28ನೇ ವರ್ಷದ ಇರುಮುಡಿ ಪೂಜೆ: ‘ಸನ್ನಿಧಾನ ರತ್ನ’ ಪ್ರಶಸ್ತಿ ಪ್ರದಾನ, ಮಹಾಪ್ರಸಾದ ವಿತರಣೆ
28ನೇ ವರ್ಷದ ಇರುಮುಡಿ ಪೂಜೆ: ‘ಸನ್ನಿಧಾನ ರತ್ನ’ ಪ್ರಶಸ್ತಿ ಪ್ರದಾನ, ಮಹಾಪ್ರಸಾದ ವಿತರಣೆ
ಕಲಬುರಗಿ: ಬಂಡಕ ಹಾಗೂ ಬೆಣ್ಣೂರ ಸನ್ನಿಧಾನದ ವತಿಯಿಂದ 28ನೇ ವರ್ಷದ ಇರುಮುಡಿ ಪೂಜೆ ಹಾಗೂ ಶಬರಿಮಲೆ ಯಾತ್ರೆಯ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ನಗರದ ಸುಲ್ತಾನಪೂರ ಕ್ರಾಸ್, ರಿಂಗ್‌ರೋಡ್‌ನಲ್ಲಿರುವ ಬಾಲಾಜಿ ಸ್ವಿಮ್ಮಿಂಗ್ ಪೂಲ್ ಆವರಣದ ‘ಸನ್ನಿಧಾನ’ದಲ್ಲಿ ಭಕ್ತಿಭಾವದಿಂದ ಆಯೋಜಿಸಲಾಯಿತು.
ಸನ್ನಿಧಾನದ ಗುರುಸ್ವಾಮಿಗಳಾದ ಶಿವಲಿಂಗಪ್ಪ ಪ್ರಭುರಾವ ಬಂಡಕ ಹಾಗೂ ಚಂದ್ರಶೇಖರ ರುಕ್ಕಪ್ಪ ಬೆಣ್ಣೂರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಶರಣಬಸವೇಶ್ವರರ ದಿವ್ಯ ಸಾನಿಧ್ಯದಲ್ಲಿ ಇರುಮುಡಿ ಪೂಜೆ ನೆರವೇರಿಸಲಾಯಿತು. ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸನ್ನಿಧಾನದ ವತಿಯಿಂದ ‘ಸನ್ನಿಧಾನ ರತ್ನ’ ಪ್ರಶಸ್ತಿ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ನಡೆಯಿತು. 2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ಗೊಬ್ಬುರ ಗ್ರಾಮದ ಕು. ಸೃಷ್ಟಿ ಪ್ರಭುಲಿಂಗ ಪಾಟೀಲ ಅವರನ್ನು ಸನ್ನಿಧಾನದ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗುರುಸ್ವಾಮಿಗಳು, ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಸರ್ವ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

