ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕಮಲನಗರ
ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕಮಲನಗರ
ಇಂದು ಕಮಲನಗರ ತಾಲ್ಲೂಕಿನ ಬಾಲೂರು ಹಾಗೂ ಮುರ್ಗ ಗ್ರಾಮಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಎಂ.ಎ. ಅನ್ಸಾರಿ, ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಮಾರ್ತಾಂಡ್, ಕೃಷಿ ಅಧಿಕಾರಿಗಳಾದ ಶ್ರೀ ಶತ್ರುಘ್ನ ಅವರು ಭೇಟಿ ನೀಡಿದರು. ಈ ವೇಳೆ ರೈತ ಸಂಘದ ಅಧ್ಯಕ್ಷರಾದ ಶ್ರೀ ಪ್ರವೀಣ ಕುಲಕರ್ಣಿ, ಕೃಷಿಕ ಸಮಾಜದ ಉಪಾಧ್ಯಕ್ಷರಾದ ಶ್ರೀ ವಿಠ್ಠಲ್ ಪಾಟೀಲ್ ಹಾಗೂ ಜಿಲ್ಲಾ ಪ್ರತಿನಿಧಿಗಳಾದ ಶ್ರೀ ಕಮನಣ್ಣ ಉಪಸ್ಥಿತರಿದ್ದರು.
ಅಧಿಕಾರಿಗಳು ಗ್ರಾಮಗಳಲ್ಲಿನ ತೊಗರಿ, ಸೋಯಾಬೀನ್ ಸೇರಿದಂತೆ ವಿವಿಧ ಬೆಳೆಗಳ ಬೆಳವಣಿಗೆಯನ್ನು ಪರಿಶೀಲಿಸಿ ರೈತರಿಗೆ ಈ ಕೆಳಕಂಡ ಸಲಹೆಗಳನ್ನು ನೀಡಿದರು.
ಸೋಯಾಬೀನ್ ಬೆಳೆಯ ಉತ್ತಮ ಬೆಳವಣಿಗೆಗಾಗಿ 19:19:19 ನೀರಿನಲ್ಲಿ ಕರಗುವ ಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 10 ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು.
ಜಿಪ್ಸಂ ಅಥವಾ 20:20:0:13 ಗೊಬ್ಬರವನ್ನು ಶಿಫಾರಸು ಮಾಡಿದ ಪ್ರಮಾಣದಲ್ಲಿ ಬಳಸುವುದರಿಂದ ಗಂಧಕದ (Sulphur) ಅಂಶ ಹೆಚ್ಚಾಗಿ ಸೋಯಾಬೀನ್ ಕಾಳಿನ ಎಣ್ಣೆಯ ಪ್ರಮಾಣ ಹೆಚ್ಚಲು ಹಾಗೂ ಬೆಳೆಯ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
ರೈತರು ಸಮಗ್ರ ಕೃಷಿ ಪದ್ಧತಿ (Integrated Farming System - IFS) ಅಳವಡಿಸಿಕೊಳ್ಳಬೇಕು. ಇದರಿಂದ ಒಂದೇ ಬೆಳೆಯ ಮೇಲೆ ಅವಲಂಬಿತವಾಗದೆ ಕೃಷಿ, ಪಶುಸಂಗೋಪನೆ, ತೋಟಗಾರಿಕೆ ಹಾಗೂ ಇತರ ಪೂರಕ ಚಟುವಟಿಕೆಗಳ ಮೂಲಕ ನಿರಂತರ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಪ್ರತಿಕೂಲ ಹವಾಮಾನದಿಂದ ಒಂದೇ ಬೆಳೆ ಹಾನಿಗೊಳಗಾದರೂ ಇತರೆ ಮೂಲಗಳಿಂದ ಆದಾಯ ದೊರೆಯುವುದರಿಂದ ರೈತರ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ.
ಕೃಷಿ ಇಲಾಖೆಯ ವಿವಿಧ ಯೋಜೆಗಳಾದ ಕೃಷಿ ಯಾಂತ್ರೀಕರಣ, ತುಂತುರು ನೀರಾವರಿ (Sprinkler), ಹನಿ ನೀರಾವರಿ (Drip Irrigation) ಸೇರಿದಂತೆ ಸರ್ಕಾರದ ಮಾರ್ಗಸೂಚಿಗಳನ್ವಯ ಲಭ್ಯವಿರುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಯಿತು.
ಸಾಲ ಪಡೆದಿರುವ ರೈತರು (Loanee Farmers) ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ತೊಗರಿ ಹಾಗೂ ಸೋಯಾಬೀನ್ ಬೆಳೆಗಳಿಗೆ 2026ರ ಆಗಸ್ಟ್ 10ರೊಳಗೆ ಕಡ್ಡಾಯವಾಗಿ ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಯಿತು.

