ಮಸೂತೆ ಅವರ ಇವ ನಮ್ಮ:

ಮಸೂತೆ ಅವರ  ಇವ ನಮ್ಮ:

ಮಸೂತೆ ಯವರ ಇವ ನಮ್ಮ 

ಶರಣ ಬಂಧುಗಳಾದ ಶರಣ ಡಾ. ಶ್ರೀಶೈಲ ಜಿ. ಮಸೂತೆಯವರು ಬಸವವಾದಿ ಶರಣರ ತತ್ತ್ವಗಳನ್ನು ಅಕ್ಷರಸ: ಮೈಗೂಡಿಸಿಕೊಂಡು ತತ್ತ್ವದ ಹಾದಿಯಲ್ಲಿ ಅತ್ಯಂತ ಅಪರೂಪದ ಶರಣರು.ಬಸವತತ್ತ್ವದ ದಾರಿಯಲ್ಲಿ ನಡೆದವರಿಗೆ ಬೇಧದ ಬೇರನ್ನೆ ಕಿತ್ತೆಸೆದಿರುತ್ತಾರೆ. ಶರಣ ಡಾ. ಶ್ರೀಶೈಲ ಜಿ. ಮಸೂತೆಯವರು ಬೇಧವಿಲ್ಲದ ಜೀವನವನ್ನು ನಡೆಸುವ ಅಪರೂಪದ ಬಸವ ಸಾಕಾರ ಮೂರ್ತಿಗಳು.

ಈ 'ಇವ ನಮ್ಮವ' ಗ್ರಂಥ ಅನೇಕ ವಿಚಾರವಾದಿ ಲೇಖಕರ ಲೇಖನಗಳ ಸಂಪಾದನೆಯಾಗಿದೆ. ಏಳು ಭಾಗಗಳಿಂದ ಕೂಡಿರುವ ಈ ಗ್ರಂಥದಲ್ಲಿ ಅಂತರ್ಜಾತಿ ವಿವಾಹವಾಗಿ ಜೀವನ ಸಾಗಿಸುತ್ತಿರುವವರ ಮತ್ತು ಮಠಾಧೀಶರ ಸಂದರ್ಶನಗಳೂ ಸೇರಿದ್ದರಿಂದ ಇದೊಂದು ವಿಶಿಷ್ಟವಾದ ಗ್ರಂಥವಾಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.

ಮೊದಲ ಅಧ್ಯಾಯವು ವಿವಿಧ ಲೇಖಕರ ಲೇಖನಗಳಿಂದ ಕೂಡಿದೆ. "ನಮ್ಮ ಸಮಾಜದ ಶೇಕಡಾ 25ರಷ್ಟಿರುವ ದಲಿತರು ಮತ್ತು ಆದಿವಾಸಿಗಳನ್ನು ಸನಾತನೆ ಪ್ರಣೀತ ಚಾತುರ್ವಣ್ರದಲ್ಲಿ ಸೇರಿಸಿಕೊಂಡಿಲ್ಲ. ಈ ವಿಭಜನೆಯ ನೋವನ್ನು ಭಾರತದ 30 ಕೋಟಿ ದಲಿತರು ಮತ್ತು ಆದಿವಾಸಿಗಳು ಇಂದಿಗೂ ಅನುಭವಿಸುತ್ತಿದ್ದಾರೆ" ಎಂದು ಟಿ.ಆರ್. ಚಂದ್ರಶೇಖರ್ ಅವರು ತಿಳಿಸಿದ್ದಾರೆ. ಈ ವಾಸ್ತವ ನೆನಪಾದಾಗೆಲ್ಲ ನಮ್ಮ ಸಮಾಜ ಎಷ್ಟೊಂದು ಅನಾಗರಿಕವಾಗಿದೆ ಎಂಬ ಭಾವ ಮೂಡದೆ ಇರದು. ಸುಂದರವಾದ ಬಸವ ಸಮಾಜ ನಮಗೆ ಎಂದು ದೊರೆಯುವುದೋ ಗೊತ್ತಿಲ್ಲ. 30 ಕೋಟಿ ದಲಿತರು ಮತ್ತು ಆದಿವಾಸಿಗಳು ಅಮೆರಿಕ, ರಷ್ಯಾ, ಫ್ರಾನ್ಸ್, ಇಂಗ್ಲೆಂಡ್ ದೇಶಗಳ ಜನಸಂಖ್ಯೆಗಿಂತ ಹೆಚ್ಚಾಗಿದ್ದಾರೆ. ಇಂಥ ತುಳಿತಕ್ಕೊಳಗಾದವರಿಗಾಗಿ ಬಸವಾದಿ ಶರಣರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಬಸವಣ್ಣನವರ ಅನುಯಾಯಿಗಳು ಎಂದು ಹೇಳುವ ನಾವು ಏನು ಮಾಡುತ್ತಿದ್ದೇವೆ? ಯಾರ ಪರ ಇದ್ದೇವೆ? ಎಂಬ ಪ್ರಶ್ನೆಗಳು ಸಹಜವಾಗಿಯೆ ಏಳುತ್ತವೆ.

