ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ: ಡಾ. ಬೈರಮಂಗಲ ರಾಮೇಗೌಡ
ಕನ್ನಡ ಭಾಷೆಯ ಗೌರವ ಮತ್ತು ಬಳಕೆ ಪ್ರತಿಯೊಬ್ಬ ಕನ್ನಡಿಗನ ಹೊಣೆ
ಕನ್ನಡವನ್ನು ಕಡ್ಡಾಯವಾಗಿ ಕಲಿಸುವ ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ: ಡಾ. ಬೈರಮಂಗಲ ರಾಮೇಗೌಡ
ಬೆಂಗಳೂರು: ಕನ್ನಡ ಭಾಷೆ, ನಾಡು, ನುಡಿ ಮತ್ತು ಸಂಸ್ಕೃತಿಯ ಮಹತ್ವವನ್ನು ಸಾರುವ ಉದ್ದೇಶದಿಂದ ಶ್ರೀ ಕೃಷ್ಣ ಪದವಿ ಕಾಲೇಜಿನ ನವ ಚೈತನ್ಯ ಕನ್ನಡ ಬಳಗದ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ನವೆಂಬರ್ 6ರಂದು ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿ.ಎಂ.ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ಮಾತನಾಡಿ, ಕರ್ನಾಟಕದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಯುವುದರ ಜೊತೆಗೆ ಈ ನಾಡಿನ ನೆಲ, ಜಲ ಮತ್ತು ಸಂಸ್ಕೃತಿಯನ್ನು ಗೌರವಿಸಬೇಕು ಎಂದರು.
ಇಂದಿನ ದಿನಗಳಲ್ಲಿ ಹಲವು ಶಿಕ್ಷಣ ಸಂಸ್ಥೆಗಳು ಕನ್ನಡ ಭಾಷೆಯನ್ನು ಕಡೆಗಣಿಸಿ, ಇಂಗ್ಲಿಷ್ ಭಾಷಾ ಶಿಕ್ಷಣವನ್ನೇ ವ್ಯಾಪಾರದ ಸಾಧನವನ್ನಾಗಿಸಿಕೊಂಡಿರುವುದು ವಿಷಾದನೀಯ. ಇಂತಹ ಸಂದರ್ಭದಲ್ಲಿ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿವರೆಗೂ ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿರುವ ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇಂಗ್ಲಿಷ್ ಶಿಕ್ಷಣದ ಹೆಸರಿನಲ್ಲಿ ಪೋಷಕರಿಗೆ ತಪ್ಪು ಭರವಸೆ ನೀಡುವ ಸಂಸ್ಥೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣ ಸಮೂಹ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ. ರುಕ್ಮಾಂಗದ ನಾಯ್ಡು ಮಾತನಾಡಿ, ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡದಲ್ಲಿಯೇ ವ್ಯವಹರಿಸುವ ಮೂಲಕ ಭಾಷೆಗೆ ಗೌರವ ನೀಡಬೇಕು ಎಂದರು. . ಶಿಕ್ಷಣದ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳು ಮತ್ತು ಯುವಜನತೆ ಕನ್ನಡದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಸ್ನಾತಕೋತ್ತರ ಪದವಿ ಕೇಂದ್ರದ ನಿರ್ದೇಶಕ ಪ್ರೊ. ವೇಣುಗೋಪಾಲ್, ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಪ್ರೊ. ಎಸ್.ಪಿ. ಮನೋಹರ್, ಶಾಲಾ ಶೈಕ್ಷಣಿಕ ನಿರ್ದೇಶಕಿ ಶಾಂತಲಾ ರವಿಶಂಕರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಉಷಾಕುಮಾರಿ, ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸ್ ರೆಡ್ಡಿ, ವಿಜ್ಞಾನ ವಿಭಾಗದ ಪ್ರಾಂಶುಪಾಲ ಮಂಜುನಾಥ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಚೌಡಯ್ಯ ಸೇರಿದಂತೆ ಉಪಸ್ಥಿತರಿದ್ದರು.

