ಬಕ್ರೀದ್ ಹಬ್ಬ : ಹಿನ್ನೆಲೆ ಮತ್ತು ಇತಿಹಾಸ

ಬಕ್ರೀದ್ ಹಬ್ಬ : ಹಿನ್ನೆಲೆ ಮತ್ತು ಇತಿಹಾಸ

ಬಕ್ರೀದ್ ಹಬ್ಬ : ಹಿನ್ನೆಲೆ ಮತ್ತು ಇತಿಹಾಸ

    ಬಕ್ರೀದ್ (ಈದ್-ಉಲ್-ಅಧಾ) ಮುಸ್ಲಿಂ ಸಮುದಾಯದ ಅತ್ಯಂತ ಪವಿತ್ರವಾದ ಮತ್ತು ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು 'ತ್ಯಾಗದ ಹಬ್ಬ' ಎಂದೂ ಕರೆಯುತ್ತಾರೆ. ಈ ಹಬ್ಬವು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಅಲ್ಲಾಹನಿಗೆ (ದೇವರು) ತೋರಿದ ನಿಷ್ಠೆ, ಭಕ್ತಿ ಮತ್ತು ತ್ಯಾಗವನ್ನು ಸ್ಮರಿಸುತ್ತದೆ.

    ಈ ವರ್ಷ ಭಾರತದಲ್ಲಿ ಬಕ್ರೀದ್ (Bakrid) (ಈದ್-ಉಲ್-ಅಧಾ) ಹಬ್ಬವನ್ನು (Festival) ಮೇ 28ರಂದು ಆಚರಿಸಲಾಗುತ್ತಿದೆ. ಈ ದಿನವು ಧುಲ್ ಹಿಜ್ಜಾ ತಿಂಗಳ 10ನೇ ದಿನವಾಗಿದ್ದು, ಇಸ್ಲಾಮಿಕ್ (Islamic) ಕ್ಯಾಲೆಂಡರ್‌ನ ಪ್ರಕಾರ ಈ ದಿನ ನಿರ್ಧಾರವಾಗುತ್ತದೆ. ಸೌದಿ ಅರೇಬಿಯಾ ಮತ್ತು ಇತರ ಪಶ್ಚಿಮ ದೇಶಗಳಲ್ಲಿ ಚಂದ್ರದರ್ಶನದ ಆಧಾರದ ಮೇಲೆ ಈ ಹಬ್ಬವನ್ನು ಒಂದು ದಿನ ಮೊದಲು, ಅಂದರೆ ಮೇ 27ರಂದು ಆಚರಿಸಲಾಗುತ್ತದೆ .

