30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ರಂಗಕಲಾವಿದರ ವಿವರ ಆಹ್ವಾನ: ಕರ್ನಾಟಕ ನಾಟಕ ಅಕಾಡೆಮಿಯಿಂದ ಬೃಹತ್ ರಂಗ ಸಂಪುಟ ಯೋಜನೆ
30 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿದ ರಂಗಕಲಾವಿದರ ವಿವರ ಆಹ್ವಾನ: ಕರ್ನಾಟಕ ನಾಟಕ ಅಕಾಡೆಮಿಯಿಂದ ಬೃಹತ್ ರಂಗ ಸಂಪುಟ ಯೋಜನೆ
ಬೆಂಗಳೂರು: ಕನ್ನಡ ರಂಗಭೂಮಿಗೆ ಲಕ್ಷಾಂತರ ಕಲಾವಿದರ ಅಮೂಲ್ಯ ಕೊಡುಗೆ ಇದ್ದರೂ, ಎಲ್ಲರೂ ಸನ್ಮಾನ-ಗೌರವಗಳಿಗೆ ಪಾತ್ರರಾಗಿಲ್ಲ. ಇದರಿಂದ ಅವರ ಸಾಧನೆ ಕಡಿಮೆಯಾಗಿದೆ ಎಂಬುದಲ್ಲ; ವ್ಯವಸ್ಥೆಯ ಮಿತಿಗಳ ನಡುವೆ ಅನೇಕ ಮಹತ್ವದ ಕಲಾವಿದರು ಬೆಳಕಿಗೆ ಬಂದಿಲ್ಲ. ಇಂತಹ ಅಪ್ರಕಟಿತ ಕಲಾವಿದರ ಸಾಧನೆಯನ್ನು ದಾಖಲಿಸಿ ಪರಿಚಯಿಸುವ ಮಹತ್ವದ ಉದ್ದೇಶದಿಂದ ಕರ್ನಾಟಕ ನಾಟಕ ಅಕಾಡೆಮಿಯು ಬೃಹತ್ ರಂಗ ಸಂಪುಟ ಪ್ರಕಟಿಸಲು ಮುಂದಾಗಿದೆ.
ಈಗಾಗಲೇ ಕಳೆದ 50 ವರ್ಷಗಳಲ್ಲಿ 3 ಸಂಪುಟಗಳಲ್ಲಿ 800ಕ್ಕೂ ಹೆಚ್ಚು ಕಲಾವಿದರ ಮಾಹಿತಿಯನ್ನು ದಾಖಲಿಸಲಾಗಿದ್ದು, ಇನ್ನೂ ಅನೇಕ ಕಲಾವಿದರ ಪರಿಚಯ ದಾಖಲಿಸಬೇಕಿರುವುದಾಗಿ ಅಕಾಡೆಮಿ ತಿಳಿಸಿದೆ.
ಹೊಸ ಸಂಪುಟದಲ್ಲಿ ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರು, ನಿರ್ದೇಶಕರು, ನಾಟಕಕಾರರು, ಸಂಗೀತ ತಜ್ಞರು, ರಂಗ ಕುಶಲಕರ್ಮಿಗಳು, ವೇಷಭೂಷಣ ತಜ್ಞರು ಸೇರಿದಂತೆ ನೇಪಥ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಲಾವಿದರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
ಮೊದಲ ಹಂತದಲ್ಲಿ 30 ವರ್ಷಕ್ಕೂ ಹೆಚ್ಚು ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಹಾಗೂ 40 ವರ್ಷ ಮೇಲ್ಪಟ್ಟ ಕಲಾವಿದರಿಂದ ವಿವರಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕಲಾವಿದರು ತಮ್ಮ ಇತ್ತೀಚಿನ ಭಾವಚಿತ್ರ, ನಾಟಕದಲ್ಲಿ ಅಭಿನಯಿಸಿರುವ ಛಾಯಾಚಿತ್ರ ಹಾಗೂ 300 ಪದಗಳನ್ನು ಮೀರದ ಸ್ವ-ವಿವರ (2 ಪುಟಗಳ ಒಳಗೆ)ಗಳನ್ನು ದಿನಾಂಕ 10.06.2026ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ನಾಟಕ ಅಕಾಡೆಮಿ, ತಳಮಹಡಿ, ಚಾಲುಕ್ಯ ವಿಭಾಗ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಇವರಿಗೆ ಅಥವಾ [academy.nataka@gmail.com](mailto:academy.nataka@gmail.com) ಇಮೇಲ್ ವಿಳಾಸಕ್ಕೆ ಕಳುಹಿಸಬೇಕು.
ನಿಗದಿತ ದಿನಾಂಕದ ನಂತರ ಬಂದ ವಿವರಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ನಾಟಕ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.
