ನಾಳೆ ಲಕ್ಷ ಪುಷ್ಪ ಬಿಲ್ವಾರ್ಚನೆ

ನಾಳೆ ಲಕ್ಷ ಪುಷ್ಪ ಬಿಲ್ವಾರ್ಚನೆ

ನಾಳೆ ಲಕ್ಷ ಪುಷ್ಪ ಬಿಲ್ವಾರ್ಚನೆ

ನಾಡಿನ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪ ಅವರ ಜನ್ಮದಿನದ ನಿಮಿತ್ತ ನವೆಂಬರ್ 1ರಂದು ಶ್ರೀ ಶರಣಬಸವೇಶ್ವರರ ಕರ್ತೃ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆ ಹಾಗೂ 1001 ಇಷ್ಟಲಿಂಗ ಮಹಾಪೂಜೆ ನಡೆಯಲಿದೆ ಎಂದು ವೇದಿಕೆ ಪ್ರಧಾನ್ ಕಾರ್ಯದರ್ಶಿ ಸುನೀಲ್ ಮಹಾಗವಂಕರ್ ಮತ್ತು ಕಾರ್ಯದರ್ಶಿಗಳಾದ ಆನಂದ್ ಕಣಸೂರ್ ಮತ್ತು ಗುರುರಾಜ್ ಅಂಬಾಡಿ ಅವರು ತಿಳಿಸಿದರು .

ಇಷ್ಟಲಿಂಗ ಪೂಜೆ

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಶ್ರೀ ವೀರಶೈವ ಲಿಂಗಾಯತ ಮಹಾವೇದಿಕೆಯಿಂದ ಕಳೆದ ಐದು ವರ್ಷಗಳಿಂದ ಶ್ರೀ ದೊಡ್ಡಪ್ಪ ಅಪ್ಪ ಅವರ ಜನ್ಮದಿನದಂದು ಈ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ನವೆಂಬರ್ 1ರಂದು ಬೆಳಗ್ಗೆ 5ರಿಂದ ಮಧ್ಯಾಹ್ನ 12ರವರೆಗೆ ಪುರೋಹಿತರ ಮಂತ್ರಘೋಷದೊಂದಿಗೆ ಲಕ್ಷ ಪುಷ್ಪ ಬಿಲ್ವಾರ್ಚನೆ ನೆರವೇರಲಿದ್ದು, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಲಕ್ಷ ಪುಷ್ಪಾರ್ಚನೆಯ ಜೊತೆಗೆ ದೇವಸ್ಥಾನದ ಆವರಣದಲ್ಲಿ ಸಹಸ್ರ ಇಷ್ಟಲಿಂಗ ಮಹಾಪೂಜೆ ನೆರವೇರಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಇಷ್ಟಲಿಂಗ, ವಿಭೂತಿ, ಬಿಲ್ವಪತ್ರೆ, ಪುಷ್ಪ, ಧೂಪ ಸೇರಿದಂತೆ ಪೂಜೆಗೆ ಅಗತ್ಯವಿರುವ ಎಲ್ಲ ವಸ್ತುಗಳ ವ್ಯವಸ್ಥೆಯನ್ನು ವೇದಿಕೆಯಿಂದ ಮಾಡಲಾಗುತ್ತದೆ.

ವೀರಶೈವ ಲಿಂಗಾಯತ ಯುವ ಪೀಳಿಗೆಗೆ ಲಿಂಗಪೂಜಾ ಪದ್ಧತಿ, ಭಸ್ಮಧಾರಣೆ, ಲಿಂಗಧಾರಣೆಯ ಮಹತ್ವ, ಅಷ್ಟಾವರಣ ಹಾಗೂ ಪಂಚಾಚಾರಗಳ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಧರ್ ಎಂ. ನಾಗನಹಳ್ಳಿ, ಯುವ ಮುಖಂಡರು, ಶ್ರೀ ವೀರಶೈವ ಲಿಂಗಾಯತ ಮಹಾವೇದಿಕೆ, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

ಪ್ರಮುಖರಾದ ಸುನೀಲ್ ಮಹಾಗವಂಕರ್, ಗುರುರಾಜ ಅಂಬಾಡಿ, ಆನಂದ ಕಣಸೂರು, ಅಣ್ಣಾರಾಯ ಹಿರೇಗೌಡ, ವೀರೇಶ ಬೇರನ, ಆಕಾಶ ಕುಲಕರ್ಣಿ ಉಪಸ್ಥಿತರಿದ್ದರು.

ಪೂಜ್ಯ ಶ್ರೀ ಷ.ಬ್ರ. ಗುರುಮೂರ್ತಿ ಶಿವಾಚಾರ್ಯರು, ಸುಕ್ಷೇತ್ರ ಕಟ್ಟಿಮಠ ಸಂಸ್ಥಾನ, ಪಾಳಾ ಹಾಗೂ ಪೂಜ್ಯ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಸುಕ್ಷೇತ್ರ ಬೆಳಗುಂಪ ಅವರ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದೆ.

ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪ, ಮಾತೋಶ್ರೀ ದಾಕ್ಷಾಯಿಣಿ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ. ಅಲ್ಲಮಪ್ರಭು ದೇಶಮುಖ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.