ಪ್ರಸನ್ನವೆಂಕಟ ದಾಸರ ಆರಾಧನಾ ಮಹೋತ್ಸವಕ್ಕೆ ವೈಭವದ ಮೆರುಗು
ಪ್ರಸನ್ನವೆಂಕಟ ದಾಸರ ಆರಾಧನಾ ಮಹೋತ್ಸವಕ್ಕೆ ವೈಭವದ ಮೆರುಗು
ಬಾಗಲಕೋಟೆಯಲ್ಲಿ ಸ್ಮಾರಕ ಭವನ, ಹರಿದಾಸ ಸಾಹಿತ್ಯ ಅಧ್ಯಯನ–ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯ ಲೋಕಾರ್ಪಣೆ
ಬಾಗಲಕೋಟೆ: ಹರಿದಾಸ ಸಾಹಿತ್ಯದ ಅಧ್ಯಯನ, ಸಂಶೋಧನೆ ಮತ್ತು ಪ್ರಸಾರಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಬಾಗಲಕೋಟೆಯಲ್ಲಿ ನಿರ್ಮಿಸಲಾದ ಶ್ರೀ ಪ್ರಸನ್ನವೆಂಕಟ ದಾಸರ ಸ್ಮಾರಕ ಭವನ, ಅಖಿಲ ಕರ್ನಾಟಕ ಹರಿದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಗ್ರಂಥಾಲಯ ಲೋಕಾರ್ಪಣೆಯೊಂದಿಗೆ ಪ್ರಸನ್ನವೆಂಕಟ ದಾಸರ ಆರಾಧನಾ ಮಹೋತ್ಸವಕ್ಕೆ ವೈಭವದ ಮೆರುಗು ದೊರೆಯಿತು.
ಪರಮಪೂಜ್ಯ ಶ್ರೀ ಶ್ರೀ 1008 ಶ್ರೀ ರಘುವಿಜಯತೀರ್ಥ ಶ್ರೀಪಾದಂಗಳವರು ಸ್ಮಾರಕ ಭವನ ಹಾಗೂ ಕೇಂದ್ರವನ್ನು ಅಮೃತಹಸ್ತದಿಂದ ಲೋಕಾರ್ಪಣೆ ಮಾಡಿದರು. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಹಿರಿಯ ದಾಸ ಸಾಹಿತ್ಯ ವಿದ್ವಾಂಸ ಡಾ. ಸ್ವಾಮಿರಾವ್ ಕುಲಕರ್ಣಿ ಅವರು ವಿವಿಧ ಕೃತಿಗಳನ್ನು ಲೋಕಾರ್ಪಣೆ ಮಾಡಿದರು.
ಪ್ರಸನ್ನವೆಂಕಟ ದಾಸರ ಸಾಹಿತ್ಯವನ್ನು ವಿವಿಧ ಭಾಷೆಗಳ ಓದುಗರಿಗೆ ತಲುಪಿಸುವ ಪ್ರಯತ್ನದ ಅಂಗವಾಗಿ ಹಲವು ಕೃತಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಯಾದವು. ಡಾ. ಸುಭಾಷ್ ಕಾಖಂಡಕಿ ಹಾಗೂ ಡಾ. ರೇಖಾ ಕಾಖಂಡಕಿ ಸಂಪಾದಿಸಿರುವ ‘ಹರಿದಾಸರ ಸಾಹಿತ್ಯ ಸಿಂಚನ–ಭಾಗ 9’, ಪ್ರಸನ್ನವೆಂಕಟ ದಾಸರು ವಿರಚಿಸಿರುವ ‘ನಾರಾಯಣ ಪಂಜರ’ ಕೃತಿಯ ತೆಲುಗು ಭಾಷಾಂತರ ಹಾಗೂ ‘ಶ್ರೀ ಪ್ರಸನ್ನವೆಂಕಟ ದಾಸರ ಕೃತಿ–ಲಕ್ಷ್ಮೀದೇವಿಯ ಅಪ್ರಕಟಿತ ಸ್ತುತಿರತ್ನಗಳು’ ಕೃತಿಯ ಹಿಂದಿ ಭಾಷಾಂತರ ಗಮನ ಸೆಳೆದವು. ತೆಲುಗು ಭಾಷಾಂತರವನ್ನು ಹೈದರಾಬಾದ್‌ನ ಎಂ. ಅನಂತರಾಮು ಹಾಗೂ ಹಿಂದಿ ಭಾಷಾಂತರವನ್ನು ಡಾ. ಎನ್.ಜಿ. ವಿಜಯಲಕ್ಷ್ಮಿ ಮಾಡಿದ್ದಾರೆ.
