ಯೋಗದಿಂದ ರೋಗಮುಕ್ತ ಜೀವನ ಸಾಧ್ಯ : ಯೋಗ ಗುರು ಶಿವಾನಂದ ಸಾಲಿಮಠ
ಯೋಗದಿಂದ ರೋಗಮುಕ್ತ ಜೀವನ ಸಾಧ್ಯ : ಯೋಗ ಗುರು ಶಿವಾನಂದ ಸಾಲಿಮಠ
‘ಶ್ವಾಸೋಚ್ಛ್ವಾಸ ವಿಶ್ವಾಸ ರಹಸ್ಯ’ ಪುಸ್ತಕ ಬಿಡುಗಡೆ
ಕಲಬುರಗಿ: ಇಂದಿನ ಒತ್ತಡದ ಜೀವನಶೈಲಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಅತ್ಯಂತ ಅಗತ್ಯವಾಗಿವೆ. ಎಂದು ಕಲಬುರಗಿ ಪತಂಜಲಿ ಯೋಗ ಪೀಠದ ಶಿವಾನಂದ ಸಾಲಿಮಠ ಹೇಳಿದರು
ನಗರದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಶ್ವಾಸೋಚ್ಹಾಸ
ವಿಶ್ವಾಸ ರಹಸ್ಯ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸವನ್ನು ಜೀವನದ ಭಾಗವಾಗಿಸಿಕೊಂಡರೆ ಆರೋಗ್ಯಕರ ಬದುಕು ನಡೆಸಲು ಎಂದು ಹೇಳಿದರು.
ಮಾದನ ಹಿಪ್ಪರಗಿ ಶಾಂತವೀರ ಶಿವಾಚಾರ್ಯರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಯೋಗವು ದೇಹದ ಆರೋಗ್ಯವನ್ನು ಸುಧಾರಿಸುವುದರ ಜೊತೆಗೆ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಮತ್ತು ಜೀವನದಲ್ಲಿ ಶಿಸ್ತು ಬೆಳೆಸುತ್ತದೆ ಎಂದು ಆಶೀರ್ವಚನ ನೀಡಿದರು.
ಚಿಣಮಗೇರಿಯ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ ಯೋಗಾಭ್ಯಾಸ, ಪ್ರಾಣಾಯಾಮ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಂಡರೆ ಅನೇಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಸಂಸ್ಕಾರ, ಯೋಗ ಮತ್ತು ದೇಶಪ್ರೇಮದ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಮನುಷ್ಯನ ಜೀವನ ಸಾರ್ಥಕವಾಗುತ್ತದೆ. ಪ್ರತಿಯೊಬ್ಬರೂ ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ತಮ್ಮ ದೈನಂದಿನ ಚಟುವಟಿಕೆಗಳನ್ನು ಶಿಸ್ತುಬದ್ಧವಾಗಿ ಆರಂಭಿಸಿ, ಯೋಗ ಮತ್ತು ಪ್ರಾಣಾಯಾಮಕ್ಕೆ ಸಮಯ ಮೀಸಲಿಡಬೇಕು. ನಿಯಮಿತ ಜೀವನಶೈಲಿ ಆರೋಗ್ಯ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಡಾ. ಶಿವಶರಣಪ್ಪ ದಾಬಾ ಅವರು ‘ಶ್ವಾಸೋಚ್ಛ್ವಾಸ ವಿಶ್ವಾಸ ರಹಸ್ಯ’ ಪುಸ್ತಕವನ್ನು ಪರಿಚಯಿಸಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಉಸಿರಾಟದ ಮಹತ್ವ ಅಪಾರವಾಗಿದೆ. ಸರಿಯಾದ ಉಸಿರಾಟದ ಅಭ್ಯಾಸ, ಯೋಗ ಮತ್ತು ಪ್ರಾಣಾಯಾಮದ ಕುರಿತು ಜನರಲ್ಲಿ ಅರಿವು ಮೂಡಿಸುವ ಇಂತಹ ಕೃತಿಗಳು ಆರೋಗ್ಯ ಜಾಗೃತಿಗೆ ಸಹಕಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಡಾ. ಬಿ.ಎಸ್. ಗುಳಳಶೆಟ್ಟಿ ಮಾತನಾಡಿ, ಯೋಗವು ಭಾರತೀಯ ಪರಂಪರೆಯ ಅಮೂಲ್ಯ ಕೊಡುಗೆಯಾಗಿದ್ದು, ಅದನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕ ಬಸವರಾಜ ಮಂಜಾಳಕರ್ ಹಾಗೂ ಡಾ. ನಂದೀಶಕುಮಾರ ಜೀವಣಗಿ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಗುಂಡೂರಾವ್ ಕಡಣಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಗ್ರಂಥದ ಲೇಖಕ ಶಿವರಾಯ ಎಸ್. ಗರೂರ ಅವರು ಗೌರವ ಉಪಸ್ಥಿತಿ ವಹಿಸಿದ್ದರು. ಮಲ್ಲಿನಾಥ ಕೊಳ್ಳೂರ ಮೇಳಕುಂದಿ ಸೇರಿದಂತೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
‘ಗುರು ಉಪದೇಶ’ ಪತ್ರಿಕೆಯ ಸಂಪಾದಕ ಸಿದ್ದಣಗೌಡ ಕೆ. ಪಾಟೀಲ್ ಕಡಣಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಸಿದ್ದಣಗೌಡ ಕೆ. ಮಾಲಿ ಪಾಟೀಲ ಅವರು ಸ್ವಾಗತಿಸಿದರು. ಕಿರಣ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶರಣಗೌಡ ಪಾಟೀಲ ಪಾಳಾ, ಈರಣ್ಣ ಕಂಬಾರ, ಸಿದ್ದರಾಮ ರಾಜಮಾನೆ, ಬಸವರಾಜ ಪಾಟೀಲ, ಬಸವಂತರಾಯ ಕೋಳಕೂರ, ಪತ್ರಕರ್ತ ಸಂಗಮನಾಥ, ಶಿವಶರಣಪ್ಪ ಜಮಾದಾರ, ಭೀಮಾಶಂಕರ ಪಾಟೀಲ, ಶ್ರೀಕಾಂತ ಪಾಟೀಲ, ಬಸವರಾಜ ಟೆಂಗಳಿ, ನಾಗರಾಜ ಗಂದಿಗುಡಿ ಪತ್ರಕರ್ತ ಅಂಬಾರಾಯ ಕೋಣೆ, ಸಾಹಿತಿ ವಿಜಯಕುಮಾರ ಪರುತೆ ಸೇರಿದಂತೆ ಯೋಗಾಸಕ್ತರು, ಸಾಹಿತಿಗಳು, ಪತ್ರಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಯೋಗದ ಮಹತ್ವ, ಶಿಸ್ತುಬದ್ಧ ಜೀವನಶೈಲಿ ಮತ್ತು ಉಸಿರಾಟದ ಆರೋಗ್ಯದ ಕುರಿತು ಅರಿವು ಮೂಡಿಸುವ ಸಂದೇಶದೊಂದಿಗೆ ಕಾರ್ಯಕ್ರಮ ನಡೆಯಿತು.