"ವಿಶೇಷವಾಗಿ ಬಸವಣ್ಣನವರ ಅನುಯಾಯಿಗಳು ಭಾವಜೀವಿಗಳು. ಶರಣರಂತೆ ಚಿಕಿತ್ಸಕ ಬುದ್ದಿ, ವಿಶ್ಲೇಷನಾತ್ಮಕ ಕೌಶಲ್ಯ, ಬಂಡಾಯದ ಗುಣ ಎಲ್ಲವೂ ಅವರಲ್ಲಿಇರಬೇಕಾಗುತ್ತದೆ. ಆದರೆ ಬಹುಶಃ ಈಗ ಈ ಎಲ್ಲ ಗುಣಗಳ ಕೊರತೆ ಅವರಲ್ಲಿದೆ" ಎಂದು ಜೆ.ಎಸ್. ಪಾಟೀಲರು ವಿಶ್ಲೇಷಿಸುತ್ತಾರೆ. ಅವರ ನಿಖರವಾದ ಚಿಂತನೆಗಳು ನಮ್ಮ ಮನಸ್ಸನ್ನು ಕಲಕದಿದ್ದರೆ ನಾವು ಮನುಷ್ಯರೇ ಅಲ್ಲ. ಶರಣರ ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ನಾವು ಸಂಪೂರ್ಣವಾಗಿ ಸೋತಿದ್ದೇವೆ. ಅವರ ಕ್ರಾಂತಿಕಾರಿ ವಿಚಾರಗಳು ಇಡೀ ಜಗತ್ತಿನ ಸ್ವರೂಪವನ್ನೇ ಬದಲಾಯಿಸಿ ಕೊಲೆ, ಸುಲಿಗೆ ಮತ್ತು ಯುದ್ಧಗಳಿಲ್ಲಿ ಹೊಸ ಜಗತ್ತನ್ನು ರೂಪಿಸುವ ಶಕ್ತಿಯನ್ನು ಹೊಂದಿವೆ. ಅವರ ತತ್ತ್ವಗಳು ಹೇಡಿಗಳ ಕೈಯಲ್ಲಿ ವಜ್ರಾಯುಧ ಕೊಟ್ಟಂತೆ ಆಗಿದೆ. ಶರಣರ ಚಿಂತನಾಕ್ರಮವನ್ನು ಅರಿತುಕೊಳ್ಳುವ ಶಕ್ತಿ ನಮಗೆ ಎಂದು ಬರುವುದೊ ಗೊತ್ತಿಲ್ಲ.