  ಸಾವಿರಾರು ವರ್ಷಗಳ ಹಿಂದೆ ಪ್ರವಾದಿ ಇಬ್ರಾಹಿಂ ಅವರು ಮಾಡಿದ್ದ ತ್ಯಾಗ ಬಲಿದಾನದ ಸ್ಮರಣೆಯೇ ಈ ಹಬ್ಬದ ವೈಶಿಷ್ಟ್ಯ. ಬಕ್ರೀದ್ ಹಬ್ಬದ ಹಿಂದೆ ಪ್ರವಾದಿ ಇಬ್ರಾಹಿಂ ಅವರ ಜೀವನದ ಒಂದು ಪವಿತ್ರ ಘಟನೆಯಾಗಿದೆ . ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಘಟನೆ ನೆನಪಿಸುತ್ತದೆ ಬಕ್ರೀದ್‌. ಇಸ್ಲಾಮಿನ ಪ್ರವಾದಿಗಳ ಪೈಕಿ, ಏಕದೇವ ವಿಶ್ವಾಸದ ಅನುಷ್ಠಾನಕ್ಕಾಗಿ ಸ್ವಂತ ಹೆತ್ತವರು, ಕುಟುಂಬ, ಮನೆ, ಆಸ್ತಿ, ಊರು ತ್ಯಾಗ ಮಾಡಿ ದೇಶಾಂತರ ಹೊರಟು, ದೇವರ ಆದೇಶದಂತೆ ವೃದ್ಧಾಪ್ಯದಲ್ಲಿ ಸ್ವಂತ ಮಗನನ್ನೂ ಬಲಿ ಕೊಡಲು ಹೊರಟ ಪ್ರವಾದಿ ಇಬ್ರಾಹಿಂ ಇತಿಹಾಸವನ್ನು ನೆನಪಿಸುವುದೇ ಬಕ್ರೀದ್‌ ಆಚರಣೆ ಉದ್ದೇಶ. ಅಲ್ಲಾಹನು ಪ್ರವಾದಿ ಇಬ್ರಾಹಿಂ ಅವರ ಭಕ್ತಿಯನ್ನು ಪರೀಕ್ಷಿಸಲು, ಅವರಿಗೆ ಅತ್ಯಂತ ಪ್ರಿಯವಾದ ಮಗ ಇಸ್ಮಾಯಿಲ್‌ನನ್ನು ಬಲಿ ನೀಡುವಂತೆ ಸ್ವಪ್ನದಲ್ಲಿ ಆಜ್ಞಾಪಿಸುತ್ತಾನೆ. ಇಬ್ರಾಹಿಂ ಅವರು ದೇವರಿಗೆ ನೀಡಿದ ಮಾತಿನಂತೆ, ಪ್ರೀತಿಯ ಮಗನನ್ನು ಬಲಿ ನೀಡಲು ಸಿದ್ಧರಾಗುತ್ತಾರೆ. ಆದರೆ, ಅವರು ಇಸ್ಮಾಯಿಲ್‌ನ ಕತ್ತರಿಸಲು ಕತ್ತಿ ಎತ್ತಿದಾಗ, ಅಲ್ಲಾಹನ ಕೃಪೆಯಿಂದ ಆ ಮಗನ ಬದಲಿಗೆ ಟಗರು (ಕುರಿ) ಬಲಿಯಾಗುತ್ತದೆ. ಈ ತ್ಯಾಗದ ಪ್ರತೀಕವಾಗಿ ಪ್ರತಿವರ್ಷ ಬಕ್ರೀದ್ ಆಚರಿಸಲಾಗುತ್ತದೆ. 

     ಇರಾಕ್‌ನ ಉರ್‌ ಎಂಬ ನಗರದಲ್ಲಿ ಆಜರ್‌ ಎಂಬ ವ್ಯಕ್ತಿಯ ಮಗನಾಗಿ ಇಬ್ರಾಹಿಂ ಅವರ ಜನನವಾಗುತ್ತದೆ. ಸರ್ವಶಕ್ತನಾದ ಅಲ್ಲಾಹನು ಇಬ್ರಾಹಿಮರನ್ನು ತನ್ನ ಪ್ರವಾದಿಯಾಗಿ ಸಮಾಜ ಸುಧಾರಣೆಯಲ್ಲಿ ತೊಡಗಿಸುವಂತೆ ನೇಮಿಸಿಕೊಳ್ಳುತ್ತಾರೆ. ಅದನ್ನು ಅವರು ಸ್ವಂತ ಮನೆಯಿಂದಲೇ ಆರಂಭಿಸುತ್ತಾರೆ. ಮನೆ ಮಂದಿಗೆ ತಿಳುವಳಿಕೆ ಹೇಳಿದಾಗ ಅದನ್ನು ಕೇಳಲು ಸಿದ್ಧರಿಲ್ಲದ ಹೆತ್ತವರು ಬಹಳ ಚರ್ಚೆ ಬಳಿಕ ಅವರನ್ನು ಮನೆಯಿಂದ ಹೊರಗೆ ಹಾಕುತ್ತಾರೆ. ಅಂದು ದಬ್ಬಾಳಿಕೆ ಮೂಲಕ ಆಡಳಿತ ನಡೆಸುತ್ತಿದ್ದ ನಮ್ರೂದ್‌ ದೊರೆಯು ಇಬ್ರಾಹಿಮರ ಮಾತಿನಿಂದ ಸಿಟ್ಟಿಗೆದ್ದು, ತಾನೇ ದೇವನೆಂದು ಸಾರುತ್ತಾರೆ. ಒಬ್ಬನ ಕೊಲೆ ಮಾಡಿ, ಇನ್ನೊಬ್ಬನನ್ನು ಹಾಗೆಯೇ ಬಿಟ್ಟು, ಸಾವು-ಬದುಕು ಕೊಡುವ ಶಕ್ತಿ ನಿನ್ನ ದೇವನಂತೆ ನನಗೂ ಇದೆ ಎಂದು ವಾದಿಸುತ್ತಾನೆ.

