ನಾಗಾವಿ ಕುರಿತು ಪುರಾತತ್ತ್ವೀಯ ಸಂಶೋಧನೆ ಇಂದಿನ ಅಗತ್ಯ ಮಲ್ಲಿಕಾರ್ಜುನ ಬಾಗೋಡಿ ಅಭಿಮತ.
ನಾಗಾವಿ ಕುರಿತು ಪುರಾತತ್ತ್ವೀಯ ಸಂಶೋಧನೆ ಇಂದಿನ ಅಗತ್ಯ ಮಲ್ಲಿಕಾರ್ಜುನ ಬಾಗೋಡಿ ಅಭಿಮತ.
ನಾಗಾವಿ; ಕರ್ನಾಟಕದ ಪ್ರಾಚೀನ ಅಗ್ರಹಾರಗಳಲ್ಲೊಂದು. ಶಾಸನಗಳಲ್ಲಿ ‘ಅಗ್ರಹಾರ ನಾಗವಾವಿ’ ‘ಮಹಾಅಗ್ರಹಾರ ನಾಗವಾವಿ’ ‘ಸರ್ವನಮಸ್ಯದ ಅಗ್ರಹಾರ ನಾಗವಾವಿ’ ಎಂಬ ವಿಭಿನ್ನ ಹೆಸರುಗಳ ಉಲ್ಲೇಖಗಳಿವೆ. ಶಾಸನವೊಂದರಲ್ಲಿ “ಚತುರ್ವೇದ ಪಾರಾವಾರ ಪಾರಗರಪ್ಪ ನಾಲ್ನೂರು ವಿಪ್ರೋತ್ತಮರಿಂದ ಅಭಿನವ ಬ್ರಹ್ಮಲೋಕವೆಂಬಂತೆ ವಸುಮತೀ ತಳಕ್ಕೆ ತಲೆಯಂಬಂತೆ ಕುಂತಳ ಮಹಿತಳಕ್ಕೆ ತಿಳಕವೆಂಬಂತೆ ಮಹಾ ಅಗ್ರಹಾರ ನಾಗವಾವಿ” ಎಂದು ವರ್ಣಿಸಲಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ಅಧ್ಯಯನ ವಿಭಾಗದ ಉಪನ್ಯಾಸಕ ಮಲ್ಲಿಕಾರ್ಜುನ ಸಿ. ಬಾಗೋಡಿ ಅಭಿಪ್ರಾಯಪಟ್ಟರು.
ರಾಷ್ಟ್ರಕೂಟರ ಕಾಲದಲ್ಲಿ ಸುಪ್ರಸಿದ್ಧ ಅಗ್ರಹಾರವಾಗಿದ್ದ ನಾಗಾವಿ ಚಾಲುಕ್ಯರಸ ಒಂದನೇ ಸೋಮೇಶ್ವರನ ಕಾಲಕ್ಕೆ ಘಟಿಕಾಸ್ಥಾನ ಆಯಿತು. ಇದನ್ನು ನಿರ್ಮಿಸಿದವನು ಮಧುವಪ್ಪರಸ ದಂಡನಾಯಕ. ಇವನು ಒಂದು ಸ್ಥಾನಿಕ ವಿಶ್ವವಿದ್ಯಾಲಯ ಮಟ್ಟದ ವಿದ್ಯೆಗಾಗರವಾದ ಘಟಿಕಾಸ್ಥಾನವನ್ನು ನಿರ್ಮಿಸಿ ಭಾರತೀಯ ಸಾಂಸ್ಕೃತಿಕ ಇತಿಹಾಸದಲ್ಲಿ ತನ್ನ ಹೆಸರನ್ನು ಶಾಶ್ವತವಾಗಿ
ಉಳಿಯುವಂತೆ ಮಾಡಿಕೊಂಡಿದ್ದಾನೆ ಎಂದು ಅವರು ಇಂದು ಚಿತ್ತಾಪುರದ ಆರ್.ಕೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ನಡೆದ ನಾಗಾವಿ: ಸಾಂಸ್ಕೃತಿಕ ಮುಖಾಮುಖಿ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪನಿರ್ದೇಶಕ ಡಾ. ವೀರಶೆಟ್ಟಿ ಗಾರಂಪಳ್ಳಿ ಅವರು ಮಾತನಾಡುತ್ತಾ ನಾಗಾವಿ ಘಟಿಕಾಸ್ಥಾನದಲ್ಲಿ ಪ್ರಾಚೀನ
ಭಾರತೀಯ ಪೌಢವಿದ್ಯೆಯ ಮಹತ್ವದ ಶಾಖೆಗಳಾದ ವೇದ, ಶಾಸ್ತ್ರ ಯೋಗ ಮೊದಲಾದ ವಿದ್ಯೆಯನ್ನು ಹೇಳಿಕೊಡಲಾಗುತ್ತಿತ್ತು. ಈ ವಿಷಯಗಳನ್ನು ಕಲಿಸುವ ಉಪಾಧ್ಯಾಯರು ಮತ್ತು ಕಲಿಯುವ
ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿತ್ತೆಂದು ಶಾಸನಗಳಲ್ಲಿ ವರ್ಣಿಸಿದೆ. ನಾಗಾವಿ ನಿಸರ್ಗಸಂಪತ್ತು ವರ್ಣನೀಯ. ಇಲ್ಲಿನ ಫಲವತ್ತಾದ ಭೂಮಿ ಸರ್ವ ಕಾಲದಲ್ಲೂ ಹಸಿರಿನಿಂದ ಕಂಗೊಳಿಸುತ್ತಿತ್ತು. ನಾಗಾವಿಯ
ಲಕ್ಷಣೇಶ್ವರ ದೇವಾಲಯದ ಗೋಡೆಯೊಂದರಲ್ಲಿರುವ ಕ್ರಿ.ಶ. ೧೦೯೨ರ ಗದ್ಯಶಾಸನದಿಂದ ತಿಳಿದುಬರುತ್ತದೆ. ಈ ಶಾಸನದಲ್ಲಿ “ನಾಗಾವಿ ಸಂತೆಯಲ್ಲಿ ಮಾರಾಟ ಮಾಡುವ ಅನೇಕ ಬೆಲೆಯುಳ್ಳ ವಸ್ತುಗಳ ಬೆಲೆಯ ಹದಿನಾರನೇಯ ಒಂದು ಭಾಗವನ್ನು ದೇವಾಲಯಗಳ ಜೀರ್ಣೋದ್ಧಾರಕ್ಕೆ ನೀಡಲು ವರ್ತಕರು ನಿರ್ಧರಿಸಿದ್ದರೆಂದೂ, ಈ ಆದಾಯ ವೆಚ್ಚಗಳ ಉಸ್ತುವಾರಿ ನೋಡಿಕೊಳ್ಳಲು ಸಂಭಾವಿತರಪ್ಪ ಶೆಟ್ಟಿಯವರ ಧರ್ಮದರ್ಶಿ ಸಮಿತಿಯೊಂದನ್ನು ಕಾಲಿಮರಸನ ಸಮಕ್ಷಮದಲ್ಲಿ ರಚಿಸ ಲಾಯಿತೆಂದೂ” ಈ ಶಾಸನ ತಿಳಿಸುತ್ತದೆ.
ತ್ರೈಪುರುಷ ದೇವಾಲಯ, ಮಧುಸೂಧನಾಲಯ, ಜೈನ ಬಸದಿ, ರಾಮೇಶ್ವರ ದೇವಾಲಯ, ಲಕ್ಷ್ಮಣೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಈರಪ್ಪಯ್ಯನ ಗದ್ದುಗೆ, ನಾಟ್ಯಶಾಲೆ, ಆಂಜನೇಯ ದೇವಾಲಯ,
ನಾಗವೇಲಾಂಬಿಕಾ ದೇವಸ್ಥಾನ ಸೇರಿದಂತೆ ನಂತರದಲ್ಲಿ ರೂಪಾಂತರ ಹೊಂದಿದ ಸ್ಮಾರಕಗಳು ನಾಗಾವಿ ಪರಿಸರದಲ್ಲಿವೆ. ಸಕಲ ಮತಧರ್ಮಗಳ ಕೇಂದ್ರವಾದ ನಾಗಾವಿ ದಕ್ಷಿಣದ ಕಾಶಿ ಎನಿಸಿಕೊಂಡಿದೆ. ಹಿಂದೆ ರಾಮೇಶ್ವರ ದೇವಾಲಯದಲ್ಲಿ ಪುರಾಣ ಪ್ರವಚನಗಳು
ನಡೆಯುತ್ತಿದ್ದವು. ಸಿದ್ದೇಶ್ವರ ಮಠದಲ್ಲಿ ಯೋಗಿ ಸನ್ಯಾಸಿಗಳು ವಾಸಿಸುತ್ತಿದ್ದರಲ್ಲದೆ ಇವರು ತಮ್ಮ ಕಡೆ ಬರುವ ಜನರಿಗೆ
ಯೋಗಾಭ್ಯಾಸವನ್ನು ಹೇಳಿಕೊಡುತ್ತಿದ್ದರು. ಅದಕ್ಕಾಗಿಯೇ ನಾಗಾವಿಗೆ 'ದಕ್ಷಿಣದ ತಕ್ಷಶಿಲಾ’ ಎಂತಲೂ ಕರೆಯಲಾಗುತ್ತದೆ. ಆದರೆ ಈ ವೈಭವ ಬಹಳಕಾಲ ಉಳಿಯಲಿಲ್ಲ ಎನ್ನುವುದೇ ಬೇಸರದ ಸಂಗತಿ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಪದ್ಮಣ್ಣ ರಾಸಣಗಿ, ಭೀಮಣ್ಣ ಸಾಲಿ, ಡಾ. ನಾಗವೇಣಿ, ಮಲ್ಲಿಕಾರ್ಜುನ ಬಿರಾದಾರ, ಕೈಲಾಸಪತಿ ವಿಶ್ವಕರ್ಮ, ಶ್ರೀಕಾಂತ ಓಮಣ್ಣ, ಮಹಾದೇವ ಶಾಸ್ತ್ರಿ, ಶ್ರೀನಾಥ, ಶರಣಪ್ಪ ಮುಂತಾದವರು ಭಾಗವಹಿಸಿದ್ದರು.

