ಉದ್ಯೋಗಾರ್ಹತಾ ಕೌಶಲ್ಯ ತರಬೇತಿಯಿಂದ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ವೃದ್ಧಿ : ಪವನ್

ಉದ್ಯೋಗಾರ್ಹತಾ ಕೌಶಲ್ಯ ತರಬೇತಿಯಿಂದ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ವೃದ್ಧಿ : ಪವನ್

ಉದ್ಯೋಗಾರ್ಹತಾ ಕೌಶಲ್ಯ ತರಬೇತಿಯಿಂದ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ವೃದ್ಧಿ : ಪವನ್ 

ಕಲಬುರಗಿ: ಕೌಶಲ್ಯಾಭಿವೃದ್ಧಿ ತರಬೇತಿಗಳಿಂದ ಜೀವನ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪವನ್ ಹೇಳಿದರು.

ನಗರದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇನ್ಫೋಸಿಸ್ ಫೌಂಡೇಶನ್ ಹಾಗೂ ಐಸಿಟಿ ಅಕಾಡೆಮಿಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 15 ದಿನಗಳ ಉದ್ಯೋಗಾರ್ಹತಾ ಕೌಶಲ್ಯ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನ. 7ರಂದು ಜರುಗಿತು.

ಪವನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕೌಶಲ್ಯಾಭಿವೃದ್ಧಿ ತರಬೇತಿಗಳು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ್ಯ ಹಾಗೂ ಜೀವನ ಕೌಶಲ್ಯಗಳನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಉದ್ಯೋಗ ಪಡೆಯಲು ಅಗತ್ಯವಿರುವ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಇವು ಸಹಕಾರಿಯಾಗಿವೆ ಎಂದರು.

ತರಬೇತಿ ನೀಡಿದ ಸ್ನೇಹಾ ಕಲಾಲ್ ಮಾತನಾಡಿ , ವಿದ್ಯಾರ್ಥಿನಿಯರು ಕಲಿತ ಕೌಶಲ್ಯಗಳನ್ನು ತಮ್ಮ ಶೈಕ್ಷಣಿಕ ಹಾಗೂ ವೃತ್ತಿಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು 15 ದಿನಗಳ ತರಬೇತಿಯ ಅನುಭವ ಹಂಚಿಕೊಂಡು

 ಮಹಾವಿದ್ಯಾಲಯದ ನ್ಯಾಕ್ ಸಂಯೋಜಕ ಡಾ. ಮೋಹನರಾಜ್ ಪತ್ತಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ವೃತ್ತಿಜೀವನ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತರಬೇತಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿನಿಯರಾದ ಶೃದ್ಧಾ, ಕೀರ್ತಿ, ದಿವ್ಯಾ, ಅನುರಾಧ, ಅಶ್ವಿನಿ ಹಾಗೂ ಶೆರಿಲ್ ತಮ್ಮ ಅನುಭವ ಹಂಚಿಕೊಂಡು, ಮಹಾವಿದ್ಯಾಲಯದಲ್ಲಿ ಇಂತಹ ತರಬೇತಿ ಆಯೋಜಿಸಿ ಅವಕಾಶ ಕಲ್ಪಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

ಫಿನಿಶಿಂಗ್ ಸ್ಕೂಲ್ ಫಾರ್ ಎಂಪ್ಲಾಯಬಿಲಿಟಿ–ಫೇಸ್ III’ ಯೋಜನೆಯಡಿ ಅ. 22ರಿಂದ ನ. 7ರವರೆಗೆ ನಡೆದ ಈ ತರಬೇತಿಯಲ್ಲಿ ಅಂತಿಮ ವರ್ಷದ ಬಿ.ಎ. ಮತ್ತು ಬಿ.ಕಾಂ. ವಿಭಾಗಗಳ ಒಟ್ಟು 65 ವಿದ್ಯಾರ್ಥಿನಿಯರು ಭಾಗವಹಿಸಿ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದರು.

ಕಾರ್ಯಕ್ರಮದಲ್ಲಿ ತರಬೇತಿ ಸಂಯೋಜಕಿ ಶ್ವೇತಾ ಕೋಟೆ, ಐಕ್ಯೂಎಸಿ ಸಂಯೋಜಕ ಡಾ. ಶಿವರಾಜ್ ಗೌನಳ್ಳಿ, ಮಾರ್ಗದರ್ಶಕರಾದ ಡಾ. ನಾಗರತ್ನ ಹಾಗೂ ಡಾ. ಕನ್ಯಾಕುಮಾರಿ ವಿ., ಬೋಧಕ ಸಿಬ್ಬಂದಿಗಳಾದ ಶಿವಲೀಲಾ ದೊತ್ರೆ, ಡಾ. ಶ್ರೀದೇವಿ ಸರಡಗಿ, ಗೀತಾ ಪಾಟೀಲ ಮತ್ತು ಕವಿತಾ ಎ. ಉಪಸ್ಥಿತರಿದ್ದರು. ಬಿ.ಎ. ವಿದ್ಯಾರ್ಥಿನಿ ದಿವ್ಯಾ ವಂದಿಸಿದರು. ಬಿ.ಕಾಂ. ವಿದ್ಯಾರ್ಥಿನಿ ಶೆರಿಲ್ ನಿರೂಪಿಸಿದರು.

ವಿದ್ಯಾರ್ಥಿನಿಯರಲ್ಲಿ ಉದ್ಯೋಗಾರ್ಹತೆ, ವೃತ್ತಿಪರ ಕೌಶಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವಲ್ಲಿ ಈ ತರಬೇತಿ ಕಾರ್ಯಕ್ರಮ ಮಹತ್ವದ ಕೊಡುಗೆ ನೀಡಿದೆ ಎಂದು ಡಾ. ಮೋಹನರಾಜ್ ಪತ್ತಾರ್ ತಿಳಿಸಿದ್ದಾರೆ.