ದಾಸ ಪರಂಪರೆಗೆ ಮಾದರಿಯಾದ ಸ್ಮಾರಕ ಭವನ
ಹರಿದಾಸ ಸಾಹಿತ್ಯದ ಸಂರಕ್ಷಣೆ, ಅಧ್ಯಯನ ಮತ್ತು ಪ್ರಸಾರದಲ್ಲಿ ಖಾಸಗಿ ವಲಯವೂ ಮಹತ್ವದ ಪಾತ್ರ ವಹಿಸಬಹುದು ಎಂಬುದಕ್ಕೆ ಬಾಗಲಕೋಟೆಯ ಪ್ರಸನ್ನವೆಂಕಟ ದಾಸರ ಸ್ಮಾರಕ ಭವನ ಒಂದು ಅಪೂರ್ವ ಮಾದರಿಯಾಗಿದೆ.
ಪ್ರಸನ್ನವೆಂಕಟ ದಾಸ ಕಲ್ಚರಲ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮೂಲಕ ಪ್ರಸನ್ನವೆಂಕಟ ದಾಸರ ವಂಶಸ್ಥರಾದ ಡಾ. ಸುಭಾಷ್ ಕಾಖಂಡಕಿ ಹಾಗೂ ಶ್ರೀಮತಿ ರೇಖಾ ಕಾಖಂಡಕಿ ದಂಪತಿ, ದಾಸರ ವಂಶಸ್ಥರು, ಹಿತೈಷಿಗಳು, ಅಭಿಮಾನಿಗಳು ಹಾಗೂ ದಾನಿಗಳ ಸಹಕಾರದಿಂದ ಸ್ಮಾರಕ ಭವನವನ್ನು ನಿರ್ಮಿಸಿದ್ದಾರೆ.
ಸ್ಮಾರಕ ಭವನದ ಉದ್ಘಾಟನೆಯೊಂದಿಗೆ ನಡೆದ 9ನೇ ಹರಿದಾಸ ಸಮ್ಮೇಳನವು ದಾಸ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆಯಾಗಿದೆ ಎಂದು ಹಿರಿಯ ಸಂಶೋಧಕ ಡಾ. ಕೃಷ್ಣ ಕೋಲ್ಹರ ಕುಲಕರ್ಣಿ ಅಭಿಪ್ರಾಯಪಟ್ಟರು.
ಕರ್ನಾಟಕದಲ್ಲಿ ಒಬ್ಬ ಹರಿದಾಸರ ಸ್ಮರಣೆಯನ್ನು ಕೇಂದ್ರವಾಗಿಟ್ಟುಕೊಂಡು ಖಾಸಗಿ ಟ್ರಸ್ಟ್‌ನ ಮುಂದಾಳತ್ವದಲ್ಲಿ ನಿರ್ಮಾಣಗೊಂಡಿರುವ ಇಂತಹ ಸ್ಮಾರಕ ಭವನ ಅಪರೂಪದ ಉದಾಹರಣೆಯಾಗಿದೆ. ಇಂತಹ ಸ್ಮಾರಕಗಳು ಕೇವಲ ನೆನಪಿನ ಕಟ್ಟಡಗಳಾಗದೆ, ಅಧ್ಯಯನ, ಸಂಶೋಧನೆ, ಸಾಹಿತ್ಯ–ಸಂಗೀತ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ನಿರಂತರ ಕೇಂದ್ರಗಳಾಗಬೇಕು ಎಂಬ ಆಶಯವೂ ವ್ಯಕ್ತವಾಯಿತು.
