ಅಪ್ರಾಪ್ತ ವಯಸ್ಸಿನ ಪ್ರೀತಿ ಬೇಡ, ಭವಿಷ್ಯದ ಸಾಧನೆ ಮುಖ್ಯ _ ಮಂಜುಳಾ ವಿ. ಪಾಟೀಲ್

ಅಪ್ರಾಪ್ತ ವಯಸ್ಸಿನ ಪ್ರೀತಿ ಬೇಡ, ಭವಿಷ್ಯದ ಸಾಧನೆ ಮುಖ್ಯ _ ಮಂಜುಳಾ ವಿ. ಪಾಟೀಲ್

ಅಪ್ರಾಪ್ತ ವಯಸ್ಸಿನ ಪ್ರೀತಿ ಬೇಡ, ಭವಿಷ್ಯದ ಸಾಧನೆ ಮುಖ್ಯ_ ಮಂಜುಳಾ ವಿ. ಪಾಟೀಲ್

ಕಲಬುರಗಿ, : ಇಂದಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಪ್ರೀತಿ-ಪ್ರೇಮದ ಹೆಸರಿನಲ್ಲಿ ತಪ್ಪು ನಿರ್ಧಾರಗಳನ್ನು ಕೈಗೊಂಡು ಕಾನೂನು ಸಮಸ್ಯೆಗಳಿಗೆ ಸಿಲುಕುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಗುರಿ ಹೊಂದಿ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಂಜುಳಾ ವಿ. ಪಾಟೀಲ್ ಹೇಳಿದರು.

ಅವರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಪದವಿಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098/112, ಪೊಲೀಸ್‌ ಇಲಾಖೆ, ಸ್ವಯಂಸೇವಾ ಸಂಸ್ಥೆಗಳು ಆಯೋಜಿಸಲಾಗಿದ್ದ ಪೋಕ್ಸೊ ಕಾಯ್ದೆ ಮತ್ತು ಬಾಲ್ಯ ವಿವಾಹ ನಿಷೇದ ಕಾಯ್ದೆ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

16 ಮತ್ತು 17 ವರ್ಷದ ಬಾಲಕಿಯರು ಪ್ರೀತಿ-ಪ್ರೇಮದಂತಹ ವಿಚಾರಗಳಿಗೆ ಒಳಗಾಗಿ ಬಾಲಗರ್ಭಿಣಿಯರಾಗುವ ಪ್ರಕರಣಗಳು ಕಂಡುಬರುತ್ತಿವೆ. ಇಂತಹ ಪ್ರಕರಣಗಳಲ್ಲಿ ಪೋಕ್ಸೋ ಕಾಯ್ದೆ ಹಾಗೂ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಯುವಕರು ಕಾನೂನು ಕ್ರಮ ಎದುರಿಸುವ ಪರಿಸ್ಥಿತಿ ಉಂಟಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಕಾನೂನುಗಳ ಅರಿವು ಹೊಂದುವುದರ ಜೊತೆಗೆ ತಮ್ಮ ಶಿಕ್ಷಣ, ಗುರಿ ಮತ್ತು ಭವಿಷ್ಯದ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಿಶ್ವಾರಾಧ್ಯ ಇಜೇರಿ ಮಾತನಾಡಿ, ಸಂಕಷ್ಟದಲ್ಲಿರುವ ಹಾಗೂ ರಕ್ಷಣೆ ಮತ್ತು ಪೋಷಣೆಯ ಅಗತ್ಯವಿರುವ ಮಕ್ಕಳಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಸೂಕ್ತ ರಕ್ಷಣೆ ಮತ್ತು ಪುನರ್ವಸತಿ ಕಲ್ಪಿಸಲಾಗುತ್ತದೆ. ಮಕ್ಕಳ ಹಕ್ಕುಗಳು ಮತ್ತು ರಕ್ಷಣೆಗೆ ಸಂಬಂಧಿಸಿದಂತೆ ಸಮಿತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ್ ಅವರು ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಾಲ್ಯವಿವಾಹವು ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯವಿವಾಹಕ್ಕೆ ಕಾರಣವಾಗುವ ರೀತಿಯ ನಿಶ್ಚಿತಾರ್ಥವೂ ಕಾನೂನುಬದ್ಧವಾಗಿ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ವಿದ್ಯಾರ್ಥಿಗಳು ಬಾಲ್ಯವಿವಾಹದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಭರತೇಶ ಶೀಲವಂತರ, ಅಸಾಂಸ್ಥಿಕ ಸೇವೆಗಳ ರಕ್ಷಣಾಧಿಕಾರಿ ಬಸವರಾಜ್, ಮಕ್ಕಳ ಸಹಾಯವಾಣಿ-1098/112ರ ಕಾರ್ಯಕ್ರಮ ಸಂಯೋಜಕ ಬಸವರಾಜ್ ತೆಂಗಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಎಸ್. ಇರಾಣಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಿಲ್ಪಾ ಅಲ್ಲದ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ ಸೇರಿದಂತೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಕುರಿತು ಅರಿವು ಮೂಡಿಸಿದ ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಉಪನ್ಯಾಸಕಿ ಶ್ವೇತಾ ಶೆಟ್ಟಿ ನಿರೂಪಿಸಿದರು. ಪ್ರಾರ್ಥನಾ ಗೀತೆ ಕು. ಸಿದ್ದಮ್ಮ ಹಾಡಿದರು. ವಾಣಿಜ್ಯ ಉಪನ್ಯಾಸಕಿ ಸವಿತಾ ಸ್ವಾಗತಿಸಿದರು.