ಶಿಕ್ಷಕ ವೃತ್ತಿ ಪವಿತ್ರವಾದದ್ದು” : ಡಾ. ಮಲ್ಲಿಕಾರ್ಜುನ ಹಂಗರಗಿ
“ಶಿಕ್ಷಕ ವೃತ್ತಿ ಪವಿತ್ರವಾದದ್ದು” : ಡಾ. ಮಲ್ಲಿಕಾರ್ಜುನ ಹಂಗರಗಿ
ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ
ಕಲಬುರಗಿ: ಕೊಟನೂರ (ಡಿ) ಕಲಬುರಗಿಯ ದಿಶಾ ಪದವಿ ಪೂರ್ವ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಕಲ್ಪ ಫೌಂಡೇಶನ್ ಹಾಗೂ ದಿಶಾ ಕಾಲೇಜಿನ ಪ್ರಾಚಾರ್ಯರಾದ ಡಾ. ಮಲ್ಲಿಕಾರ್ಜುನ ಹಂಗರಗಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ “ಶಿಕ್ಷಕ ವೃತ್ತಿ ಪವಿತ್ರವಾದದ್ದು. ಈ ಕಾಯಕಕ್ಕೆ ಬರಲು ನಾವು ಪುಣ್ಯವಂತರು. ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಮಕ್ಕಳ ಮನಸ್ಸು ಮತ್ತು ಬುದ್ಧಿಯನ್ನು ರೂಪಿಸುವ ಮಹತ್ವದ ಕಾರ್ಯ ಶಿಕ್ಷಕರ ಮೇಲಿದೆ” ಎಂದು ಹೇಳಿದರು.
ಶಿಕ್ಷಕ ವೃತ್ತಿಯಲ್ಲಿ ಶ್ರದ್ಧೆ ಮತ್ತು ಭಕ್ತಿ ಬಹಳ ಮುಖ್ಯ. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದರೆ ವೃತ್ತಿಯ ಜೊತೆಗೆ ಉತ್ತಮ ಹವ್ಯಾಸ ಮತ್ತು ಸೃಜನಶೀಲ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವ ಮೂಲಕ ಉತ್ತಮ ಸಮಾಜ ಹಾಗೂ ದೇಶ ನಿರ್ಮಾಣಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಆಡಳಿತ ಮಂಡಳಿ ಸದಸ್ಯರಾದ ಶರಣು ಕೆಂಭಾವಿ ಮಾತನಾಡಿ, “ಶಿಕ್ಷಕರ ಬದುಕಿನಲ್ಲಿ ಅತ್ಯಂತ ಸಂತಸದ ಕ್ಷಣವೆಂದರೆ ತಮ್ಮ ವಿದ್ಯಾರ್ಥಿಗಳು ಸಾಧನೆ ಮಾಡುವ ಸಂದರ್ಭ. ಶಿಕ್ಷಕರು ಸದಾ ವಿದ್ಯಾರ್ಥಿಗಳ ಬದುಕಿಗೆ ದಿಕ್ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಸಾಗುವುದೇ ದಿಶಾ ಸಂಸ್ಥೆಯ ಧ್ಯೇಯವಾಗಿದೆ” ಎಂದು ಹೇಳಿದರು.
ಕಾಲೇಜಿನ ಉಪಪ್ರಾಚಾರ್ಯರಾದ ನಾಗರಾಜ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಶಿಕ್ಷಕರಿಗೆ ಬಹಳ ಮುಖ್ಯ. ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಮೌಲ್ಯ, ಗೌರವ ಮತ್ತು ಉತ್ತಮ ಭವಿಷ್ಯವನ್ನು ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರಾದ ನಾವು ನಿರಂತರವಾಗಿ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ರಾಧಾಕೃಷ್ಣ ನಿರೂಪಿಸಿದರು. ವಾಮನ ಮೂರ್ತಿ ವಂದಿಸಿದರು.

