ಗುಣದಿಂದ ಶ್ರೇಷ್ಠನಾದಾಗ ಮನುಷ್ಯ ಅಜರಾಮರ : ಶಿವಕುಮಾರಶ್ರೀ

ಗುಣದಿಂದ ಶ್ರೇಷ್ಠನಾದಾಗ ಮನುಷ್ಯ ಅಜರಾಮರ : ಶಿವಕುಮಾರಶ್ರೀ

ವೆಂಕಯ್ಯ ಗುತ್ತೇದಾರ್ 29ನೇ ಪುಣ್ಯಾರಾಧನೆ

ಗುಣದಿಂದ ಶ್ರೇಷ್ಠನಾದಾಗ ಮನುಷ್ಯ ಅಜರಾಮರ : ಶಿವಕುಮಾರಶ್ರೀ

ಅಫಜಲಪುರ : ಮನುಷ್ಯ ಜೀವಿತಾವತಧಿಯಲ್ಲಿ ಗುಣದಿಂದ ಶ್ರೇಷ್ಠ ಬಾಳ್ವೆ ಮಾಡಿದಾಗ ಅಜರಾಮರನಾಗುತ್ತಾನೆ ಮತ್ತು ಶಾಶ್ವತವಾಗಿ ಜನಮನದಲ್ಲಿ ಉಳಿದುಕೊಳ್ಳುತ್ತಾನೆ ಎಂದು ಬೀದರ ಚಿದಂಬರಾಶ್ರಮದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು. 

  ಸ್ಟೇಷನ್ ಗಾಣಗಾಪುರದ ಮಹಾ ಮಾನವತಾವಾದಿ ವೆಂಕಯ್ಯ ಕೂಸಯ್ಯ ಗುತ್ತೇದಾರ್ ಅವರ 29ನೇ ಪುಣ್ಯಾರಾಧನೆ ಅಂಗವಾಗಿ ಸೋಮವಾರ ಜೂನ್ 22ರಂದು ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಮನುಷ್ಯ ದುಡ್ಡಿನಿಂದ ದೊಡ್ಡವನಾಗುವುದಿಲ್ಲ. ಗುಣದಿಂದ ಮಾತ್ರ ಶ್ರೇಷ್ಠ ವ್ಯಕ್ತಿತ್ವವನ್ನು ಹೊಂದಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾನೆ. ಅದಕ್ಕೆ ವೆಂಕಯ್ಯ ಗುತ್ತೇದಾರ್ ಜ್ವಲಂತ ಸಾಕ್ಷಿಯಾಗಿದ್ದು ಅವರು ಆಗಲಿ 29 ಸಂದರೂ ಪುಣ್ಯಾರಾಧನೆಗೆ ಇಷ್ಟು ಜನ ಸೇರಿ ಗೌರವ ಪ್ರೀತಿಯನ್ನು ಹಂಚಿಕೊಳ್ಳುತ್ತಿರುವುದು ಅವರ ಶ್ರೇಷ್ಠ ಗುಣ ಮತ್ತು ಸಮಾಜವನ್ನು ಪ್ರೀತಿಸಿದ್ಧಕ್ಕೆ ದೊರೆತ ಗೌರವವಾಗಿದೆ ಎಂದು ಶಿವಕುಮಾರ ಶ್ರೀಗಳು ಹೇಳಿದರು.

*ಪರಹಿತದ ಬದುಕು ಪುಣ್ಯದ ಬದುಕು*

 ಪರಹಿತಕ್ಕಾಗಿ ಬದುಕು ಮಾಡಿದವರು ಪುಣ್ಯಾತ್ಮರಾಗುತ್ತಾರೆ ಮತ್ತು ಅಂತಹ ಜೀವಿಗಳಿಗೆ ಸಾವು ಎಂಬುದಿಲ್ಲ ಅಜರಾಮರವಾಗಿ ಉಳಿಯುತ್ತಾರೆ ಎಂದು ಅಫಜಲಪುರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಅಭಿಪ್ರಾಯ ಪಟ್ಟರು. 

ವೆಂಕಯ್ಯ ಗುತ್ತೇದಾರರು ದೀನದಲಿತರ, ಶೋಷಿತರ ಕಷ್ಟಕ್ಕೆ ಸ್ಪಂದಿಸಿ ದಾನ ಧರ್ಮದಿಂದ ತನ್ನ ಬದುಕನ್ನು ಸಮಾಜಕ್ಕಾಗಿ ಧಾರೆಯೆರೆದವರು. ಕುಟುಂಬ ಹಾಗೂ ಸಮಾಜವನ್ನು ಪ್ರೀತಿಸಿ ಆದರ್ಶದ ಬದುಕು ಮಾಡಿ ಜೀವನದ ಉದಾತ್ತ ತತ್ವವನ್ನು ಬೋಧಿಸಿದವರು. ಅಂತವರ ಕಾಯ ಅಳಿದರೂ ಕಾಯಕ ಉಳಿಯುತ್ತದೆ ಮತ್ತು ಅದು ಅನುಕರಣೀಯ.ರೈತರ ಬಗ್ಗೆ ವಿಶೇಷ ಕಾಳಜಿಯಿಂದ ಅವರು ಅಫಜಲಪುರ ತಾಲೂಕಿನ 60 ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರುಣಿಸುವ ಅಣೆಕಟ್ಟು ನಿರ್ಮಾಣದ ರೂವಾರಿಯಾದರು ಎಂದು ಹೇಳಿದರು.

*ಸಮ ಸಮಾಜದ ನಿರ್ಮಾತೃ ಗುತ್ತೇದಾರ ಕುಟುಂಬ*

ವೆಂಕಯ್ಯ ಕುತ್ತೇದಾರರ ಕುಟುಂಬ ಉತ್ತಮ ಸಂಸ್ಕಾರ ಮೌಲ್ಯಗಳನ್ನು ರೂಢಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕೆ ನೆರವಾದ ಆದರ್ಶ ಕುಟುಂಬ. ತನ್ನಂತೆ ಎಲ್ಲರನ್ನು ಕಂಡು ನೆರವಾದವರು. ಅದಕ್ಕೆ ಅವರ ಮಕ್ಕಳಾದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಮತ್ತು ಎಲ್ಲ ಸಹೋದರರು ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಜನ ಸೇವಾ ನಿರತರಾಗಿದ್ದಾರೆ. ಜನರ ಬಾಳಿಗೆ ನೆರವಾದ ಗುತ್ತೇದಾರ್ ಕುಟುಂಬದ ಮೇಲೆ ಜನರ ವಿಶ್ವಾಸ ಹೀಗೆ ಸದಾ ಇರಲಿ ಎಂದು ಈಡಿಗ ಸಮಾಜದ ಗುರುಗಳಾದ ಡಾ. ಪ್ರಣವಾನಂದ ಶ್ರೀಗಳು ಹೇಳಿದರು. 

*ಸತ್ಯದ ಕಾಯಕದಿಂದ ಶ್ರೇಷ್ಠ ವ್ಯಕ್ತಿತ್ವ*

ಮನುಷ್ಯನು ಹೊಟ್ಟೆಕಿಚ್ಚಿನ ಬದುಕಿಗೆ ಬದಲಾಗಿ ಹೊಟ್ಟೆ ತುಂಬಿಸುವ ಜೀವನ ಸಾಗಿಸಬೇಕು. ಪ್ರೀತಿ ಆದರದಿಂದ ಜನರ ಸೇವೆ ಮಾಡಿದರೆ ಮಾತ್ರ ಶ್ರೇಷ್ಠ ವ್ಯಕ್ತಿತ್ವ ನಿರ್ಮಾಣಗೊಳ್ಳುತ್ತದೆ, ವೆಂಕಯ್ಯ ಗುತ್ತೇದಾರ ಪ್ರೀತಿಯ ಜೀವನ ಮಾಡಿ ಸಂಸ್ಕಾರಯುತ ಬದುಕಿಗೆ ಪ್ರೇರಣೆ ನೀಡಿದ ಮಹಾತ್ಮ ನಾದುದರಿಂದ 29 ವರ್ಷಗಳಿಂದ ಪುಣ್ಯಾರಾಧನೆ ಜನರ ಪ್ರೀತಿ-ವಿಶ್ವಾಸದಿಂದ ಅವರ ಮಕ್ಕಳು ಎಲ್ಲರನ್ನೂ ಸೇರಿಸಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹಿಂಚಗೇರಿ ಸಂಸ್ಥಾನ ಮಠದ ಶ್ರೀ ಶಂಭುಲಿಂಗ ಶಿವಯೋಗಿ ಶಿವಾಚಾರ್ಯರು ಹೇಳಿದರು. 

    ಸಭೆಯಲ್ಲಿ ಸ್ವಾಗತ ಭಾಷಣ ಮಾಡಿದ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ ತಂದೆಯವರನ್ನು ಅಗಲಿ 29 ವರ್ಷ ಸಂದರೂ ಜನರು ತೋರಿದ ಪ್ರೀತಿ ವಿಶ್ವಾಸದಿಂದ ಇಡೀ ನಮ್ಮ ಕುಟುಂಬ ನೆಮ್ಮದಿ ಹಾಗೂ ಶ್ರೇಯಸ್ಸನ್ನು ಹೊಂದುತ್ತಿದೆ. ಜನರ ಈ ವಿಶ್ವಾಸದ ಬೆಂಗಾವಲಿಗೆ ಎಂದು ಕೂಡ ಚ್ಯುತಿ ಬರದ ಹಾಗೆ ಕುಟುಂಬವು ಸದಾ ಜನ ಸೇವೆಯಲ್ಲಿ ಇರುತ್ತದೆ. ಪ್ರತಿವರ್ಷದ ಪುಣ್ಯಾರಾಧನೆ ಭಜನೆ, ಸಂಗೀತದೊಂದಿಗೆ ಹಾಗೂ ಆಧ್ಯಾತ್ಮ ಗುರುಗಳ ಮತ್ತು ಹಿತೈಷಿಗಳು ತಾಲೂಕಿನ ಜನರ ಆಗಮನದಿಂದ ಅತ್ಯಂತ ವೈಭವದಿಂದ ಪುಣ್ಯಾರಾಧನೆ ಜರಗುತ್ತಿದೆ ಎಂದು ಹೇಳಿದರು. ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ ಪ್ರಾಸ್ತಾವಿಕ ಮಾತುಗಳನ್ನಾಡಿದರು.

   ಕಾರ್ಯಕ್ರಮದಲ್ಲಿ ಜಿಡಗಾ ಮಠದ ಶ್ರೀ ಷಡಕ್ಷರಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, ಚಿಣಮಗೇರಿ ಮಹಾಂತೇಶ್ವರ ಸಂಸ್ಥಾನ ಮಠದ ವೀರ ಮಹಾಂತ ಶಿವಾಚಾರ್ಯರು, ಬಡದಾಳ ತೇರಿನ ಮಠದ ಶ್ರೀ ಚನ್ನಮಲ್ಲೇಶ್ವರ ಶಿವಾಚಾರ್ಯರು, ಕಲಬುರಗಿ ಶಹಬಜಾರ್ ಚೌದಾಪೂರಿ ಹಿರೇಮಠದ ಡಾ. ರಾಜಶೇಖರ್ ಶಿವಾಚಾರ್ಯರು , ಒಕ್ಕಲಿಗ ಮುದ್ದಣ ಶರಣರು, ಗಣಪತ ರಾವ್ ಮಹಾರಾಜ್ ಆಶೀರ್ವದಿಸಿದರು.

*ಉಚಿತ ಆರೋಗ್ಯ ಶಿಬಿರ*

ಪುಣ್ಯಾರಾಧನೆಯ ಪ್ರಯುಕ್ತ ಕಲಬುರಗಿಯ ಜೀವಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಯಿತು. ಡಾ. ಅಜಯ್ ಅಶೋಕ್ ಗುತ್ತೇದಾರ್ ನೇತೃತ್ವದ ವೈದ್ಯರ ತಂಡವು ರಕ್ತದೊತ್ತಡ,ಸಕ್ಕರೆ ಕಾಯಿಲೆ, ಕಣ್ಣಿನ ತಪಾಸಣೆ ನಡೆಸಿತು. ಇದೇ ಸಂದರ್ಭದಲ್ಲಿ ಅನೇಕರು ರಕ್ತದಾನ ಮಾಡಿದರು.

  ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ್, ಚಂದ್ರಕಾಂತ ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ, ಸತೀಶ್ ಗುತ್ತೇದಾರ್, ಅರವಿಂದ ಗುತ್ತೇದಾರ, ನಿತಿನ್ ಗುತ್ತೇದಾರ್, ಸಂತೋಷ್ ಗುತ್ತೇದಾರ,ಬಾಲರಾಜ್ ಗುತ್ತೇದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಹಿರಿಯ ಸಂಗೀತ ಕಲಾವಿದರಾದ ಬಸಯ್ಯ ಬಿ. ಗುತ್ತೇದಾರ್ ತೆಲ್ಲೂರ್ ಮತ್ತು ಬಳಗದವರು ಪ್ರಾರ್ಥನಾ ಗೀತೆ ನಡೆಸಿಕೊಟ್ಟರು. ಸಂಗಮನಾಥ ನೀಲೂರ ಕಾರ್ಯಕ್ರಮ ನಿರೂಪಿಸಿದರು.