"ಬಸವಣ್ಣನವರ "ಇವ ನಮ್ಮವ..” ವಿಚಾರ ಧಾರೆ ಕೇವಲ ಒಂದು ಸಾಲಲ್ಲ. ಅದು ಮಾನವ ಧರ್ಮದ ಹೆದ್ದಾರಿ" ಎಂದು ಪಂಚಾಕ್ಷರಿ ಹಳೆಬೀಡು ಅವರು ಬರೆದಿದ್ದಾರೆ." ನಿಜವಾಗಿಯೂ ಇದು ಮಾನವ ಧರ್ಮಕ್ಕೆ ಹೆದ್ದಾರಿ ಆಗಿದೆ. ಈ ಒಳಗೊಳ್ಳುವ ಸಂಸ್ಕೃತಿಯ ಮೂಲಕವೇ ಜಗತ್ತು ಮುನ್ನಡೆದಾಗ ಮಾತ್ರ ಹೊಸದೊಂದು ಜೀವನವಿಧಾನದ ಅರಿವಾಗುವುದು. ಮನುಷ್ಯರು ದ್ವೇಷ ಸಾಧಿಸುವುದಕ್ಕೆ. ಇನ್ನೊಬ್ಬರನ್ನು ಕೀಳಾಗಿ ನೋಡುವುದಕ್ಕೆ, ಯುದ್ಧದಲ್ಲಿ ಗೆಲ್ಲುವುದಕ್ಕೆ ಮತ್ತು ಸಾಯುವುದಕ್ಕೆ ಹುಟ್ಟಿಲ್ಲ. ಲೋಕವೇ ತಾನಾಗುವ ಮೂಲಕ ತನ್ನ ತಾನರಿದು ಸಕಲ ಜೀವಾತ್ಮರಿಗೆ ಲೇಸನೆ ಬಯಸುತ್ತ ಬಯಲಾಗುವ ಮಾರ್ಗವೇ ನಿಜವಾದ ಬಸವಮಾರ್ಗವಾಗಿದೆ.

"ವಚನಗಳೆಂದರೆ ನನ್ನನ್ನು ನಾನೇ ಕಂಡುಕೊಂಡ ಕನ್ನಡಿ” ಎಂದು ಎಸ್‌.ಜಿ. ಸಿದ್ದರಾಮಯ್ಯ ತಿಳಿಸಿದ್ದಾರೆ. "ಕೈಯಲ್ಲಿ ಕನ್ನಡಿ ಇರಲು ತನ್ನ ತಾ ನೋಡಬಾರದೆ? ಎಂದು ಕನ್ನಡಿ ಕಾಯಕದ ರೇಮಮ್ಮ ಹೇಳಿದ್ದಾಳೆ. ಬಸವಣ್ಣನವರು ನಮ್ಮ ಕೈಯಲ್ಲಿ ಕೊಟ್ಟ ಇಷ್ಟಲಿಂಗವೆಂಬ ಕನ್ನಡಿ ನಮ್ಮನ್ನೇ ತೋರಿಸುತ್ತದೆ. ನಾವು ದಿನನಿತ್ಯ ಬಳಸುವ ಕನ್ನಡಿಗಳು ನಮ್ಮ ಮುಖವನ್ನು ಮಾತ್ರ ತೋರಿಸುತ್ತವೆ. ಕನ್ನಡಿ ಕಾಯಕದ ಶರಣೆ ಹೇಳುವ ಈ ಮಾತು ಮತ್ತು ಎಸ್.ಜಿ. ಸಿದ್ದರಾಮಯ್ಯ ಅವರು ಅರಿತುಕೊಂಡ ಭಾವ ನಮಗೆ ಅರ್ಥವಾಗುವುದೆಂದು?

