"ಮೋಹನ ತರಂಗಿಣಿ" ಪ್ರೇಮಕಥೆಯ ಮಹಾ ಕಾವ್ಯ - ಡಾ.ಶಾಂತಪ್ಪ ಡಂಬಳ.
"ಮೋಹನ ತರಂಗಿಣಿ" ಪ್ರೇಮಕಥೆಯ ಮಹಾ ಕಾವ್ಯ - ಡಾ.ಶಾಂತಪ್ಪ ಡಂಬಳ.
ದೇವದುರ್ಗ: ಜನಸಾಮಾನ್ಯರ, ಜನಪದ ಶೈಲಿಯಲ್ಲಿ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ರಚಿಸಿರುವ ಕನಕದಾಸರ "ಮೋಹನ ತರಂಗಿಣಿ"ಕೃತಿಯು ಕೃಷ್ಣ ರುಕ್ಮಿಣಿ,ರತಿ ಮನ್ಮಥರ, ಪ್ರೇಮಕಥೆಯನ್ನು ತಿಳಿಪಡಿಸುವ ಮಹಾಕಾವ್ಯದ ಜತೆಗೆ ಭಕ್ತಿ ತತ್ವ, ಹಾಗೂ ವರ್ಣನೆಗಳಿಂದ ತುಂಬಿ ತುಳುಕುತ್ತಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿ ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಡಾ.ಶಾಂತಪ್ಪ ಡಂಬಳ ಹೇಳಿದರು.
ನಗರದ ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜನಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಗರದ ಕಲಾನಿಕೇತನ ಟ್ರಸ್ಟ್ ಸಯೋಗದಲ್ಲಿ ಕನ್ನಡದ ಸ್ವಂತ ಕವಿ ಕನಕದಾಸರ ಕುರಿತು "ಕನಕ ದರ್ಶನ" ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೃತಿಯಲ್ಲಿ ಒಟ್ಟು 2800 ಪದ್ಯಗಳ ಜೊತೆಗೆ 42 ಸಂಧಿಗಳು ಸಹ ಈ ಕೃತಿಯಲ್ಲಿ ಕಾಣಬಹುದಾಗಿದ್ದು,ಇದಕ್ಕೆ ಶೃಂಗಾರ ಕಾವ್ಯ ಎಂತಲೂ ಕರೆಯುತ್ತಾರೆ.ಅಲ್ಲದೆ ಕೃಷ್ಣನ ದ್ವಾರಾವತಿ ನಗರದ ವರ್ಣನೆ ಹಾಗೂ ಪೌರಾಣಿಕ ಹಿನ್ನೆಲೆಯ ಜೊತೆಗೆ ಭಕ್ತಿಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಹೇಳಿದರು.
ಪ್ರಣಯ,ಪ್ರೇಮ,ಸರಸ,ಸಲ್ಲಾಪ ಎಲ್ಲವೂ ತುಂಬಿಕೊಂಡಿದ್ದು, ಸತಿಪತಿಯರ ಸರಸ ಸಂಭಾಷಣೆಯ ಕುರಿತು ಪೂರ್ವ ಪೀಠಿಕೆಯೊಂದಿಗೆ ಮಾರ್ಮಿಕವಾಗಿ ರಚಿಸಿದ ಈ ಕೃತಿ ಯಲ್ಲಿ ಶ್ರೀ ಕೃಷ್ಣನ ಮೊಮ್ಮಗ ಅನಿರುದ್ಧ ಹಾಗೂ ಬಾಣಸುರನ ಮಗಳಾದ ಉಷಯರ ಪ್ರೇಮ ಮತ್ತು ವಿವಾಹದ ಮುಖ್ಯ ಕಥಾ ಹಂದರವೆ ಹೆಣೆದಿದ್ದಾರೆ ಎಂದು ಸವಿಸ್ತಾರವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳು ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜ ಬ್ಯಾಗವಾಟ ಮಾತನಾಡಿ, ಜನಪರ ಸಾಮಾಜಿಕ ಚಿಂತನೆಗಳನ್ನು ತಮ್ಮ ಕೃತಿಯ ಮೂಲಕ ಸಮಾಜ ಸುಧಾರಣೆಗೊಳಿಸುವುದರ ಜೊತೆಗೆ ಸಮ ಸಮಾಜ ಕಟ್ಟುವಲ್ಲಿ ಹಗಲಿರುಳು ಶ್ರಮಿಸಿದ ಕನ್ನಡದ ಸಂತ ಕವಿ ಕನಕದಾಸರ ಆದರ್ಶಗಳು ನಮಗೆಲ್ಲ ಸ್ಪೂರ್ತಿ ಎಂದು ನುಡಿದರು.
ಈ ಸಮಾರಂಭದ ವೇದಿಕೆಯ ಮೇಲೆ ಜ್ಞಾನ ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮುತ್ತಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು,ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಪ್ರಸ್ತಾವಿಕ ಮಾತುಗಳಾಡಿದರು, ಕು,ಆರತಿ ಸ್ವಾಗತಿಸಿದರು,ಕು. ಚೈತ್ರಾ ನಿರೂಪಿಸಿ ವಂದಿಸಿದರು.

