿ

ಕೌಶಲ್ಯವೇ ಉದ್ಯೋಗದ ಮೆಟ್ಟಿಲು: 65 ವಿದ್ಯಾರ್ಥಿನಿಯರಿಗೆ ಉದ್ಯೋಗಾರ್ಹತಾ ತರಬೇತಿ ಯಶಸ್ವಿ

ಕೌಶಲ್ಯವೇ ಉದ್ಯೋಗದ ಮೆಟ್ಟಿಲು: 65 ವಿದ್ಯಾರ್ಥಿನಿಯರಿಗೆ ಉದ್ಯೋಗಾರ್ಹತಾ ತರಬೇತಿ ಯಶಸ್ವಿ

ಕಲಬುರಗಿ: ವಿದ್ಯಾರ್ಥಿನಿಯರಲ್ಲಿ ಉದ್ಯೋಗಾರ್ಹತೆ, ವೃತ್ತಿಪರ ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವ ಉದ್ದೇಶದಿಂದ ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇನ್ಫೋಸಿಸ್ ಫೌಂಡೇಶನ್ ಮತ್ತು ಐಸಿಟಿ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಫಿನಿಶಿಂಗ್ ಸ್ಕೂಲ್ ಫಾರ್ ಎಂಪ್ಲಾಯಬಿಲಿಟಿ – ಫೇಸ್ III’ ಯೋಜನೆಯಡಿ 15 ದಿನಗಳ ಉದ್ಯೋಗಾರ್ಹತಾ ಕೌಶಲ್ಯ ತರಬೇತಿ ಕಾರ್ಯಕ್ರಮವು ನವೆಂಬರ್ 7ರಂದು ಸಮಾರೋಪಗೊಂಡಿತು.

ಅಕ್ಟೋಬರ್ 22ರಿಂದ ನವೆಂಬರ್ 7ರವರೆಗೆ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ಬಿ.ಎ. ಮತ್ತು ಬಿ.ಕಾಂ. ವಿಭಾಗಗಳ ಒಟ್ಟು 65 ವಿದ್ಯಾರ್ಥಿನಿಯರು ಭಾಗವಹಿಸಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದರು.

ಸಮಾರೋಪ ಸಮಾರಂಭವು ಬಿ.ಕಾಂ. ವಿದ್ಯಾರ್ಥಿನಿಯರ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ಶ್ರೀಮತಿ ಶ್ವೇತಾ ಕೋಟೆ ಅವರು ಸ್ವಾಗತಿಸಿದರು. ಗಣ್ಯರು ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾದ ಶ್ರೀ ಪವನ ಸರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪಡೆಯಲು ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗುವುದಿಲ್ಲ. ಸಂವಹನ ಕೌಶಲ್ಯ, ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಜೀವನ ಕೌಶಲ್ಯಗಳೂ ಅತ್ಯಂತ ಅಗತ್ಯವಾಗಿವೆ. ಇಂತಹ ತರಬೇತಿಗಳು ವಿದ್ಯಾರ್ಥಿನಿಯರಲ್ಲಿ ಅಗತ್ಯ ಸಾಮರ್ಥ್ಯಗಳನ್ನು ಬೆಳೆಸುವ ಮೂಲಕ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ತರಬೇತುದಾರರಾದ ಸ್ನೇಹಾ ಕಲಾಲ್ ಅವರು ತಮ್ಮ 15 ದಿನಗಳ ತರಬೇತಿಯ ಅನುಭವವನ್ನು ಹಂಚಿಕೊಂಡು, ವಿದ್ಯಾರ್ಥಿನಿಯರು ತರಬೇತಿಯಲ್ಲಿ ಕಲಿತ ಕೌಶಲ್ಯಗಳನ್ನು ತಮ್ಮ ಶೈಕ್ಷಣಿಕ ಮತ್ತು ವೃತ್ತಿಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ್ ಪತ್ತಾರ್ ಅವರು ಮಾತನಾಡಿ, ವಿದ್ಯಾರ್ಥಿನಿಯರು ಇಂತಹ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಕಲಿತ ಜ್ಞಾನ ಮತ್ತು ಕೌಶಲ್ಯಗಳನ್ನು ವೃತ್ತಿಜೀವನದಲ್ಲಿ ಬಳಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೋರ್ಸ್ ಸಂಯೋಜಕರಾದ ಶ್ರೀಮತಿ ಶ್ವೇತಾ ಕೋಟೆ, ಐಕ್ಯೂಎಸಿ ಸಂಯೋಜಕರಾದ ಡಾ. ಶಿವರಾಜ್ ಗೌನಳ್ಳಿ, ಮಾರ್ಗದರ್ಶಕರಾದ ಡಾ. ನಾಗರತ್ನ ಮತ್ತು ಡಾ. ಕನ್ಯಾಕುಮಾರಿ ವಿ., ಬೋಧಕ ಸಿಬ್ಬಂದಿಗಳಾದ ಶ್ರೀಮತಿ ಶಿವಲೀಲಾ ದೊತ್ರೆ, ಡಾ. ಶ್ರೀದೇವಿ ಸರಡಗಿ, ಶ್ರೀಮತಿ ಗೀತಾ ಪಾಟೀಲ ಹಾಗೂ ಶ್ರೀಮತಿ ಕವಿತಾ ಎ. ಉಪಸ್ಥಿತರಿದ್ದರು.

ಬಿ.ಎ. ವಿದ್ಯಾರ್ಥಿನಿ ದಿವ್ಯಾ ವಂದನಾರ್ಪಣೆ ಸಲ್ಲಿಸಿದರು. ಬಿ.ಕಾಂ. ವಿದ್ಯಾರ್ಥಿನಿ ಶೆರಿಲ್ ಕಾರ್ಯಕ್ರಮ ನಿರೂಪಿಸಿದರು.