“ಬಸವಣ್ಣನವರು ಏಕವ್ಯಕ್ತಿಯಾಗಿ ಸಮಾಜ ಸುಧಾರಣೆಗೆ ಇಳಿದಿರದೆ ಎಲ್ಲ ಜನಸಮುದಾಯಗಳನ್ನು ಅಣಿನೆರೆಸಿ ದುಡಿಯುವ ಜನರಿಂದ ಮಾತನಾಡಲು ಹಚ್ಚಿದರು" ಎಂದು ಮೀನಾಕ್ಷಿ ಬಾಳಿ ಹೇಳಿದ್ದಾರೆ. ಬಸವಣ್ಣ ಒಬ್ಬ ವ್ಯಕ್ತಿ ಅಲ್ಲ. ಇಡೀ ಸಮೂಹ, ಒಟ್ಟಾರೆ ಮಾನವಕುಲದ ಪ್ರತೀಕ. ಇಡೀ ಜೀವಜಗತ್ತಿನ ಮೂರ್ತರೂಪ. ಹಿಮಾಲಯದಲ್ಲಿ, ಅರಣ್ಯದಲ್ಲಿ, ಗುಹೆಯಲ್ಲಿ ಬಸವಣ್ಣನವರ ತತ್ತ್ವಜ್ಞಾನ ಮೂಡಿ ಬಂದದ್ದಲ್ಲ. ಅಸಂಖ್ಯಾತ ಕಾಯಕಜೀವಿಗಳ ಅನುಭವದಿಂದ ಅವರು ಅನುಭಾವ ತತ್ತ್ವಜ್ಞಾನವನ್ನು ಸೃಷ್ಟಿಸಿ ಜಗಜ್ಯೋತಿಯಾದರು. ಬಸವಣ್ಣನವರೆಂದರೆ ಮಾನವಕುಲದ ಅನುಭವದ ಮಹಾಸಂಕೇತ. ಅನುಭವ ಎಂಬುದು ಮಕರಂದವಾದರೆ, ಅನುಭಾವ ಎಂಬುದು ಲಕ್ಷಾಂತರ ಹೂವುಗಳ ಮಕರಂದಿಂದ ಸೃಷ್ಟಿಯಾದ ಜೇನು. ಎಲ್ಲ ಮಕರಂದ ಕೂಡಿಸಿದರೆ ಜೇನು ಆಗುವುದಿಲ್ಲ. ಅದಾಗಲು ಬಸವಜ್ಞಾನವೆಂಬ ರಾಸಾಯನಿಕನಡೆಯಬೇಕು. ಆವಾಗ ದುಡಿಯುವ ಜನರ ಅನುಭವವು ಬಸವಜ್ಞಾನದ ಸ್ಪರ್ಶದಿಂದ ಅನುಭಾವದ ರೂಪು ಪಡೆಯುವುದು. ಹೀಗೆ ಬಸವಣ್ಣನವರು ಎಲ್ಲರೊಳಗೆ ಒಂದಾಗಿ ಅನನ್ಯವಾದುದನ್ನು ಸೃಷ್ಟಿಸಿದರು.

 ಸಹಬಾಳ್ವೆಯ ಸಹಜ ಬದುಕಿನಲ್ಲಿ ಮಾತ್ರ ಸಾಮಾಜಿಕ ಶಾಂತಿ ನೆಮ್ಮದಿ ಸ್ವಾಸ್ಥ್ಯ ಅಡಗಿದೆ ಎಂಬುದನ್ನು ಎತ್ತಿತೋರಿದ ಬಸವಣ್ಣನವರು" ಎಂದು ವೀರಣ್ಣ ರಾಜೂರ " ವಿವರಿಸಿದ್ದಾರೆ. ಮಾನವನ ಗುರಿಯು ಸಹಬಾಳ್ವೆಯೆ ಆಗಿರಬೇಕಾಗುತ್ತದೆ. ಸಹಬಾಳ್ವೆಯೆ ಸ್ವರ್ಗ, ಅದಿಲ್ಲದಿದ್ದರೆ ನರಕ. ಸ್ವರ್ಗ ನರಕಗಳು ಈ ಭೂಮಿಯ ಮೇಲೆಯೆ ಇವೆ. ವಿವರಿಸಿದ್ದಾರೆ. ಮಾನವನ ಗುರಿಯು ಸಹಬಾಳ್ವೆಯೆ ಆಗಿರಬೇಕಾಗುತ್ತದೆ. ಸಹಬಾಳ್ವೆಯ ಅವರೆಡೂ ಹುಟ್ಟುವುದು ನಮ್ಮ ಮನದ ಮೂಲಕ. ಅಯ್ಯಾ ಮತ್ತು ಎಲವೊಗಳು ನಮ್ಮ ಮನಸ್ಸಿನಿಂದಲೇ ಹುಟ್ಟುತ್ತವೆ. ಒಂದು ಸ್ವರ್ಗವನ್ನು ಸೃಷ್ಟಿಸಿದರೆ ಇನ್ನೊಂದು ನರಕವನ್ನು ಸೃಷ್ಟಿಸುತ್ತದೆ. ಹೀಗೆ ಬಸವ ತತ್ತ್ವ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಯ ತತ್ತ್ವವಾಗಿದೆ.