   ನನ್ನ ದೇವ ಸೂರ್ಯನನ್ನು ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಮುಳುಗಿಸುತ್ತಾನೆ. ನಿನ್ನಲ್ಲಿ ಆ ಶಕ್ತಿ ಇದೆಯೇ ಎಂಬ ಇಬ್ರಾಹಿಂರ ಮಾತಿನಿಂದ ಸೋತ ನಮ್ರೂದ್‌, ಇಬ್ರಾಹಿಂರನ್ನು ಸುಡುವ ಬೆಂಕಿಗೆ ಹಾಕುತ್ತಾನೆ. ಆದರೆ, ಇಬ್ರಾಹಿಂ ಪವಾಡಸದೃಶವಾಗಿ ಬೆಂಕಿಯಿಂದ ಸುರಕ್ಷಿತವಾಗಿ ಹೊರಗೆ ಬರುತ್ತಾರೆ. ನಂತರ ತನಗಿದು ಸುರಕ್ಷಿತ ಸ್ಥಳ ಅಲ್ಲವೆಂದು ಅರಿತು ಪತ್ನಿ ಹಾಜಿರಾ ಜತೆ ಧರ್ಮ ಪ್ರಚಾರ ಮಾಡುತ್ತಾ ಸಿರಿಯಾ, ಈಜಿಪ್ಟ್‌, ಅರೇಬಿಯಾ ದೇಶಗಳನ್ನು ಸುತ್ತಾಡುತ್ತಾರೆ.

   ಧರ್ಮ ಸಂಸ್ಥಾಪನಾ ಕಾರ್ಯದಲ್ಲಿ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸುತ್ತಾರೆ. ವೃದ್ಧಾಪ್ಯದಲ್ಲಿ ಪತ್ನಿ ಹಾಜಿರಾ ಮತ್ತು ಬಹಳ ವರ್ಷಗಳ ನಿರೀಕ್ಷೆ ಬಳಿಕ ಹುಟ್ಟಿದ ಪುಟ್ಟ ಕಂದ ಇಸ್ಮಾಈಲ್‌ ಅವರನ್ನು ಅರೇಬಿಯಾದ ಮರುಭೂಮಿಯ ನಿರ್ಜಲ - ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರಬೇಕೆಂಬ ದೇವಾಜ್ಞೆಯಾಗುತ್ತದೆ. ಸರ್ವತ್ಯಾಗಿ ಇಬ್ರಾಹಿಂ, ಅದನ್ನೂ ಮಾಡುತ್ತಾರೆ. ಪತ್ನಿ ಹಾಗೂ ಮಗುವನ್ನು ಬಿಟ್ಟು ಮರಳುವಾಗ ಪ್ರವಾದಿ ಇಬ್ರಾಹಿಂ ಮಾಡಿದ ಪ್ರಾರ್ಥನೆಯನ್ನು ಪವಿತ್ರ ಕುರಾನ್‌ ಚಿತ್ರಿಸಿದೆ.

