ಕಳಪೆ ರಸ್ತೆ, ಚರಂಡಿ ಕಾಮಗಾರಿ ಆರೋಪ: ಪಿಡಬ್ಲ್ಯೂಡಿ ಎಇಇ ಅಮಾನತಿಗೆ ಆಗ್ರಹ
ಕಳಪೆ ರಸ್ತೆ, ಚರಂಡಿ ಕಾಮಗಾರಿ ಆರೋಪ: ಪಿಡಬ್ಲ್ಯೂಡಿ ಎಇಇ ಅಮಾನತಿಗೆ ಆಗ್ರಹ
ಕಲಬುರಗಿ: ನಗರದ ವಾರ್ಡ್ ಸಂಖ್ಯೆ 11ರ ಗೋಕುಲ್ ನಗರ ಹಾಗೂ ವಾರ್ಡ್ ಸಂಖ್ಯೆ 32ರ ಗುಬ್ಬಿ ಕಾಲೋನಿಯಲ್ಲಿ ಕೈಗೊಂಡಿರುವ ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆರೋಪಿಸಿ ಜೈ ಕನ್ನಡಿಗರ ಸೇನೆ ಕಲಬುರಗಿ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಗೋಕುಲ್ ನಗರದಲ್ಲಿ ಅಂದಾಜು ರೂ.1.25 ಕೋಟಿ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿಯಲ್ಲಿ ಗುಣಮಟ್ಟದ ಸಾಮಗ್ರಿಗಳನ್ನು ಬಳಸದೆ ಸ್ಥಳೀಯವಾಗಿ ದೊರೆಯುವ ಕಳಪೆ ಗುಣಮಟ್ಟದ ಸಿಮೆಂಟ್, ಕಂಕರ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಲಾಗಿದೆ. ಚರಂಡಿಯ ಕೆಳಭಾಗದಲ್ಲಿ ಸೂಕ್ತ ಬೆಡ್ ಹಾಕದೆ ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.
ಅದೇ ರೀತಿ ಗುಬ್ಬಿ ಕಾಲೋನಿಯಲ್ಲಿಯೂ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ರಸ್ತೆಗೆ ಮೊದಲ ಹಂತದಲ್ಲಿ ಮುರುಮ್ ಹಾಕದೆ ಹಳೆಯ ರಸ್ತೆಯ ಮೇಲೆಯೇ ಸಿಸಿ ರಸ್ತೆ ನಿರ್ಮಿಸಲಾಗುತ್ತಿದ್ದು, ಇದರಿಂದ ರಸ್ತೆ ಶೀಘ್ರ ಹಾಳಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಆದ್ದರಿಂದ ಎರಡೂ ಕಾಮಗಾರಿಗಳನ್ನು ಕೂಡಲೇ ತಡೆಹಿಡಿದು, ಸಮಗ್ರ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಕಾಮಗಾರಿಯ ಬಿಲ್ ಪಾವತಿಯನ್ನು ತಡೆಹಿಡಿಯಬೇಕು ಹಾಗೂ ತಪ್ಪಿತಸ್ಥ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಅವರ ಲೈಸೆನ್ಸ್‌ನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ. ಅಲ್ಲದೆ, ಕಾಮಗಾರಿಗಳ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಸಂಬಂಧಪಟ್ಟ ಪಿಡಬ್ಲ್ಯೂಡಿ ಎಇಇ ಉಶಾರಾಣಿ ಅವರನ್ನು ಅಮಾನತುಗೊಳಿಸಬೇಕು ಎಂದು ಮನವಿ ಮಾಡಿದೆ.
ಮನವಿಗೆ ಕೂಡಲೇ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಜೈ ಕನ್ನಡಿಗರ ಸೇನೆ ಎಚ್ಚರಿಕೆ ನೀಡಿದೆ.
ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್. ಭಾಸಗಿ, ಅಕ್ಷಯ, ಸಂತೋಷ ಬೆಳೆಪ್ಪ ಮಾಂಗ್, ಭಾಗೇಶ ಧರ್ಮಣ್ಣ, ಪ್ರಕಾಶ ನಿಂಗಪ್ಪ, ರಾಹುಲ್ ಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