"ಲಿಂಗಾಯತವೂ ಹಿಂದುವಿನ ಭಾಗವಾಗಿ ವಿಲೀನಗೊಂಡಂತಾಗಿದೆ. ಲಿಂಗಾಯತವೂ ಒಂದು ಜಾತಿಯಾಗಿ ವರ್ತಿಸತೊಡಗಿದೆ" ಎಂದು ಮಹಾಂತಪ್ಪ ನಂದೂರ ಬೇಸರ ವ್ಯಕ್ತಪಡಿಸಿದ್ದಾರೆ. ಬಸವಾದಿ ಶರಣರು ಇಡೀ ವ್ಯವಸ್ಥೆಯಲ್ಲಿ ನೆಮ್ಮದಿ ಸಾಧಿಸಲು ಹೋರಾಡಿದರು. ಯಾರೊಬ್ಬರು ದುಃಖದಿಂದ ಮತ್ತು ಅವಮಾನದಿಂದ ನರಳಬಾರದು. ಅವರೆಲ್ಲ ಸಮತೆ ಮತ್ತು ಆತ್ಮಗೌರವದಿಂದ ಬದುಕಬೇಕು ಎಂಬ ಉದ್ದೇಶಕ್ಕಾಗಿ ಇಡೀ ಬದುಕನ್ನೇ ಮುಡಿಪಾಗಿಟ್ಟರು. ಮರಣವೆ ಮಹಾನವಮಿ ಎಂದು ಮಾನವ ಘನತೆಗಾಗಿ ಹೋರಾಡಿದರು. ಅವರ ತ್ಯಾಗದಿಂದ ನಾವು ಎದ್ದು ನಿಂತೆವು. ಆದರೆ ಅವರನ್ನೇ ಮರೆತುಬಿಟ್ಟೆವು. ಹೀಗಾಗಿ ಒಂದಿಲ್ಲೊಂದು ರೀತಿಯಿಂದ ಹಳೆಯ ಗುಲಾಮಗಿರಿಯ ಕಡೆಗೆ ವಾಲಿದೆವು.

"ಮನುಷ್ಯ ಯಾವತ್ತೂ ಸ್ವಾರ್ಥಿ. ಏನೇನೊ ಕಾರಣಗಳನ್ನು ಮುಂದೆ ಮಾಡಿ ಇವನಾರವ ಇವನಾರವ ಎಂಬ ವಿಷಬೀಜ ಬಿತ್ತುತ್ತಾನೆ" ಎಂದು ಬಿ.ಬಿ. ಪೂಜಾರಿ ನೋವು ತೋಡಿಕೊಂಡಿದ್ದಾರೆ. ಪೂಜಾರಿ ಅವರ ಮಾತು ಬಹಳ ಸತ್ಯವಾಗಿದೆ. ನಮ್ಮ ಸ್ವಾರ್ಥವು ನಮ್ಮನ್ನು ಆಳುತ್ತಿದೆ. ಹೀಗಾಗಿ ನಾವು ಮೌಲ್ಯಹೀನರಾಗುತ್ತಿದ್ದೇವೆ. ವಚನಗಳ ಆಳಕ್ಕೆ ಇಳಿಯುತ್ತಿಲ್ಲ. ಗಿಳಿಪಾಠದಲ್ಲೇ ನಮ್ಮ ಬದುಕು ಹೋಗುತ್ತಿದೆ.

"ಜಾತಿ ವ್ಯವಸ್ಥೆ ಬಗ್ಗೆ ಟೀಕೆಗಳನ್ನು ಭಾರತದಲ್ಲಿ ಆ ಕಾಲಕ್ಕಾಗಲೆ ಕೆಲವು ಚಿಂತಕರು ಮಾಡಿದ್ದರೂ ತನ್ನ ತಾನು ಕೀಳು ಜಾತಿಯವನನ್ನಾಗಿ ಕಂಡುಕೊಳ್ಳುವುದು ಬಸವಣ್ಣನವರು ಮಾತ್ರ." ಎಂದು ಶಶಿಕಾಂತ ಪಟ್ಟಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಬಹಳ ಮಹತ್ವದ ಮಾತು. ಕೆಳವರ್ಗೀಕರಣ ಮತ್ತು ಕೆಳಜಾತೀಕರಣವಾಗದೆ ನಾವು ಮಹತ್ವದ್ದನ್ನು ಸಾಧಿಸಲಾರೆವು. ಬಸವಣ್ಣನವರು ಜಗತ್ತಿಗೆ ಕಲಿಸಿದ ಬಹುದೊಡ್ಡ ಪಾಠವಿದು. ಅವರ ಬಳಿ ಎಲ್ಲವೂ ಇತ್ತು. ವರ್ಣ ವ್ಯವಸ್ಥೆಯಲ್ಲಿನ ಉನ್ನತ ಸ್ಥಾನ. ಉನ್ನತ ಹುದ್ದೆ, ಆನೆ, ಕುದುರೆ, ರಥ ಮತ್ತೆ ಏನೆಲ್ಲ ಸಂಪತ್ತನ್ನು ಅವರು ಹೊಂದಿದ್ದರು. ಆದರೆ ಅವರು ಎಲ್ಲವನ್ನೂ ತ್ಯಜಿಸಿ ಬಸವಳಿದವರ ಬಳಿ ಬಂದು, ಅವರಿಗೆ ಶಕ್ತಿಯಾಗಿ ಜೀವ ಸವೆಸಿದರು. ಆದರೆ ಇದೆಲ್ಲ ನಮ್ಮ ಅಂತಃಕರಣಕ್ಕೆ ಮುಟ್ಟುತ್ತಲೇ ಇಲ್ಲ"ವಚನಕಾರರ ಧರ್ಮವು ಸಾಂಸ್ಥಿಕ ಧರ್ಮವಾಗಿ, ಶರಣರು ಕಟ್ಟಿದ ಸಮುದಾಯವು ಹಲವು ಉಪಜಾತಿಗಳ ಜಾತಿ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿತು. ಎಂದು ರಾಜೇಂದ್ರ ಚೆನ್ನಿ ಹೇಳಿದ್ದಾರೆ. 12ನೇ ಶತಮಾನದ ವಚನ ಚಳವಳಿಯನ್ನು ಮನುವಾದಿಗಳು ಹತ್ತಿಕ್ಕಿದರು. ವಚನಕಟ್ಟುಗಳನ್ನು ಸುಟ್ಟರು. ಶರಣರ ಕೊಲೆ ಮಾಡಿದರು. ಮುಂಬರವ ದಿನಗಳಲ್ಲಿ ಶರಣರ ಚಳವಳಿ ಸ್ಥಗಿತಗೊಂಡು ಸಾಂಸ್ಥಿಕ ಧರ್ಮವಾಗಿ ಉಳಿಯಿತು. ಸಂಪ್ರದಾಯಗಳಿಗೆ ಸೀಮಿತವಾಯಿತು. ಅದನ್ನೇ ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೆವೆ.

"ತಮ್ಮ ಗಾಢವಾದ ಶಿವಭಕ್ತಿಯನ್ನೇ ಸಮಾಜ ಪರಿವರ್ತನೆಯ ಅಸ್ತ್ರವಾಗಿ ಬಳಸಿದ ಬಸವಣ್ಣ ಭಕ್ತಿಗೆ ಹೊಸ ಆಯಾಮ ಕೊಟ್ಟರು." ಎಂದಿದ್ದಾರೆ ಶಿವಕುಮಾರ್. ಹೌದು ಬಸವಣ್ಣನವರು ಭಕ್ತಿಯನ್ನು ಕ್ರಾಂತಿಯ ಎತ್ತರಕ್ಕೆ ಏರಿಸಿದರು. ಸಮೂಹ ಶಕ್ತಿ ಮತ್ತು ಸಮೂಹ ಜ್ಞಾನದ ಸಾಧನವಾಗಿಸಿದರು.

ಈ ಪುಸ್ತಕದಲ್ಲಿ ಫ.ಗು. ಹಳಕಟ್ಟಿ, ರೆವರೆಂಡ್ ಉತ್ತಂಗಿ ಚೆನ್ನಪ್ಪ, ಹರ್ಡೇಕರ ಮಂಜಪ್ಪ, ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಮತ್ತು ಇಲಕಲ್ ಮಹಾಂತ ಸ್ವಾಮೀಜಿ ಕುರಿತ ಲೇಖನಗಳಿವೆ. ವಚನ ಸಾಹಿತ್ಯ ಮತ್ತು ಲಿಂಗಾಯತ ಧರ್ಮಕ್ಕೆ ಅವರು ಸಲ್ಲಿಸಿದ ಸೇವೆಯ ಕುರಿತು ತಿಳಿಸುತ್ತವೆ.

