ಕಾರಣಗಿರಿಯಲ್ಲಿ ಒಂಬತ್ತು ಗಣ್ಯರಿಗೆ ಪ್ರತಿಷ್ಠಿತ 'ನಾರದ ಪುರಸ್ಕಾರ'

ಕಾರಣಗಿರಿಯಲ್ಲಿ ಒಂಬತ್ತು ಗಣ್ಯರಿಗೆ ಪ್ರತಿಷ್ಠಿತ 'ನಾರದ ಪುರಸ್ಕಾರ'

ನಾರದರ ಆದರ್ಶಗಳು ಪತ್ರಿಕೋದ್ಯಮಕ್ಕೆ ಪ್ರೇರಣೆಯಾಗಲಿ

ಕಾರಣಗಿರಿಯಲ್ಲಿ ಒಂಬತ್ತು ಗಣ್ಯರಿಗೆ ಪ್ರತಿಷ್ಠಿತ 'ನಾರದ ಪುರಸ್ಕಾರ'

 ಸಮಾಜದಲ್ಲಿ ಸತ್ಯವನ್ನು ನಿರ್ಭೀತಿಯಿಂದ ಪ್ರತಿಪಾದಿಸಿ, ಆಡಳಿತಗಾರರಿಗೆ ಸೂಕ್ತ ಸಮಯದಲ್ಲಿ ಎಚ್ಚರಿಕೆ ನೀಡುವ ನಾರದರ ಆದರ್ಶಗಳು ಇಂದಿನ ಪತ್ರಿಕೋದ್ಯಮಕ್ಕೆ ದಾರಿದೀಪವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಗ್ರ ಕರ್ನಾಟಕ ಪ್ರಾಂತದ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಹೇಳಿದರು.

ಗ್ರಾಮಭಾರತಿ ಟ್ರಸ್ಟ್ (ರಿ.), ಕಾರಣಗಿರಿ ಹಾಗೂ ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆ ಆಶ್ರಯದಲ್ಲಿ ಕಾರಣಗಿರಿಯ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ನಡೆದ ಪ್ರತಿಷ್ಠಿತ 'ನಾರದ ಪುರಸ್ಕಾರ' ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

"ನಾರದರನ್ನು ಕೇವಲ ಹಾಸ್ಯಪ್ರವೃತ್ತಿಯ ವ್ಯಕ್ತಿತ್ವವಾಗಿ ನೋಡುವುದು ತಪ್ಪು. ಅವರು ನಿರಂತರ ಸಂಚಾರದಲ್ಲಿದ್ದು ಸಮಾಜದ ಒಳಿತಿಗಾಗಿ ಸಂದೇಶ ಸಾರಿದ ಆದ್ಯ ಸಂವಹನಕಾರರು. ನಾರಾಯಣ ನಾಮಸ್ಮರಣೆಯೊಂದಿಗೆ ಸಮಾಜದಲ್ಲಿ ಸಾತ್ವಿಕತೆಯನ್ನು ಬೆಳೆಸಿದ ಅವರು, ರಾಜರಿಗೆ ಎಚ್ಚರಿಕೆ ನೀಡಿ ಸಮಸ್ಯೆಗಳ ಪರಿಹಾರಕ್ಕೂ ಮಾರ್ಗದರ್ಶನ ಮಾಡುತ್ತಿದ್ದರು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವೂ ಇದೇ ಜವಾಬ್ದಾರಿಯನ್ನು ನಿಭಾಯಿಸಬೇಕು" ಎಂದು ಅರುಣ್ ಕುಮಾರ್ ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯ ಪ್ರಧಾನ ಸಂಪಾದಕ ಹಾದಿಗಲ್ಲು ಲಕ್ಷ್ಮೀನಾರಾಯಣ ಮಾತನಾಡಿ, "ದೇಶಹಿತವೇ ಪತ್ರಿಕೋದ್ಯಮದ ಧ್ಯೇಯವಾಗಬೇಕು. ಸಂವೇದನಾಶೀಲತೆ, ಸಾಮಾಜಿಕ ಕಾಳಜಿ ಹಾಗೂ ವೃತ್ತಿನಿಷ್ಠೆಯನ್ನು ಪತ್ರಕರ್ತರು ಉಳಿಸಿಕೊಳ್ಳಬೇಕು. ತಾವು ಬೆಳೆದು ಬಂದ ಮೌಲ್ಯಗಳು ಮತ್ತು ಹಾದಿಯನ್ನು ಎಂದಿಗೂ ಮರೆಯಬಾರದು" ಎಂದು ಹೇಳಿದರು.

ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹಾಗೂ ಕಾರಣಗಿರಿ ಕಲಾದರ್ಶನ ಸಂಪಾದಕ ಹನಿಯ ರವಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ವರ್ಷಗಳಿಂದ ಕಾರಣಗಿರಿ ಕಲಾದರ್ಶನ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದು, ಪತ್ರಕರ್ತರ ಜೊತೆಗೆ ಪತ್ರಿಕಾ ಏಜೆಂಟರ ಸೇವೆಯನ್ನೂ ಗುರುತಿಸಿ ನಾರದ ಪುರಸ್ಕಾರ ನೀಡುತ್ತಿರುವುದು ವಿಶೇಷ ಎಂದು ತಿಳಿಸಿದರು. ಪ್ರೀತಿ, ವಿಶ್ವಾಸ ಮತ್ತು ಆತ್ಮೀಯತೆಯೇ ಸಂಸ್ಥೆಯ ಕಾರ್ಯಚಟುವಟಿಕೆಗಳ ಮೂಲ ತತ್ವವಾಗಿದೆ ಎಂದರು.

ಕಳೆದ ನಾಲ್ಕು ದಶಕಗಳಿಂದ ಶ್ರೀ ಸಿದ್ಧಿವಿನಾಯಕ ಸನ್ನಿಧಿಯಲ್ಲಿ ಸಾವಿರಕ್ಕೂ ಹೆಚ್ಚು ಸಾಮೂಹಿಕ ಸತ್ಯನಾರಾಯಣ ಪೂಜೆಗಳು, ನೂರಾರು ಸಾಧು-ಸಂತರ ಆಗಮನ ಹಾಗೂ ಎರಡು ಸಾವಿರಕ್ಕೂ ಅಧಿಕ ಕಲಾವಿದರ ಕಲಾಪ್ರದರ್ಶನಗಳು ನಡೆದಿರುವುದು ಕಾರಣಗಿರಿಯ ಸಾಂಸ್ಕೃತಿಕ ಪರಂಪರೆಯ ವೈಶಿಷ್ಟ್ಯವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕನ್ನಡ ನ್ಯೂಸ್ ಅಂತರ್ಜಾಲ ಪತ್ರಿಕೆಯ ಸಂಪಾದಕ ರಘುಪತಿ ಯಾಜಿ, ಪರಿಸರ ಪತ್ರಕರ್ತ ರಘುನಂದನ್ ಭಟ್ ನರೂರ, ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ಸುಧೀಂದ್ರ, ಹಿರಿಯ ಪತ್ರಿಕಾ ಪ್ರತಿನಿಧಿ ಗಣಪತಿ ಪಂಡಿತ್, ಹೊಸದಿಗಂತ ಪ್ರಧಾನ ವರದಿಗಾರ ಸುರೇಶ್ ಡಿ. ಪಳ್ಳಿ, ಟಿ.ವಿ. ವರದಿಗಾರ್ತಿ ಶೈಲಜಾ ಗೊರ್ನಮನೆ, ಹೊಸದಿಗಂತ ಶಿವಮೊಗ್ಗ ಸಂಪಾದಕ ವಾದಿರಾಜ್ ಕಮರೂರು, ಶ್ರೀಧರ ಸಂದೇಶ ಸಂಪಾದಕ ಗಜಾನನ ಭಟ್ಟ ರೇವಣಕಟ್ಟ ಹಾಗೂ ಅಂಕಣಕಾರ-ಲೇಖಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಅವರಿಗೆ ಪ್ರತಿಷ್ಠಿತ ನಾರದ ಪುರಸ್ಕಾರ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಕಲಾಭಾರತಿ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ರಾಷ್ಟ್ರೋತ್ಥಾನ ಬಳಗದ ಕಾರ್ಯದರ್ಶಿ ನಳಿನಚಂದ್ರ ಸ್ವಾಗತಿಸಿದರು. ವಸುಧಾ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು.