ಬದುಕು ರೂಪಿಸಿ,ಸನ್ಮಾರ್ಗ ತೋರುವರೆ ನಿಜವಾದ ಗುರು - ಪಿಡ್ಡಪ್ಪ ನಂದಿಕೋಲ
ಬದುಕು ರೂಪಿಸಿ,ಸನ್ಮಾರ್ಗ ತೋರುವರೆ ನಿಜವಾದ ಗುರು - ಪಿಡ್ಡಪ್ಪ ನಂದಿಕೋಲ
ಶಹಪುರ : ಮನುಷ್ಯನನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆ ತಂದು,ಸಂಸ್ಕಾರ ನೀಡಿ,ಉತ್ತಮ ಬದುಕನ್ನು ರೂಪಿಸಿ ಸನ್ಮಾರ್ಗ ತೋರುವನೆ ನಿಜವಾದ ಗುರು ಎಂದು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿಡ್ಡಪ್ಪ ನಂದಿಕೋಲ ಹೇಳಿದರು.
ತಾಲೂಕಿನ ಸಗರ ಗ್ರಾಮದ ಸದ್ಭಕ್ತರು,ವಕ್ಕಲಿಗರ ಹಿರೇಮಠದ ಕರಿಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಗುರು ವಂದನಾ ಹಾಗೂ ತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗುರು ಎಂದರೆ ಕೇವಲ ವ್ಯಕ್ತಿಯಲ್ಲ, ಅದೊಂದು ದಿವ್ಯಶಕ್ತಿ,ಜೀವನದ ಸತ್ಯವನ್ನು ಎತ್ತಿ ಹಿಡಿದು ಸಮಾಜಕ್ಕೆ ಒಳಿತನ್ನು ಮಾಡುವ ಗುರುಗಳು ದೇವರಿಗೆ ಸಮಾನರು ಎಂದು ನುಡಿದರು.
ಗುರುಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ವೈಯಕ್ತಿಕ ಬದುಕನ್ನೇ ತ್ಯಾಗ ಮಾಡಿ,ಸಮಾಜಕ್ಕಾಗಿ ಇಡೀ ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಗುರುಗಳಿಗೆ ಗುರುವಂದನಾ ಸಲ್ಲಿಸುವ ಸಂಸ್ಕಾರ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಡಾ.ಅಮರಣ್ಣ ಕೊಬ್ರಿ ಹೇಳಿದರು.
ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಮಠವು ನಿರಂತರವಾಗಿ ಧಾರ್ಮಿಕ ಆದ್ಯಾತ್ಮಿಕ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೊಸ ಆಯಾಮನ್ನು ಇಡುತ್ತಾ,ಭಕ್ತರ ಏಳಿಗೆ ಹಾಗೂ ಗ್ರಾಮೀಣ ಅಭಿವೃದ್ಧಿ ಕೆಲಸವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ,ಪ್ರತಿಯೊಬ್ಬ ಭಕ್ತರು ವರ್ಷಕ್ಕೊಮ್ಮೆ ಗುರುವಂದನಾ ಕಾರ್ಯಕಮದಲ್ಲಿ ಭಾಗವಹಿಸಿ ಗುರುಕಾಣಿಕೆ ಸಮರ್ಪಿಸುವ ಸಂಕಲ್ಪ ಮಾಡಿದರೆ ಮಠದ ಅಭಿವೃದ್ಧಿಗೆ ಬಲ ಸಿಕ್ಕಂತಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಿವೃತ್ತ ಇಂಜಿನಿಯರ್ ನಿಂಗಣ್ಣ ಮುದ್ದಾ ಹೇಳಿದರು.
ಮರುಳ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಂತರದಲ್ಲಿ ತುಲಾಭಾರ ಸೇವೆ ವಿಜ್ರಂಬಣೆಯಿಂದ ಜರುಗಿತು. ಇದೇ ಸಂದರ್ಭದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸರಕಾರಿ ನೌಕರರಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ಈ ಸಮಾರಂಭದ ವೇದಿಕೆಯ ಮೇಲೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚಂದಣ್ಣ ಸೇರಿ,ಡಾ.ಅಮರಣ್ಣ ಕೊಬ್ರಿ, ಮಲ್ಲಿಕಾರ್ಜುನ ವಿರುಪಾಪುರ, ಚೆನ್ನಬಸಪ್ಪ ಜಾಯಿ,ಮಲ್ಕಣ್ಣ ಕೂಡ್ಲೂರ,ಅಮರಪ್ಪ ಹೇರುಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಶ್ರೀಶೈಲ್ ಬಂಟನೂರು ನಿರೂಪಿಸಿದರು, ಮಲ್ಲಣ್ಣ ಕೊಬ್ರಿ ಸರ್ವರನ್ನು ಸ್ವಾಗತಿಸಿದರು,ಚಂದಣ್ಣ ಚಡಗುಂಡ ವಂದಿಸಿದರು.