"ಲಿಂಗಾಯತ ಮಠಗಳು ಹೀಗಿರಬೇಕು" ಎಂಬ ಲೇಖನ, ಆಧುನಿಕ ಸಮಾಜದಲ್ಲಿ ಅವುಗಳು ಯಾವ ರೀತಿ ಕಾರ್ಯನಿರ್ವಹಿಸಬೇಕು ಎಂಬುದನ್ನು ವಿವರಿಸುತ್ತದೆ.

ವಿವಿಧ ಸಮುದಾಯಗಳಿಂದ ಬಂದು ಲಿಂಗಾಯತ ಧರ್ಮ ಸ್ವೀಕರಿಸಿ, ಲಿಂಗಾಯತ ತತ್ತ್ವಗಳನ್ನು ಮೈಗೂಡಿಸಿಕೊಂಡು ಲಿಂಗಾಯತ ಮಠಾಧಿಪತಿಗಳಾಗಿ ಸಮಾಜ ಸೇವೆ ಮಾಡುತ್ತಿರುವ ಸ್ವಾಮಿಗಳ ಕುರಿತು ಈ ಪುಸ್ತಕದಲ್ಲಿ ಒಂದು ಅಧ್ಯಾಯವಿದೆ.

ಒಟ್ಟಾರೆ ಇವ ನಮ್ಮವ” ಕೃತಿಯು ಮಾನವೀಯ ಮೌಲ್ಯಗಳು, ಬಸವತತ್ವದ ಸಾಮಾಜಿಕ ಚಿಂತನೆ ಮತ್ತು ಸಮಾನತೆಯ ಜೀವನದೃಷ್ಟಿಯನ್ನು ಸಮಾಜದ ಮುಂದೆ ಇಡುವ ಒಂದು ಸಾರ್ಥಕ ಪ್ರಯತ್ನವಾಗಿದೆ. ಈ ಕೃತಿಯ ಮೂಲಕ ಲಿಂಗಾಯತ ಧರ್ಮ ಅಧ್ಯಯನ ಮತ್ತು ತರಬೇತಿ ಕೇಂದ್ರದ ಸಂಸ್ಥಾಪಕರಾದ ಡಾ. ಶ್ರೀಶೈಲ ಮಸೂತೆಯವರು ಬಸವಣ್ಣನವರ ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಆದರ್ಶಗಳನ್ನು ಬದುಕಿನ ವಿವಿಧ ಆಯಾಮಗಳ ಮೂಲಕ ಓದುಗರಿಗೆ ಪರಿಚಯಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಬೇರೆ ಬೇರೆ ಜಾತಿಗಳಿಗೆ ಸೇರಿದ ಮಠಾಧೀಶರ ಪರಿಚಯವನ್ನು ಮತ್ತು ಅವರು ಲಿಂಗಾಯತ ಧರ್ಮವನ್ನು ಒಪ್ಪಿ-ಅಪ್ಪಿಕೊಂಡ ರೋಚಕ ಇತಿಹಾಸವು ಈ ಕೃತಿಯಲ್ಲಿ ಸೇರಿಸಿರುವುದು, ಬಸವಣ್ಣನವರ “ಮಾನವನು ಮಹಾದೇವನಾಗುವ” ತತ್ತ್ವವನ್ನು ನೆನಪಿಸುತ್ತದೆ. ಧರ್ಮದ ಮೂಲದಲ್ಲಿ ಜಾತಿ ಇಲ್ಲ, ಗುಣ ಮತ್ತು ಸಾಧನೆಯೇ ಮುಖ್ಯ ಎಂಬ ಸಂದೇಶವನ್ನು ಇದು ನೀಡುತ್ತದೆ.

 ಪುಸ್ತಕದ ಮುದ್ರಣ ಅಂದವಾಗಿದ್ದು ಬೆಂಗಳೂರಿನ ಲಿಂಗಾಯತ ಧರ್ಮ ಅಧ್ಯಯನ ಕೇಂದ್ರದಿಂದ 2026 ರಲ್ಲಿ ಪ್ರಕಟಗೊಂಡ ಕೃತಿಯಲ್ಲಿ 320 ಪುಟಗಳಿದ್ದು 450 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿ ಕಲಬುರಗಿ