ವಯೋನಿವೃತ್ತಿ ಅಲ್ಲ, ಸಾಹಿತ್ಯ–ಶಿಕ್ಷಣ ಸೇವೆಗೆ ಗೌರವ: ಡಾ. ಸುರೇಂದ್ರಕುಮಾರ ಕೆರಮಗಿ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ
ವಯೋನಿವೃತ್ತಿ ಅಲ್ಲ, ಸಾಹಿತ್ಯ–ಶಿಕ್ಷಣ ಸೇವೆಗೆ ಗೌರವ: ಡಾ. ಸುರೇಂದ್ರಕುಮಾರ ಕೆರಮಗಿ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ
ಕಲಬುರಗಿ : ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಲಬುರಗಿಯ ಸ್ನಾತಕೋತ್ತರ ಕನ್ನಡ ಅಧ್ಯಯನ ಹಾಗೂ ಸಂಶೋಧನಾ ವಿಭಾಗದ ಪ್ರಾಧ್ಯಾಪಕರಾದ ಡಾ. ಸುರೇಂದ್ರಕುಮಾರ ಕೆರಮಗಿ ಅವರ ವಯೋನಿವೃತ್ತಿ ಅಂಗವಾಗಿ ಅಧ್ಯಾಪಕರ ಸಂಘದ ವತಿಯಿಂದ ಕಾಲೇಜಿನ ಪಿ.ಜಿ. ಬಿಲ್ಡಿಂಗ್‌ನ ಸೆಮಿನಾರ್ ಹಾಲ್‌ನಲ್ಲಿ ಆತ್ಮೀಯ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಧ್ಯಾಪಕರಾದ ಡಾ. ನಾರಾಯಣ ಡಿ. ರೋಲೆಕರ್ ಮಾತನಾಡಿ, ಡಾ. ಸುರೇಂದ್ರಕುಮಾರ ಕೆರಮಗಿ ಅವರು ಕನ್ನಡ ಸಾಹಿತ್ಯ, ಅಧ್ಯಾಪನ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಅವರ ಸರಳ ವ್ಯಕ್ತಿತ್ವ, ವಿದ್ಯಾರ್ಥಿ ಸ್ನೇಹಿ ಬೋಧನಾ ಶೈಲಿ ಹಾಗೂ ಶೈಕ್ಷಣಿಕ ಬದ್ಧತೆ ಎಲ್ಲರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಇಂದುಮತಿ ಪಿ. ಪಾಟೀಲ ಮಾತನಾಡಿ, ಡಾ. ಕೆರಮಗಿ ಅವರು ತಮ್ಮ ಸೇವಾ ಅವಧಿಯಲ್ಲಿ ಕಾಲೇಜಿನ ಶೈಕ್ಷಣಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಅವರ ಪಾತ್ರ ಸ್ಮರಣೀಯವಾಗಿದ್ದು, ಅವರ ನಿವೃತ್ತಿ ಕಾಲೇಜಿಗೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಜಿ. ವಿಭಾಗದ ಡೀನರಾದ ಡಾ. ಮಲ್ಲೇಶಪ್ಪ ಕುಂಬಾರ, ಯು.ಜಿ. ಕಲಾ ವಿಭಾಗದ ಡೀನ್ ಡಾ. ವಿಜಯಕುಮಾರ ಸಾಲಿಮನಿ, ವಾಣಿಜ್ಯ ವಿಭಾಗದ ಡೀನ್ ಡಾ. ರಾಜಕುಮಾರ ಸಲಗರ, ಯು.ಜಿ. ವಿಜ್ಞಾನ ವಿಭಾಗದ ಡೀನ್ ಡಾ. ದೌಲಪ್ಪ ಹೆಚ್., ವಿಧ್ಯಾರ್ಥಿ ಕಲ್ಯಾಣ ಅಧಿಕಾರಿಯಾದ ಡಾ. ಶ್ರೀಮಂತ ಹೋಳ್ಕರ್, ಐಕ್ಯೂಎಸಿ ಸಂಯೋಜಕರಾದ ಶ್ರೀ ಮಹೇಶ, ಸಿಬ್ಬಂದಿ ಕಾರ್ಯದರ್ಶಿಯಾದ ಡಾ. ರವೀಂದ್ರ ಕುಮಾರ ಭಂಡಾರಿ , ಪತ್ರಾಂಕಿತ ವ್ಯವಸ್ಥಾಪಕರಾದ ಅಜಯಸಿಂಗ ತಿವಾರಿ, ಶ್ರೀಮತಿ ವಿಜಯಲಕ್ಷ್ಮಿ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ. ಸುರೇಂದ್ರಕುಮಾರ ಕೆರಮಗಿ ಅವರನ್ನು ಸನ್ಮಾನಿಸಿ, ಅವರ ಮುಂದಿನ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಲಾಯಿತು.
ಕಾರ್ಯಕ್ರಮಕ್ಕೆ ಶ್ರೀದೇವಿ ರಾಠೋಡ್ ಸ್ವಾಗತ ಕೋರಿದರು. ಡಾ. ಶ್ಯಾಮಲ ಸ್ವಾಮಿ ಅತಿಥಿ ಗಳನ್ನು ಪರಿಚಯಿಸಿದರು. ಡಾ. ಶಂಕ್ರಪ್ಪ ಹತ್ತಿ, ಡಾ. ಸುರೇಶ ಜಾಧವ, ಡಾ. ಶಾರದಾ ಜಾಧವ , ಡಾ. ನಾಗಪ್ಪ ಗೋಗಿ, ಡಾ. ಲಕ್ಷ್ಮೀಕಾಂತ ಪಂಚಾಳ, ಡಾ.ನಾಗಜ್ಯೋತಿ, ಅವರು ಅನಿಸಿಕೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಡಾ. ಕೆರಮಗಿ ಅವರ ಸೇವೆಯನ್ನು ಸ್ಮರಿಸಿ ಅಭಿನಂದಿಸಿದರು. ಡಾ. ರಾಬಿಯಾ ಇಫತ ವಂದಿಸಿದರು. ಡಾ. ರವೀಂದ್ರ ಕುಮಾರ ಭಂಡಾರಿ ಅವರು ಕಾರ್ಯಕ್ರಮ ನಿರೂಪಿಸಿದರು.

