ಬೆಂಗಳೂರು - ಮುಂಬೈ ಮಧ್ಯೆ ರೈಲು ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ ಮೋದಿಗೆ ಡಾ. ಉಮೇಶ್ ಜಾಧವ್ ಅಭಿನಂದನೆ
*ದೇಶದ ನೂತನ ವಂದೇ ಭಾರತ್ ಸ್ಲೀಪರ್ ರೈಲು ರಾಜ್ಯೋತ್ಸವ ದಿನ ಕಲಬುರಗಿಗೆ*
ಬೆಂಗಳೂರು - ಮುಂಬೈ ಮಧ್ಯೆ ರೈಲು ಪ್ರಯಾಣಿಕರಿಗೆ ದೀಪಾವಳಿ ಗಿಫ್ಟ್ ನೀಡಿದ ಪ್ರಧಾನಿ ಮೋದಿಗೆ ಡಾ. ಉಮೇಶ್ ಜಾಧವ್ ಅಭಿನಂದನೆ
ಕಲಬುರಗಿ : ದೇಶದಲ್ಲಿ ಆರಂಭವಾಗುತ್ತಿರುವ ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರು - ಮುಂಬೈ ಮಧ್ಯೆ ನವೆಂಬರ್ ಒಂದರಂದು ರಾಜ್ಯೋತ್ಸವ ದಿನ ಪ್ರಾರಂಭವಾಗುತ್ತಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಕನ್ನಡಿಗರಿಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್ ತಿಳಿಸಿದರು.
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಸೋಲಾಪುರ ವಿಭಾಗದ ಉನ್ನತ ಅಧಿಕಾರಿಗಳ ಜೊತೆ ವಂದೇ ಭಾರತ್ ಸ್ಲೀಪರ್ ರೈಲು ಆಗಮನದ ವೇಳೆ ಕೈಗೊಳ್ಳುವ ಸ್ವಾಗತ ಸಮಾರಂಭದ ಪೂರ್ವಭಾವಿ ತಯಾರಿ ಕುರಿತು ಶುಕ್ರವಾರ ( ಅ 30ರಂದು ) ಚರ್ಚಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರ ಪ್ರಾರಂಭವಾಗುತ್ತಿದ್ದು ಒಂದನ್ನು ಪ್ರಧಾನಿಯವರು ವಾರಣಾಸಿ ಹಾಗೂ ಇನ್ನೊಂದನ್ನು ಬೆಂಗಳೂರಿಂದ ಮುಂಬೈಗೆ ಆರಂಭಿಸಿರುವುದು ರೈಲ್ವೆ ಇತಿಹಾಸದಲ್ಲಿ ದೊಡ್ಡ ಘಟನೆಯಾಗಿದ್ದು ಇದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಖಾತೆ ಸಚಿವರಾದ ಅಶ್ವಿನ್ ವೈಷ್ಣವ್ ಹಾಗೂ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಕರ್ನಾಟಕದ ಜನತೆಗೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಗಿಫ್ಟ್ ಆಗಿ ಪ್ರಧಾನಿಯವರು ಹಾಗೂ ರೈಲ್ವೆ ಇಲಾಖೆ ಈ ಕೊಡುಗೆಯನ್ನು ನೀಡಿದ್ದು
ನವಂಬರ್ ಒಂದರಂದು ಮಧ್ಯಾಹ್ನ ಬೆಂಗಳೂರಿಂದ ಹೊರಟು ಸಾಯಂಕಾಲ 6:30ಕ್ಕೆ ಕಲಬುರಗಿಗೆ ಆಗಮಿಸಲಿದ್ದು ಸಾರ್ವಜನಿಕರ ಸಮ್ಮುಖದಲ್ಲಿ ಸಂಭ್ರಮದ ಸ್ವಾಗತ ಸಮಾರಂಭವನ್ನು ಇಟ್ಟುಕೊಳ್ಳಲು ಸೋಲಾಪುರ ವಿಭಾಗೀಯ ರೈಲ್ವೆ ವಲಯ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದೆ . ಕಲ್ಯಾಣ ಕರ್ನಾಟಕ ಭಾಗದ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹಬ್ಬದಂತೆ ಪಾಲ್ಗೊಳ್ಳಬೇಕಾಗಿ ಜಾಧವ್ ಮನವಿ ಮಾಡಿದರು.