ದಾಸ ಸಾಹಿತ್ಯ ಸೇವಕರಿಗೆ ಪ್ರಶಸ್ತಿ ಗೌರವ
ಆರಾಧನಾ ಮಹೋತ್ಸವದ ಅಂಗವಾಗಿ ದಾಸ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
‘ಶ್ರೀ ಪ್ರಸನ್ನವೆಂಕಟ ದಾಸ ಸಾಹಿತ್ಯರತ್ನ’ ಪ್ರಶಸ್ತಿಯನ್ನು ಹಿರಿಯ ಮಹಿಳಾ ಹರಿದಾಸರಾದ ಡಾ. ಎನ್.ಜಿ. ವಿಜಯಲಕ್ಷ್ಮಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು. ‘ಪ್ರಸನ್ನವೆಂಕಟ ವ್ಯಾಸ–ದಾಸ ಪ್ರಶಸ್ತಿ’ಯನ್ನು ಡಾ. ಧೂಳಖೇಡ ನಾರಾಯಣಾಚಾರ್ಯ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಾಸ ಸಾಹಿತ್ಯ ಪರಿಷತ್ತಿನ ಡಾ. ನಾ. ಗೀತಾಚಾರ್ಯ, ಲೇಖಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ಪಂ. ಬಿಂದುಮಾಧವ ನಾಗಸಂಪಿಗೆ, ಯೋಗ ಸಂಸ್ಕೃತಮಂ ವಿವಿಯ ಡಾ ಬಿವಿಕೆ ಶಾಸ್ತ್ರೀ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು. ಗಣ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು.
ಆರು ಗೋಷ್ಠಿಗಳಲ್ಲಿ ದಾಸ ಸಾಹಿತ್ಯದ ಚಿಂತನ–ಮಂಥನ
ಮೂರು ದಿನಗಳ ಕಾಲ ನಡೆದ ಆರಾಧನಾ ಮಹೋತ್ಸವದಲ್ಲಿ ಒಟ್ಟು ಆರು ಗೋಷ್ಠಿಗಳು ಜರುಗಿದವು. ಸುಮಾರು 18ರಿಂದ 20 ಮಂದಿ ವಿಶೇಷ ಆಹ್ವಾನಿತ ಪ್ರಬಂಧಕಾರರು ತಮ್ಮ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಿದರು.
ಪ್ರಸನ್ನವೆಂಕಟ ದಾಸರ ಕೃತಿಗಳ ವೈಶಿಷ್ಟ್ಯ, ದಾಸ ಸಾಹಿತ್ಯದ ತಾತ್ವಿಕ ನೆಲೆ, ಸಾಮಾಜಿಕ ಚಿಂತನೆ, ಭಕ್ತಿ ಪರಂಪರೆ ಹಾಗೂ ಸಮಕಾಲೀನ ಸಮಾಜದಲ್ಲಿ ದಾಸ ಸಾಹಿತ್ಯದ ಪ್ರಸ್ತುತತೆ ಸೇರಿದಂತೆ ಹಲವು ಆಯಾಮಗಳ ಕುರಿತು ಗೋಷ್ಠಿಗಳಲ್ಲಿ ಚಿಂತನ–ಮಂಥನ ನಡೆಯಿತು.
ಪ್ರಸನ್ನವೆಂಕಟ ದಾಸರ ಆರಾಧನಾ ಮಹೋತ್ಸವವು ಅವರ ಸ್ಮರಣೆಯ ಆಚರಣೆಗೆ ಸೀಮಿತವಾಗದೆ, ದಾಸ ಸಾಹಿತ್ಯದ ಅಧ್ಯಯನ, ಸಂಶೋಧನೆ, ಪ್ರಕಟಣೆ ಮತ್ತು ಮುಂದಿನ ಪೀಳಿಗೆಗೆ ಅದರ ಮೌಲ್ಯಗಳನ್ನು ತಲುಪಿಸುವ ಸಾಂಸ್ಕೃತಿಕ ಚಳವಳಿಗೆ ವೇದಿಕೆಯಾಗುವ ಆಶಯವನ್ನು ಬಲಪಡಿಸಿತು.

