ಸ್ವಾರ್ಥಕ್ಕಿಂತ ಸೇವೆಯೇ ಶ್ರೇಷ್ಠ: ಪಿಡಿಜಿ ಮಣಿಲಾಲ ಪಿ. ಶಾ
ಸ್ವಾರ್ಥಕ್ಕಿಂತ ಸೇವೆಯೇ ಶ್ರೇಷ್ಠ: ಪಿಡಿಜಿ ಮಣಿಲಾಲ ಪಿ. ಶಾ
ಕಲಬುರಗಿ: ಸಮಾಜದಲ್ಲಿ ಸ್ವಾರ್ಥಕ್ಕಿಂತ ಸೇವೆಯೇ ಶ್ರೇಷ್ಠ ಎಂಬ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ರೋಟರಿ ಸಂಸ್ಥೆಯು ಸಮಾಜ ಸೇವೆಯ ಮೂಲಕ ಜನರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವ ಮಹತ್ವದ ಕಾರ್ಯ ಮಾಡುತ್ತಿದೆ ಎಂದು ಪಿಡಿಜಿ ಮಣಿಲಾಲ ಪಿ. ಶಾ ಹೇಳಿದರು.
ನಗರದ ರೋಟರಿ ಕ್ಲಬ್ನ ಕಾರ್ಯಕ್ರಮದಲ್ಲಿ, ಅಂತರಾಷ್ಟ್ರೀಯ ಮತ್ತು ರೋಟರಿ ಕ್ಲಬ್ ಮಾಡುವ ಕೆಲಸ ಕುರಿತು ಮಾತನಾಡಿ, 12ರಿಂದ 18 ವರ್ಷದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಇಂಟರ್ಯಾಕ್ಟ್ ಕ್ಲಬ್ ಕಾರ್ಯನಿರ್ವಹಿಸುತ್ತದೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಸಂಘಟನೆಯೊಂದಿಗೆ ಸಂಪರ್ಕಿಸಬೇಕು. ತಿಂಗಳಿಗೊಮ್ಮೆ ಅವರನ್ನು ಒಟ್ಟುಗೂಡಿಸಿ ನಾಯಕತ್ವದ ಗುಣಗಳನ್ನು ಬೆಳೆಸಲು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಯುವಜನರಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಸನ ಹಾಗೂ ಸಮಾಜ ಸೇವಾ ಮನೋಭಾವ ಬೆಳೆಸಲು ರೋಟರ್ಯಾಕ್ಟ್ ಕ್ಲಬ್ ಕಾರ್ಯನಿರ್ವಹಿಸುತ್ತಿದ್ದು, ವೃತ್ತಿಪರರು ಮತ್ತು ಸಮಾಜದ ಗಣ್ಯರು ಸದಸ್ಯರಾಗಿರುವ ರೋಟರಿ ಕ್ಲಬ್ ಸಮಾಜ ಸೇವೆಗೆ ವೇದಿಕೆಯಾಗಿದೆ ಎಂದು ತಿಳಿಸಿದರು.
ಪ್ರಮುಖ ಉದ್ದೇಶಗಳಾದ ಬಡ ಮತ್ತು ನಿರ್ಗತಿಕರಿಗೆ ನೆರವು, ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ, ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ, ಕುಡಿಯುವ ನೀರಿನ ವ್ಯವಸ್ಥೆ, ಪರಿಸರ ಸಂರಕ್ಷಣೆ, ಗಿಡಮರ ನೆಡುವುದು, ಅಂಗವಿಕಲರಿಗೆ ಅಗತ್ಯ ಸಾಧನಗಳ ವಿತರಣೆ ಹಾಗೂ ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳ ಕುರಿತು ಅವರು ವಿವರಿಸಿದರು.
ಕ್ಲಬ್ ಅಧ್ಯಕ್ಷ ರಮೇಶ ಬಂಧು ಅವರು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ನಾಗರಾಜ ಕುಸುಮಾ ಹಾಗೂ ಡಾ. ಎ.ಎಸ್. ಭದ್ರಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಚೇತನ್ ಕುಮಾರ್ ಗಾಂಗಜಿ, ಶಾಂತಕುಮಾರ ಬಿರಾದಾರ, ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ಕಾಶಿನಾಥ ಪಾಟೀಲ, ಬಾಬುರಾವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