ಬೆಂಗಳೂರಿನಲ್ಲಿ ನಿರ್ಮಾಣಗೊಂಡ ವಂದೇ ಭಾರತ್ ಸ್ಲೀಪರ್ ಕೋಚ್ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದ್ದು ಹಿರಿಯ ನಾಗರಿಕರಿಗೂ ಅಪ್ಪರ್ ಸೀಟ್ ನಲ್ಲಿ ಏರಲು ಅನುಕೂಲವಾಗುವಂತೆ ಹಾಗೂ ಕೈಗೆಟಕುವ ದರದಲ್ಲಿ ಪ್ರಯಾಣಿಸಲು ಅನುಕೂಲ ಕಲ್ಪಿಸಲಾಗಿದೆ. ವಂದೇ ಭಾರತ್ ರೈಲು ಪ್ರಯಾಣವು ವಿಮಾನ ಪ್ರಯಾಣದ ಅನುಭವವನ್ನು ನೀಡಲಿದೆ. ಮುಂಬೈ ಮತ್ತು ಬೆಂಗಳೂರಿಗೆ ಉದ್ಯೋಗ, ವ್ಯವಹಾರ ಹಾಗೂ ವಿದೇಶಕ್ಕೆ ಸಂಚರಿಸುವ ಪ್ರಯಾಣಿಕರಿಗೆಇದು ಅತ್ಯಂತ ಅನುಕೂಲಕರವಾಗಲಿದೆ ಎಂದರು.
*ಡಕೋಟಾ ಎಂದು ಮೂದಲಿಸಿದವರಿಗೆ ತಕ್ಕ ಪಾಠ*
ಕಲಬುರಗಿ- ಬೆಂಗಳೂರು ನಡುವೆ ಕೇಂದ್ರ ರೈಲ್ವೆ ಇಲಾಖೆಯು ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸಿದಾಗ ಇದೊಂದು ಡಕೋಟಾ ಎಕ್ಸ್ ಪ್ರೆಸ್ ಎಂದು ಮೂದಲಿಸಿದವರು ವಂದೇ ಭಾರತ್ ಸ್ಲೀಪರ್ ರೈಲು ಕೂಡ ಡಕೋಟಾ ಎಂದು ಬಣ್ಣಿಸುವರೇ ಎಂದು ಪರೋಕ್ಷವಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ಜಾಧವ್ ಟಾಂಗ್ ನೀಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೈಗೊಳ್ಳುವ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಸಹಿಸದೆ ಈ ರೀತಿಯ ಹೇಳಿಕೆಗಳನ್ನು ನೀಡಿ ತಮ್ಮ ಅಸಹನೆಯನ್ನು ಹೊರಹಾಕುತ್ತಿದ್ದಾರೆ ಎಂದು ಹೇಳಿದರು.
ಪೂರ್ವ ಸಿದ್ಧತಾ ಸಭೆಯಲ್ಲಿ ಸೋಲಾಪುರ ವಿಭಾಗದ ಹಿರಿಯ ವಿಭಾಗೀಯ ವ್ಯವಸ್ಥಾಪಕರಾದ ಜಯದೀಪ್ ಪ್ರದಕ್ಷಿಣ್, ವಾಣಿಜ್ಯ ವಿಭಾಗದ ಅತುಲ್ ಲೋಕರೆ, ಕಲಬುರಗಿ ವಿಭಾಗದ ಸಹಾಯಕ ಇಂಜಿನಿಯರ್, ಶಿವಕುಮಾರ್, ಕಲಬುರಗಿ ರೈಲು ನಿಲ್ದಾಣದ ವ್ಯವಸ್ಥಾಪಕರಾದ ಜಿಜಿ ಮೋನ್, ಹರ್ಷಾನಂದ ಗುತ್ತೇದಾರ್, ಅರುಣ್ ಪವಾರ್, ರಾಮಚಂದ್ರ ಜಾಧವ್ ಮತ್ತಿತರರು ಉಪಸ್ಥಿತರಿದ್ದರು.
*ವಂದೇ ಭಾರತ್ ಸ್ಲೀಪರ್ ರೈಲು ಸಮಯ ಬದಲಾವಣೆಗೆ ಮನವಿ*
ನವಂಬರ್ 1 ರಂದು ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಮಧ್ಯಾಹ್ನ ಉದ್ಘಾಟನಾ ರೈಲು ಮರುದಿನ ಮುಂಬೈ ತಲುಪಲಿದೆ. ಉದ್ಘಾಟನಾ ಸಮಾರಂಭದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ ಸೋಮಣ್ಣ ಜೊತೆ ತಾನು ಪಾಲ್ಗೊಳ್ಳಲಿರುವುದು ಆಗಿ ಜಾಧವ್ ಹೇಳಿದರು.