    ಉರಿಯುವ ಬಿಸಿಲಿನಲ್ಲಿ ಮಗು ಅಳುತ್ತಿದ್ದಾಗ, ತಾಯಿ ನೀರನ್ನು ಅರಸುತ್ತಾ ಕಲ್ಲು ಮುಳ್ಳಿನ ಸಫಾ-ಮರ್ವಾ ಬೆಟ್ಟಗಳ ಮಧ್ಯೆ ಓಡಾಡುತ್ತಾರೆ. ಇತ್ತ ಬಾಯಾರಿದ ಶಿಶು ಇಸ್ಮಾಯಿಲ್‌ ತನ್ನ ಕಾಲನ್ನು ನೆಲಕ್ಕೆ ಬಡಿದಾಗ ಮರುಭೂಮಿಯಲ್ಲೂ ನೀರಿನ ಚಿಲುಮೆ ಚಿಮ್ಮತೊಡಗುತ್ತದೆ. ನೀರು ಸಿಗದೆ ನಿರಾಸೆಯಿಂದ ಬರಿಗೈಲಿ ಮರಳಿದ ತಾಯಿ, ಮಗುವಿನ ಸಮೀಪ ಚಿಮ್ಮುತ್ತಿದ್ದ ನೀರನ್ನು ಕಂಡು ಖುಷಿಯಾಗಿ ಝಮ್‌ ಝಮ್‌ (ನಿಲ್ಲು ನಿಲ್ಲು) ಎನ್ನುತ್ತಾರೆ. ಝಮ್‌ ಝಮ್‌ ಎಂಬ ಪವಿತ್ರ ನೀರು ಇಂದಿಗೂ ಪ್ರತಿದಿನ ಲಕ್ಷಾಂತರ ಮಂದಿಗೆ ನೀರುಣಿಸುತ್ತಿದೆ.

    ಅಲ್ಲಿ ಹಝ್ರತ್‌ ಇಸ್ಮಾಯಿಲ್ ಸದ್ಗುಣ ಸಂಪನ್ನರಾಗಿ ಬೆಳೆಯುತ್ತಾರೆ. ಮಗನ ಮೇಲೆ ತಂದೆಗೆ ಅತಿಯಾದ ಪ್ರೀತಿ ಬೆಳೆಯುತ್ತದೆ. ಇದೇ ಪ್ರೇಮವನ್ನು ಅಲ್ಲಾಹನು ಪರೀಕ್ಷೆಗೆ ಒಳಪಡಿಸಿದನು. ‘ನಿನ್ನ ಪ್ರೀತಿಯ ಪುತ್ರನನ್ನು ನನ್ನ ಮಾರ್ಗದಲ್ಲಿ ಬಲಿ ಅರ್ಪಿಸು’ ಎಂಬ ಸ್ವಪ್ನಾಜ್ಞೆ ಇಬ್ರಾಹಿಂ ಅವರಿಗೆ ಸಿಗುತ್ತದೆ. ಎಲ್ಲವನ್ನೂ ತ್ಯಾಗ ಮಾಡಿದ್ದ ಇಬ್ರಾಹಿಂ ಪುತ್ರನ ತ್ಯಾಗಕ್ಕೂ ಎದ್ದು ನಿಲ್ಲುತ್ತಾರೆ. ಸ್ವಪ್ನಾಜ್ಞೆಯನ್ನು ಪತ್ನಿಗೆ ತಿಳಿಸಿದಾಗ, ಅದೇ ಗರಡಿಯಲ್ಲಿ ಪಳಗಿರುವ ಮಹಿಳಾಮಣಿಯೂ ತ್ಯಾಗಕ್ಕೆ ಸಿದ್ಧಳಾಗಿ ನಿಲ್ಲುವರು. ಸ್ವತಃ ಮಗನನ್ನೇ ವಿಚಾರಿಸಿದಾಗಲೂ, ಸಂತೋಷದಿಂದ ದೇವಾಜ್ಞೆ ಪಾಲಿಸುವಂತೆ ಉತ್ತರ ಸಿಗುತ್ತದೆ.

