ಕೃಷ್ಣಾ ರೆಡ್ಡಿ ಆಯೋಜಿಸಿದ್ದ ಉದನೂರ ಪ್ರಿಮಿಯರ್ ಲೀಗ್: ದತ್ತಾ ಸ್ಪೋರ್ಟ್ಸ್ ಚಾಂಪಿಯನ್, ₹50 ಸಾವಿರ ಬಹುಮಾನ ತನ್ನದಾಗಿಸಿಕೊಂಡ ತಂಡ
ಕೃಷ್ಣಾ ರೆಡ್ಡಿ ಆಯೋಜಿಸಿದ್ದ ಉದನೂರ ಪ್ರಿಮಿಯರ್ ಲೀಗ್: ದತ್ತಾ ಸ್ಪೋರ್ಟ್ಸ್ ಚಾಂಪಿಯನ್, ₹50 ಸಾವಿರ ಬಹುಮಾನ ತನ್ನದಾಗಿಸಿಕೊಂಡ ತಂಡ
ಕಲಬುರಗಿ ; ದಕ್ಷಿಣ ಕ್ಷೇತ್ರದ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಉದನೂರ ಪ್ರಿಮಿಯರ್ ಲೀಗ್ (UPL) ಸೀಸನ್-1 ಕ್ರಿಕೆಟ್ ಟೂರ್ನಿಯು ಭಾನುವಾರ ಅದ್ಧೂರಿಯಾಗಿ ಸಮಾರೋಪಗೊಂಡಿತು. ಎರಡು ವಾರಗಳ ಕಾಲ ನಡೆದ ಈ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳಿಗೆ ರೋಚಕ ಪಂದ್ಯಗಳ ಮನರಂಜನೆ ನೀಡಿದವು. ಅಂತಿಮವಾಗಿ ದತ್ತಾ ಸ್ಪೋರ್ಟ್ಸ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡು ಚಾಂಪಿಯನ್ ಆಗಿ ಹೊರಹೊಮ್ಮಿತು.
ಕಲಬುರಗಿ ತಾಲ್ಲೂಕಿನ ಉದನೂರ ಗ್ರಾಮದ ಹೊರವಲಯದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದತ್ತಾ ಸ್ಪೋರ್ಟ್ಸ್ ಹಾಗೂ 11 ಸ್ಟಾರ್ ತಂಡಗಳು ಮುಖಾಮುಖಿಯಾದವು. ಮೊದಲು ಬ್ಯಾಟಿಂಗ್ ಮಾಡಿದ ದತ್ತಾ ಸ್ಪೋರ್ಟ್ಸ್ ತಂಡ ನಿಗದಿತ 10 ಓವರ್‌ಗಳಲ್ಲಿ 138 ರನ್‌ಗಳ ಸವಾಲಿನ ಗುರಿ ನೀಡಿತು. ಗುರಿ ಬೆನ್ನಟ್ಟಿದ 11 ಸ್ಟಾರ್ ತಂಡ ಉತ್ತಮ ಹೋರಾಟ ನೀಡಿದರೂ 102 ರನ್‌ಗಳಿಗೆ ಸೀಮಿತವಾಗಿ ಸೋಲೊಪ್ಪಿಕೊಂಡಿತು.
ವಿಜಯದೊಂದಿಗೆ ದತ್ತಾ ಸ್ಪೋರ್ಟ್ಸ್ ತಂಡ ಟ್ರೋಫಿಯ ಜೊತೆಗೆ ₹50 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ತಂಡದ ನಾಯಕ ಶರಣು ಅವರು ಸಹ ಆಟಗಾರರೊಂದಿಗೆ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ ಅವರಿಂದ ಟ್ರೋಫಿ ಹಾಗೂ ನಗದು ಬಹುಮಾನ ಸ್ವೀಕರಿಸಿದರು.
ಟೂರ್ನಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆದ 11 ಸ್ಟಾರ್ ತಂಡದ ನಾಯಕ ಶಾಂತು ಪೂಜಾರಿ ಟ್ರೋಫಿ ಹಾಗೂ ನಗದು ಬಹುಮಾನ ಸ್ವೀಕರಿಸಿದರು.
ವೈಯಕ್ತಿಕ ಪ್ರಶಸ್ತಿಗಳಲ್ಲಿ ಆಕಾಶ್ ಅವರು ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಹಾಗೂ ವೆಂಕಟೇಶ್ ಜೂಲಪಿ ಅವರು ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಪಡೆದು ಗಮನ ಸೆಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ, ಗ್ರಾಮೀಣ ಭಾಗದ ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಉದನೂರ ಪ್ರಿಮಿಯರ್ ಲೀಗ್ ಆಯೋಜಿಸಲಾಗಿದೆ. ಕ್ರೀಡೆಯಿಂದ ಯುವಕರು ದೈಹಿಕವಾಗಿ ಸದೃಢರಾಗುವುದರ ಜೊತೆಗೆ ಶಿಸ್ತು, ತಂಡದ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಟೂರ್ನಿಯನ್ನು ಆಯೋಜಿಸುವ ಯೋಜನೆ ಇದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನುಪ್ ಪಾಟೀಲ್ ಜೀವಣಗಿ, ಜೈಭೀಮ ಕೊರಳ್ಳಿ, ರಾಣಪ್ಪ ಕೊರಳ್ಳಿ, ಸುಶೀಲ ಕೊರಳ್ಳಿ, ಅನಿಲ್ ಚೌವ್ಹಾಣ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕ್ರೀಡಾ ತಂಡಗಳ ಆಟಗಾರರು, ಕ್ರೀಡಾಭಿಮಾನಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಟೂರ್ನಿಯ ಯಶಸ್ಸಿಗೆ ಸಾಕ್ಷಿಯಾದರು.