ವಂದೇ ಭಾರತ್ ರೈಲು ರಾತ್ರಿ 8 ಗಂಟೆಗೆ ಬದಲಾಗಿ 10 ಗಂಟೆಗೆ ಬೆಂಗಳೂರಿನಿಂದ ಹೊರಟರೆ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಪ್ರಯಾಣಿಕರಿಗೂ ಅನುಕೂಲವಾಗಲಿದ್ದು ಈ ಬಗ್ಗೆ ತಾನು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿ ರೈಲ್ವೆ ಇಲಾಖೆಗೆ ಖುದ್ದಾಗಿ ಮನವಿ ಮಾಡಿದ್ದು ಸಕಾರಾತ್ಮಕ ಸ್ಪಂದನೆ ದೊರಕಿರುವುದಾಗಿ ಜಾಧವ್ ತಿಳಿಸಿದರು.
ವಂದೇ ಭಾರತ್ ರೈಲ್ವೆ ವೇಳಾ ಪಟ್ಟಿ
ವಂದೇ ಭಾರತ್ ಸ್ಲೀಪರ್ ರೈಲು ಬೆಂಗಳೂರು ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ( ಎಸ್ಎಂವಿಟಿ) ನಿಂದ ರಾತ್ರಿ 7:45ಕ್ಕೆ ಹೊರಟು 10.10ಕ್ಕೆ ಧರ್ಮಾವರಂ, 10:30ಕ್ಕೆ ಅನಂತಪುರ, 11.20ಕ್ಕೆ ಗುಂತಕಲ್1.03 ಕ್ಕೆ ರಾಯಚೂರ್, 1.45 ಕ್ಕೆ ಯಾದಗಿರಿ 2.50ಕ್ಕೆ ವಾಡಿ, 3.10 ಕ್ಕೆ ಕಲಬುರಗಿ, 4.20ಕ್ಕೆ ಸೋಲಾಪುರ, 8:00 ಕ್ಕೆ ಪುಣೆ, 10.45 ಕ್ಕೆ ಕಲ್ಯಾಣ್, 11:55 ಕ್ಕೆ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಲ್, ಮುಂಬೈ ( ಸಿ ಎಸ್ ಎಂ ಟಿ ) ತಲುಪಲಿದೆ. ಮುಂಬೈ ಸಿ ಎಸ್ ಎಂ ಟಿ ಯಿಂದ ರಾತ್ರಿ 8. 10ಕ್ಕೆ ಹೊರಟು 8.50 ಕ್ಕೆ ಕಲ್ಯಾಣ್, 11:45 ಕ್ಕೆ ಪುಣೆ 3.05 ಕ್ಕೆ ಸೋಲಾಪುರ,4. 15 ಕ್ಕೆ ಕಲಬುರಗಿ, 5.05 ಕ್ಕೆ ವಾಡಿ , 5.10 ಕ್ಕೆ ಯಾದಗಿರಿ, 6.05 ಕ್ಕೆ ರಾಯಚೂರ್, 7.35 ಗುಂತಕಲ್, 8.40ಕ್ಕೆ ಅನಂತಪುರ, 9.40ಕ್ಕೆ ಧರ್ಮಾವರಂ, 12 ಗಂಟೆಗೆ ಎಸ್ ಎಂ ವಿ ಟಿ ಬೆಂಗಳೂರು ತಲುಪಲಿದೆ.
ಅನಂತಪುರ, ಗುಂತಕಲ್, ರಾಯಚೂರ್, ಯಾದಗಿರಿ, ಕಲಬುರಗಿ, ಸೋಲಾಪುರ, ಪುಣೆ ಹಾಗೂ ಕಲ್ಯಾಣದಲ್ಲಿ ಮಾತ್ರ ವಂದೇ ಭಾರತ್ ರೈಲು ನಿಲುಗಡೆಯಾಗಲಿದೆ ಬೆಂಗಳೂರಿನಿಂದ ಸೋಮವಾರ ಹಾಗೂ ಮುಂಬೈಯಿಂದ ಮಂಗಳವಾರದಂದು ರೈಲು ಸಂಚಾರ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

