ಇದು ನನ್ನ ಗೆಲುವಲ್ಲ, ಕಲ್ಯಾಣ ಕರ್ನಾಟಕದ ಸಮಸ್ತ ಶಿಕ್ಷಕರ ವಿಶ್ವಾಸದ ಗೆಲುವು– ಶಶೀಲ್ ಜಿ. ನಮೋಶಿ
ಇದು ನನ್ನ ಗೆಲುವಲ್ಲ, ಕಲ್ಯಾಣ ಕರ್ನಾಟಕದ ಸಮಸ್ತ ಶಿಕ್ಷಕರ ವಿಶ್ವಾಸದ ಗೆಲುವು– ಶಶೀಲ್ ಜಿ. ನಮೋಶಿ
ಕಲಬುರಗಿ ಅ29: “ಇದು ನನ್ನ ವೈಯಕ್ತಿಕ ಗೆಲುವಲ್ಲ; ಕಲ್ಯಾಣ ಕರ್ನಾಟಕದ ಸಮಸ್ತ ಶಿಕ್ಷಕ ಬಂಧುಗಳು ನನ್ನ ಮೇಲೆ ಇಟ್ಟಿರುವ ವಿಶ್ವಾಸ, ಪ್ರೀತಿ ಮತ್ತು ಅಭಿಮಾನಕ್ಕೆ ಸಂದ ಗೆಲುವು. ಶಿಕ್ಷಕರು ನನ್ನ ಮೇಲೆ ಇಟ್ಟಿರುವ ನಂಬಿಕೆ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದು, ಅವರ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಯಾಗುವುದು ಮತ್ತು ಅವರ ಹಿತಾಸಕ್ತಿಗಳನ್ನು ಕಾಪಾಡಲು ಶ್ರಮಿಸುವುದೇ ನನ್ನ ಮೊದಲ ಆದ್ಯತೆ” ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರು ಭಾವುಕರಾಗಿ ನುಡಿದರು.
ಅವರು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಸಂಸ್ಥೆಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು
ಕಲ್ಯಾಣ ಕರ್ನಾಟಕದ ಶಿಕ್ಷಕರ ಸಮಸ್ಯೆಗಳು, ಅವರ ನಿರೀಕ್ಷೆಗಳು ಮತ್ತು ಶಿಕ್ಷಣ ಕ್ಷೇತ್ರದ ಸವಾಲುಗಳ ಬಗ್ಗೆ ಮಾತನಾಡಿದ ಅವರು, “ಈ ಭಾಗದ ಶಿಕ್ಷಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಕಷ್ಟಗಳನ್ನು ಆಲಿಸಿ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರ ಗಮನಕ್ಕೆ ತಂದು ಪರಿಹಾರಕ್ಕಾಗಿ ಪ್ರಯತ್ನಿಸುವುದು ನನ್ನ ಕರ್ತವ್ಯ. ಶಿಕ್ಷಕರಿಗೆ ಕೇವಲ ಭರವಸೆ ನೀಡುವುದಕ್ಕಿಂತ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಮುಖ್ಯ. ಶಿಕ್ಷಕರ ನೋವಿಗೆ ಸ್ಪಂದಿಸುವ ಮನೋಭಾವವೇ ನನ್ನ ಸಾರ್ವಜನಿಕ ಸೇವೆಯ ಮೂಲ ಆಶಯ” ಎಂದು ತಿಳಿಸಿದರು.
ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ದೊರಕಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳು, ಜೆಒಸಿ ಸಿಬ್ಬಂದಿಯ ಉದ್ಯೋಗಕ್ಕೆ ಸಂಬಂಧಿಸಿದ ವಿಷಯ, ಶಿಕ್ಷಕರ ಭಡ್ತಿ ಸಮಸ್ಯೆಯನ್ನು ಶಿಕ್ಷಣ ಸಚಿವರ ಗಮನಕ್ಕೆ ತಂದು ಸಮಿತಿ ರಚನೆಗೆ ಪ್ರಯತ್ನಿಸಿರುವುದು ಹಾಗೂ ಹಿಂದಿ ಭಾಷಾ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿರುವುದನ್ನು ಅವರು ಸ್ಮರಿಸಿದರು. ಶಿಕ್ಷಕರ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ನಿರಂತರವಾಗಿ ಶ್ರಮಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶಿಕ್ಷಕರು ತೋರಿದ ಬೆಂಬಲವನ್ನು ವಿಶೇಷವಾಗಿ ಸ್ಮರಿಸಿದ ಅವರು, “ಸಂಸ್ಥೆಯ ಶಿಕ್ಷಕರು ಶೇ.97ರಷ್ಟು ಮತದಾನದಲ್ಲಿ ಭಾಗವಹಿಸಿ ನನ್ನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆಯ ಸಂಗತಿ. ಅವರ ಪ್ರೀತಿ, ಒಗ್ಗಟ್ಟು ಮತ್ತು ನನ್ನ ಮೇಲಿನ ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ. ಈ ಬೆಂಬಲ ನನಗೆ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ಮಾಡಲು ಪ್ರೇರಣೆ ನೀಡಿದೆ” ಎಂದು ಕೃತಜ್ಞತೆ ಸಲ್ಲಿಸಿದರು.
“ಆದರೆ ನನ್ನ ಜವಾಬ್ದಾರಿ ಒಂದು ಸಂಸ್ಥೆಗೆ ಅಥವಾ ಒಂದು ಜಿಲ್ಲೆಯ ಶಿಕ್ಷಕರಿಗೆ ಮಾತ್ರ ಸೀಮಿತವಲ್ಲ. ಕಲ್ಯಾಣ ಕರ್ನಾಟಕದ ಪ್ರತಿಯೊಂದು ಜಿಲ್ಲೆಯ ಶಿಕ್ಷಕರ ಸಮಸ್ಯೆಗಳೂ ನನಗೆ ಮುಖ್ಯ. ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ನ್ಯಾಯಯುತ ಬೇಡಿಕೆಗಳಿಗೆ ಧ್ವನಿಯಾಗುವುದು ನನ್ನ ಕರ್ತವ್ಯ. ಶಿಕ್ಷಕರು ಯಾವುದೇ ಸಮಸ್ಯೆ ಎದುರಿಸಿದರೂ ಅವರ ಮಾತುಗಳನ್ನು ಆಲಿಸಿ, ಸಾಧ್ಯವಾದ ಮಟ್ಟಿಗೆ ಪರಿಹಾರಕ್ಕಾಗಿ ಪ್ರಯತ್ನಿಸುತ್ತೇನೆ” ಎಂದು ಅವರು ಭರವಸೆ ನೀಡಿದರು.
ಶಿಕ್ಷಕರೊಂದಿಗೆ ತಮ್ಮ ಒಡನಾಟದ ಕುರಿತು ಭಾವುಕರಾಗಿ ಮಾತನಾಡಿದ ಅವರು, “ಶಿಕ್ಷಕರು ನನ್ನ ಬಳಿ ಬಂದು, ‘ಶಶೀಲ್ ನಮೋಶಿಯವರೇ, ನೀವು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮಗೆ ತುಂಬಾ ಮೆಚ್ಚುಗೆಯಾಗಿದೆ’ ಎಂದು ಹೇಳುವ ಮಾತುಗಳು ನನಗೆ ದೊಡ್ಡ ಗೌರವ. ಶಿಕ್ಷಕರ ವಿಶ್ವಾಸ ಗಳಿಸುವುದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿಲ್ಲ. ನಿಮ್ಮ ಸಮಸ್ಯೆ ನನ್ನ ಗಮನಕ್ಕೆ ಬಂದಾಗ ಅದಕ್ಕೆ ಸ್ಪಂದಿಸುವುದು ನನ್ನ ಜವಾಬ್ದಾರಿ; ನಿಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ನನ್ನ ಕರ್ತವ್ಯ” ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿ, ಶಿಕ್ಷಕರ ಗೌರವ ಮತ್ತು ಅವರ ವೃತ್ತಿಪರ ಸಮಸ್ಯೆಗಳ ಪರಿಹಾರಕ್ಕಾಗಿ ಮುಂದೆಯೂ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರಿಸುವುದಾಗಿ ತಿಳಿಸಿದ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು 5 ನೇಯ ಬಾರಿ ಬೆಂಬಲಿಸಿದ ಎಲ್ಲ ಶಿಕ್ಷಕ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
“ಕಲ್ಯಾಣ ಕರ್ನಾಟಕದ ಶಿಕ್ಷಕರೇ, ನಿಮ್ಮ ಮತ ನನಗೆ ಗೆಲುವು ನೀಡಿದೆ; ನಿಮ್ಮ ವಿಶ್ವಾಸ ನನಗೆ ಜವಾಬ್ದಾರಿ ನೀಡಿದೆ; ನಿಮ್ಮ ಪ್ರೀತಿ ನನಗೆ ಶಕ್ತಿ ನೀಡಿದೆ. ನಿಮ್ಮ ಕಷ್ಟದಲ್ಲಿ ನಿಮ್ಮೊಂದಿಗಿದ್ದು, ನಿಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಧ್ವನಿಯಾಗುವ ನನ್ನ ಬದ್ಧತೆ ಸದಾ ಮುಂದುವರಿಯುತ್ತದೆ. ಇದು ನನ್ನ ಗೆಲುವಲ್ಲ, ನಿಮ್ಮೆಲ್ಲರ ಗೆಲುವು” ಎಂದು ಶಶೀಲ್ ಜಿ. ನಮೋಶಿ ಅವರು ಭಾವನಾತ್ಮಕ ಸಂದೇಶ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀ ಭೀಮಳ್ಳಿ
ಇದೆ ಸಂದರ್ಭದಲ್ಲಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ ಸಂಜಯ್ ಮಾಕಲ್, ಎಂ ಆರ್ ಎಂ ಸಿಯ ಡಾ ಆರುಂದತಿ ಪಾಟೀಲ್, ವಿ ಜಿ ಮಹಿಳಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ ಮಹೇಶ್ ಗಂವ್ಹಾರ ನಮೋಶಿಯವರ ಸಾಧನೆ ಕುರಿತು ಮಾತನಾಡಿದರು ವೇದಿಕೆಯ ಮೇಲೆ ಸಂಸ್ಥೆಯ ಆಡಳಿಯ ಮಂಡಳಿ ಸದಸ್ಯ ಡಾ ಶರಣಬಸಪ್ಪ ಹರವಾಳ, ಡಾ ಮಹಾದೇವಪ್ಪ ರಾಂಪೂರೆ ,ಅನೀಲಕುಮಾರ ಮರಗೋಳ, ನಾಗಣ್ಣ ಗಂಟಿ ,ನಿಶಾಂತ್ ಎಲಿ, ಡಾ ಎಸ್ ಆರ್ ಹೊಟ್ಟಿ ಆಡಳಿತಾಧಿಕಾರಿಗಳಾದ ಡಾ ಎಸ್ ಎಲ್ ಹಿರೇಮಠ ಉಪಸ್ಥಿತರಿದ್ದರು
ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳ್ಳಿ ಪ್ರಾಸ್ತವಿಕವಾಗಿ ಮಾತನಾಡಿದರು ಡಾ ಶರಣಬಸಪ್ಪ ಕಮ್ಮಾರ ಪ್ರಾರ್ಥಿಸಿದರು ಉಮಾ ರೇವೂರ ಕಾರ್ಯಕ್ರಮ ನಿರೂಪಿಸಿದರು ಸಂಸ್ಥೆಯ ಎಲ್ಲಾ ಕಾಲೇಜಿನ ಮುಖ್ಯಸ್ಥರು, ಸಿಬ್ಬಂದಿ ಉಪಸ್ಥಿತರಿದ್ದರು

