ಗಾರಂಪಳ್ಳಿ ಗ್ರಾಮ ಪಂಚಾಯತ್ : ನಕಲಿ ಎನ್. ಎಂ. ಆರ್ ಸೃಷ್ಟಿಸಿ ವಿಬಿಜಿ ರಾಮಜೀ ಯೋಜನೆ ಯ 10 ಲಕ್ಷ ರು ಹಣ ಲೂಟಿಯ ಆರೋಪ ಸಮಗ್ರ ತನಿಖೆಗೆ
ಗಾರಂಪಳ್ಳಿ ಗ್ರಾಮ ಪಂಚಾಯತ್ : ನಕಲಿ ಎನ್. ಎಂ. ಆರ್ ಸೃಷ್ಟಿಸಿ ವಿಬಿಜಿ ರಾಮಜೀ ಯೋಜನೆ ಯ 10 ಲಕ್ಷ ರು ಹಣ ಲೂಟಿಯ ಆರೋಪ
ಸಮಗ್ರ ತನಿಖೆಗೆ ಆದೇಶಿಸಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು : ವೀರ ಕನ್ನಡಿಗರ ಸೇನೆ ಆಗ್ರಹ
ಚಿಂಚೋಳಿ : ನಕಲಿ ಎನ್ ಎಂ ಆರ್ ಸೃಷ್ಟಿಸಿ ವಿಬಿಜಿ ರಾಮಜೀ ಯೋಜನೆಯ 10 ಲಕ್ಷ ರು ಹಣ ಅಧಿಕಾರಿಗಳಿಂದ ಗುಳುಂ ಮಾಡಲಾಗಿದೆ ಎಂದು ಆರೋಪಿಸಿ ತಾಲೂಕ ವೀರ ಕನ್ನಡಿಗರ ಸೇನೆ ಪ್ರತಿಭಟನೆ ನಡೆಸಿದೆ.
ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಾರ್ಯಾಲಯದ ಎದುರುಗಡೆ ಸೇನೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು ತಾಲೂಕಿನ ಗ್ರಾರಂಪಳ್ಳಿ ಗ್ರಾಮದ ಸರ್ವೆ ನಂ. 184ರಲ್ಲಿ ಕಂದಕ (ಟ್ರೆಂಚ್ ) ಕಾಮಗಾರಿ ಮಾಡದೇ 48 ಸುಳ್ಳು ಎನ್. ಎಂ. ಆರ್ ಗಳು ಸೃಷ್ಟಿಸಿ ವಿಬಿಜಿಆರ್ ಯೋಜನೆ ಉದ್ದೇಶಿತ ಕೆಲಸದ ಹತ್ತು ಲಕ್ಷ ರು ಹಣ ಅಧಿಕಾರಿಗಳಿಂದ ಕಬಳಿಕೆ ಆಗಿದೆ ಎಂದು ಆರೋಪಿಸಿದ್ದಾರೆ. ಈಗಾಗಲೇ ಸರಕಾರ ಬರಗಾಲ ಘೋಷಣೆ ಮಾಡಿದೆ. ಜನರು ಗೂಳೆ ಹೋಗದಂತೆ ತಡೆಯಲು ವಿಬಿಜಿ ರಾಮಜೀ ಯೋಜನೆ ಅಡಿ ಕೆಲಸ ದಿನಗಳು ಹೆಚ್ಚಿಸಿ ಜನರಿಗೆ ಕೆಲಸ ನೀಡುವಂತೆ ಸರಕಾರದ ಆದೇಶಗಳು ಬಂದಿವೆ. ಆದರೆ ಅಧಿಕಾರಿಗಳು ಸುಳ್ಳು ಕೆಲಸದ ಹಾಜರಾತಿ, ಎನ್. ಎಂ. ಆರ್ ಮತ್ತು ಜಾಬ್ ಕಾರ್ಡ್ ಗಳು ಸೃಷ್ಟಿಸಿ ಹಣ ಲಪಟಾಯಿಸಲಾಗಿದೆ ಎಂದು ದೂರಿದರು. ಜನರಲ್ಲಿ ಬದಕಲು ಹಣ ಇಲ್ಲ. ವಿಬಿಜಿ ರಾಮಜೀ ಯೋಜನೆಯಡಿ ಕೂಲಿ ಕೆಲಸ ಪಡೆದು ಜೀವನಕ್ಕೆ ದಾರಿ ಮಾಡಿಕೊಳ್ಳಬೇಕೆಂದು ಕನಸು ಕಂಡ ಕೂಲಿಕಾರರ ಜೀವನ ಗೂಳೆ ಹೋಗುವಂತೆ ಅಧಿಕಾರಿಗಳು ನಡೆದುಕೊಂಡಿದ್ದಾರೆ. ವಿಬಿಜಿ ರಾಮಜೀ ಅಧಿಕಾರಿಗಳು ನೈಜತೆ ಪರಿಶೀಲನೆ ಮಾಡದೇ ಎಂಐಎಸ್ ಮತ್ತು ಎಫ್ ಟಿಓ ಗಳ ಮೂಲಕ ಹಣ ಪಾವತಿಸಿ ಲೂಟಿ ಹೊಡೆಯಲಾಗಿದ್ದು, ನೈಜತೆ ಪರಿಶೀಲಿಸಿ ಹಣ ಲೂಟಿಯಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಇದರಲ್ಲಿ ವಿಬಿಜಿ ರಾಮಜಿ ಯೋಜನೆಯ ಹಾಗೂ ಗ್ರಾಮ ಪಂಚಾಯಿತಿ ಅಧಿಕಾಯಿಗಳು ಮತ್ತು ಸಿಬ್ಬಂದಿಗಳು ಹಾಗೂ ಯೋಜನೆ ಅನುಷ್ಠಾನದ ಅಧಿಕಾರಿಗಳು ಇದರಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಸರಕಾರದ ಹಣ ಕಬಳಿಸಿ ದುರ್ಬಳಕೆ ಮಾಡಿಕೊಂಡವರಿಂದ ಹಣ ವಸೂಲಿ ಮಾಡಿ ಮರಳಿ ಖಜಾನೆಗೆ ಪಡೆಯಬೇಕು ಎಂದು ವೀರ ಕನ್ನಡಿಗರ ಸೇನೆ ಅಧ್ಯಕ್ಷ ಗೋಪಾಲ ಇಡಗೊಟ್ಟಿ ಅವರ ನೇತೃತ್ವದಲ್ಲಿ ತಾ. ಪಂ. ಇಓ ಅವರಿಗೆ 9 ಅಂಶಗಳುಳ್ಳ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೇನೆಯ ಕೆಕೆ ಕಾರ್ಯಾಧ್ಯಕ್ಷ ವಿಠಲ್ ಕುಸಾಳೆ, ಹಣಮಂತ ಭೋವಿ ಗಾರಂಪಳ್ಳಿ ಉಪಾಧ್ಯಕ್ಷ ಮಹೇಶ ರಾಣಾಪೂರ್, ಶಿವು ಕಲ್ಲೂರ್, ಗೌತಮ್ ದಸ್ತಾಪೂರ್, ಪ್ರಶಾಂತರೆಡ್ಡಿ ಗಡ್ಡಿಮನಿ, ಆಕಾಶ ಚಂದಾಪೂರ್, ದಯಾಸಾಗರ, ಜಗನ್ನಾಥ ಪೂಜಾರಿ, ರೇವಣಸಿದ್ಧಪ್ಪ ಪೂಜಾರಿ, ಚಾಂದ್ ಪಟೇಲ್ ಯಂಪಳ್ಳಿ, ನಿಶಾಂತ ಗಾರಂಪಳ್ಳಿ ಸೇರಿದಂತೆ ಗಾರಂಪಳ್ಳಿ ಗ್ರಾಮದ ಗ್ರಾಮಸ್ಥರು ಇದ್ದರು.

