ವಿಜ್ಞಾನ-ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯಲ್ಲಿ ಹೆಚ್ಚಿನ ಯಶಸ್ಸು: ರವಿ ಮೂಲಗೆ

ವಿಜ್ಞಾನ-ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯಲ್ಲಿ ಹೆಚ್ಚಿನ ಯಶಸ್ಸು: ರವಿ ಮೂಲಗೆ

ವಿಜ್ಞಾನ-ತಂತ್ರಜ್ಞಾನ ಅಳವಡಿಸಿಕೊಂಡರೆ ಕೃಷಿಯಲ್ಲಿ ಹೆಚ್ಚಿನ ಯಶಸ್ಸು: ರವಿಂದ್ರ ಮೂಲಗೆ

ಕಲಬುರಗಿ, ಜು. 31: ಕೃಷಿಯಲ್ಲಿ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಸಿಕೊಂಡರೆ ಉತ್ತಮ ಉತ್ಪಾದನೆಯೊಂದಿಗೆ ಮಣ್ಣಿನ ಫಲವತ್ತತೆಯನ್ನೂ ಕಾಪಾಡಿಕೊಳ್ಳಬಹುದು ಎಂದು ಕೃಷಿ ತಜ್ಞ ಹಾಗೂ ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ವಿಭಾಗದ ನಿವೃತ್ತ ಡೀನ್ ರವಿಂದ್ರ ಮೂಲಗೆ ಹೇಳಿದರು.

ನಗರದ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಜನ್ಮದಿನ ಪ್ರಯುಕ್ತದ ಕೃಷಿ ಪರಿಚಯ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಹಣ್ಣು ಮತ್ತು ತರಕಾರಿಗಳನ್ನು ದೀರ್ಘಕಾಲ ಸಂರಕ್ಷಿಸುವ ಉದ್ದೇಶದಿಂದ ಅತಿಯಾದ ಕೀಟನಾಶಕಗಳನ್ನು ಬಳಸಬಾರದು ಎಂದು ಸಲಹೆ ನೀಡಿದರು. ರಾಸಾಯನಿಕಗಳ ಅತಿಯಾದ ಬಳಕೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳ ಅಪಾಯ ಹೆಚ್ಚಾಗಬಹುದು ಎಂದು ಎಚ್ಚರಿಸಿದರು.

ನಗರ ಪ್ರದೇಶದ ಜನರು ತಮ್ಮ ಮನೆಗಳಲ್ಲಿಯೇ ಅಗತ್ಯವಿರುವ ತರಕಾರಿಗಳನ್ನು ಬೆಳೆಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ಭಾರತ ತೋಟಗಾರಿಕೆ ಕ್ಷೇತ್ರದಲ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಕೃಷಿಯಲ್ಲಿ ಮಣ್ಣು ಮತ್ತು ನೀರಿನ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು. ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡರೆ ನೀರಿನ ಉಳಿತಾಯವಾಗುವುದರ ಜೊತೆಗೆ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಈ ಯೋಜನೆಗಳಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳು ಹಾಗೂ ಸಹಾಯಧನಗಳು ಲಭ್ಯವಿವೆ ಎಂದು ತಿಳಿಸಿದರು.

ನಮ್ಮ ಭಾಗದ ಹವಾಮಾನಕ್ಕೆ ಅನುಗುಣವಾಗಿ ಪಾಲಿಹೌಸ್‌ಗಿಂತ ನೆರಳು ಮನೆ ವ್ಯವಸ್ಥೆಗೆ ಉತ್ತೇಜನ ನೀಡಬೇಕು. ಸಮರ್ಪಕ ಕೀಟ ನಿಯಂತ್ರಣದ ಮೂಲಕ ಬೆಳೆಗಳನ್ನು ವಿವಿಧ ರೋಗಗಳಿಂದ ರಕ್ಷಿಸಿ ಉತ್ತಮ ಗುಣಮಟ್ಟದ ಉತ್ಪಾದನೆ ಪಡೆಯಬಹುದು ಎಂದು ಹೇಳಿದರು.

ಅತಿಯಾದ ಯಾಂತ್ರೀಕರಣದಿಂದ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಯೂರಿಯಾ ಹಾಗೂ ಡಿಎಪಿ ಮೊದಲಾದ ರಾಸಾಯನಿಕ ಗೊಬ್ಬರಗಳ ನಿರಂತರ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಆದ್ದರಿಂದ ದನ-ಕರುಗಳಿಂದ ದೊರೆಯುವ ಸಾವಯವ ಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ಮಣ್ಣಿನ ಆರೋಗ್ಯ ಸುಧಾರಿಸಿ, ಸುಸ್ಥಿರ ಹಾಗೂ ದೀರ್ಘಕಾಲಿಕ ಕೃಷಿಗೆ ನೆರವಾಗುತ್ತದೆ ಎಂದು ರವಿ ಮೂಲಗೆ ಅಭಿಪ್ರಾಯಪಟ್ಟರು. 

ಶರಣಬಸಪ್ಪ ನಾಗಶೇಟ್ಟಿ ಅವರು ಜನುಮದಿನದ ಪ್ರಯುಕ್ತ ಪ್ರಸಾದ ವ್ಯವಸ್ಥೆ ಮಾಡಿದರು ಶರಣಬಸವ ಗೋಗಿ, ಅರ್ಜುನ್ ಜಮಾದಾರ್, ಬಿ ಶ್ರೀನಿವಾಸರಾವ್ ಅವರ ಜನುಮದಿನ ಪ್ರಯುಕ್ತ ಗೌರವಿಸಿ ಸನ್ಮಾನಿಸಿದರು.

ವೇದಿಕೆಯ ಮೇಲೆ ವೀರಭದ್ರಪ್ಪ ಭದ್ರಶೆಟ್ಟಿ, ಶೇಷಾದ್ರಿ ಕುಲಕರ್ಣಿ ನಿರೂಪಿಸಿದರು, ಡಾ ಬಿ ಎಸ್ ದೇಸಾಯಿ ಅವರು ವಂದಿಸಿದರು.

ಪ್ರೊ. ಶಿವರಾಜ ಪಾಟೀಲ, ಶರಣಗೌಡ ಪಾಟೀಲ ಪಾಳಾ, ಪ್ರಸಾದ ಪಟ್ಟಣಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.