ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ಸಹಿಸಲಾಗದು ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಖಡಕ್ ಎಚ್ಚರಿಕೆ
ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ಸಹಿಸಲಾಗದು
ಅಧಿಕಾರಿಗಳಿಗೆ ಶಾಸಕ ಪ್ರಭು ಚವ್ಹಾಣ ಖಡಕ್ ಎಚ್ಚರಿಕೆ
ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಗುರುವಾರ ಔರಾದ ತಹಸೀಲ್ ಕಚೇರಿಯಲ್ಲಿ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಕಂದಾಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರ ಕೆಲಸಗಳಿಗೆ ತಕ್ಷಣ ಸ್ಪಂದಿಸುವAತೆ ಖಡಕ್ ಸೂಚನೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆ ಜನರೊಂದಿಗೆ ನೇರ ಸಂಪರ್ಕ ಹೊಂದಿರುವ ಪ್ರಮುಖ ಇಲಾಖೆ. ಜಮೀನು ದಾಖಲೆ, ಪಹಣಿ, ಮ್ಯೂಟೇಶನ್, ವಾರಸುದಾರ ಪ್ರಮಾಣ ಪತ್ರ, ಆದಾಯ-ಜಾತಿ ಪ್ರಮಾಣ ಪತ್ರ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಜನರು ಕಚೇರಿಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಜನರಿಗೆ ಅನಾವಶ್ಯಕ ತೊಂದರೆ ಆಗಬಾರದು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದರು.
ಗ್ರಾಮ ಸಂಚಾರದ ಸಂದರ್ಭದಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಕಂದಾಯ ಇಲಾಖೆ ಹಾಗೂ ಭೂದಾಖಲೆಗಳ ಇಲಾಖೆಯ ಬಗ್ಗೆಯೇ ಹೆಚ್ಚಿನ ದೂರುಗಳು ಕೇಳಿ ಬಂದಿವೆ. ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸರ್ವೇಯರ್‌ಗಳಿಗೆ ಹಣ ಕೊಡದಿದ್ದರೆ ಕೆಲಸ ಮಾಡುತ್ತಿಲ್ಲ, ಜಾತಿ ಪ್ರಮಾಣ ಪತ್ರ ಬೇಗ ಕೊಡುತ್ತಿಲ್ಲ, ಫಾರ್ಮ ನಂ.10 ಕೊಡಲು ಸತಾಯಿಸಲಾಗುತ್ತಿದೆ ಎನ್ನುವ ಹತ್ತಾರು ದೂರುಗಳು ಬರುತ್ತಿವೆ ನೀವೇನು ಮಾಡುತ್ತಿದ್ದೀರಿ ಎಂದು ಕೋಪಗೊಂಡರು.
ಸಾರ್ವಜನಿಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪದ ಮೇರೆಗೆ ಒಬ್ಬ ಗ್ರಾಮ ಲೆಕ್ಕಾಧಿಕಾರಿಯೂ ಅಮಾನತುಗೊಂಡಿದ್ದಾರೆ. ಜನತೆಗೆ ಸತಾಯಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಇದೊಂದು ಪಾಠದಂತಿದ್ದು, ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಹೇಳಿದರು.
ಸರ್ಕಾರದಿಂದ ಸಂಬಳ ಪಡೆಯುವ ಅಧಿಕಾರಿಗಳು ಮತ್ತು ಸಿಬ್ಬಂದಿ ದುಡ್ಡಿನ ಹಪಾಹಪಿಗೆ ಬಿಳುವುದು ಸರಿಯಲ್ಲ. ಹೊಸ ತಹಸೀಲ್ದಾರರು ಬಂದ ನಂತರ ಪ್ರಕರಣಗಳು ಕಡಿಮೆಯಾಗಿವೆ. ಇದನ್ನು ಸಂಪೂರ್ಣ ಹತೋಟಿಗೆ ತಂದು ಕಂದಾಯ ಇಲಾಖೆಯನ್ನು ಜನಸ್ನೇಹಿಯಾಗಿಸಲು ಪ್ರಯತ್ನಿಸಬೇಕು. ಎಡಿಎಲ್‌ಆರ್ ಕಛೇರಿಯಲ್ಲಿ ರೈತರ ಕೆಲಸಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಎಡಿಎಲ್‌ಆರ್ ತಮ್ಮ ಸಿಬ್ಬಂದಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಕಚೇರಿ ಆವರಣದಲ್ಲಿ ಓಡಾಡುವ ದಲ್ಲಾಳಿಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದು ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಹೆಳಿದರು.
ಸಾರ್ವಜನಿಕರ ಅರ್ಜಿಗಳು ಅನಾವಶ್ಯಕವಾಗಿ ಬಾಕಿ ಉಳಿಯಬಾರದು. ದಾಖಲಾತಿಗಳು ಸರಿಯಿದ್ದರೆ ಮಾಡಿಕೊಡಿ, ಇಲ್ಲವೇ ರಿಜೆಕ್ಟ್ ಮಾಡಿ ಆದರೆ ವಿಳಂಬ ಮಾಡದಿರಿ. ಕೆಲಸಗಳಲ್ಲಿ ವಿಳಂಬ ಕಂಡುಬAದರೆ ಸಂಬAಧಿಸಿದ ಅಧಿಕಾರಿಗಳೇ ಜವಾಬ್ದಾರರಾಗಬೇಕು ಎಂದು ಎಚ್ಚರಿಸಿದರು. ಜನರ ಸಮಸ್ಯೆಗಳನ್ನು ಮನಸಾರೆ ಆಲಿಸಿ, ನಿಯಮಾನುಸಾರ ತ್ವರಿತವಾಗಿ ಪರಿಹಾರ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸೂಚಿಸಿದರು.
ಗ್ರಾಮ ಮಟ್ಟದಲ್ಲಿ ಸಿಬ್ಬಂದಿ ನಿಯಮಿತವಾಗಿ ಹಾಜರಿದ್ದು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕಚೇರಿಗಳಲ್ಲಿ ಪಾರದರ್ಶಕತೆ ಮತ್ತು ಶಿಸ್ತಿನ ವಾತಾವರಣ ಇರಬೇಕು. ದೂರುಗಳು ಬಂದಲ್ಲಿ ಯಾವುದೇ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಂದರ್ಭದಲ್ಲಿ ಔರಾದ ತಹಸೀಲ್ದಾರ ಮಹೇಶ ಪಾಟೀಲ, ಕಮಲನಗರ ತಹಸೀಲ್ದಾರ ಅಮಿತಕುಮಾರ ಕುಲಕರ್ಣಿ, ಭೂದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶ್ರೀ, ಗ್ರೇಡ್ 2 ತಹಸೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