   ಪ್ರವಾದಿ ಇಬ್ರಾಹಿಂರು ಪುತ್ರ ಇಸ್ಮಾಯಿಲ್‌ರನ್ನು ಬಲಿಗೊಡಲು ಹೊರಟಾಗ ಮಧ್ಯೆ ಸೈತಾನ ಸಿಗುತ್ತಾನೆ. ಕಲ್ಲೆಸೆಯುವ ಮೂಲಕ ಅದನ್ನು ಮೆಟ್ಟಿ ನಿಲ್ಲುವರು. ಮಗುವನ್ನು ನೆಲದಲ್ಲಿ ಮಲಗಿಸಿ, ಇನ್ನೇನು ಕೊರಳು ಕೊಯ್ಯಬೇಕು ಎನ್ನುವಷ್ಟರಲ್ಲಿ ‘ಓ ಇಬ್ರಾಹಿಮ್‌ ನೀನು ಈ ಸತ್ವಪರೀಕ್ಷೆಯಲ್ಲೂ ಉತ್ತೀರ್ಣನಾದೆ, ನೀನು ನಮ್ಮ ಆಜ್ಞೆಯನ್ನು ಚೆನ್ನಾಗಿ ಪಾಲಿಸಿರುವೆ. ನಿನ್ನ ಮಗನ ಬದಲಿಗೆ ಈ ಟಗರನ್ನು ಬಲಿಯರ್ಪಿಸು. ಇನ್ನು ನೀವಿಬ್ಬರೂ ಕೂಡಿ ನನ್ನ ದಾಸ್ಯಾರಾಧನೆಗಾಗಿ ಒಂದು ಭವನ ನಿರ್ಮಿಸಿರಿ’ ಎಂಬ ದೇವಾಜ್ಞೆಯಾಗುತ್ತದೆ.

    ಅದರಂತೆ ತಂದೆ-ಮಗ ಸೇರಿ ಝಮ್‌ ಝಮ್‌ ಸ್ರೋತದ ಬಳಿಯಲ್ಲೇ ಒಂದು ಆರಾಧನಾಲಯ ನಿರ್ಮಿಸುತ್ತಾರೆ. ಅದನ್ನು ‘ಕಾಬಾ’ ಎಂದು ಕರೆಯುತ್ತಾರೆ. ಜನರಿಗೆ ಇದರ ಸಂದರ್ಶನಕ್ಕೆ ಕರೆಕೊಡಲಾಗುತ್ತದೆ. ಇದು ಇಡೀ ಜಗತ್ತಿನ ಮುಸ್ಲಿಮರ ಧಾರ್ಮಿಕ ಕೇಂದ್ರವಾಗುತ್ತದೆ. ಮಕ್ಕಾ ನಗರದಲ್ಲಿರುವ ಕಾಬಾ ಭವನಕ್ಕೆ ಪ್ರತಿವರ್ಷ ಹಜ್‌ ಯಾತ್ರೆ ಕೈಗೊಳ್ಳುವ ಸರಿಯಾದ ಕ್ರಮವನ್ನು ನಂತರ ಪ್ರವಾದಿ ಮುಹಮ್ಮದ್‌ ಪ್ರಾಯೋಗಿಕವಾಗಿ ಮಾಡಿ ತೋರಿಸುತ್ತಾರೆ. 1400 ವರ್ಷಗಳಿಂದ ಪವಿತ್ರ ಹಜ್‌ ಯಾತ್ರೆ ಇಸ್ಲಾಮಿನ ವಿಶ್ವ ಭ್ರಾತೃತ್ವದ ಸಂಕೇತವಾಗಿ ನಡೆಯುತ್ತಾ ಬಂದಿದೆ. ಈ ಹಿನ್ನೆಲೆ ಇಬ್ರಾಹಿಂನ ತ್ಯಾಗವನ್ನು ಗೌರವಿಸಲು ಮುಸ್ಲಿಮರು ಕುರಿಮರಿ, ಮೇಕೆ, ಕುರಿ ಅಥವಾ ಒಂಟೆಯನ್ನು ಕೊಲ್ಲುತ್ತಾರೆ.

                                ಆಚರಣೆಯ ವಿಧಾನ:

ನಮಾಜ್ (ಪ್ರಾರ್ಥನೆ): ಹಬ್ಬದ ದಿನದಂದು ಮುಂಜಾನೆ ಮುಸ್ಲಿಂ ಬಾಂಧವರು ಹೊಸ ಬಟ್ಟೆಗಳನ್ನು ಧರಿಸಿ, ಮಸೀದಿ ಅಥವಾ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ (ನಮಾಜ್) ಸಲ್ಲಿಸುತ್ತಾರೆ.

ತ್ಯಾಗ (ಕುರ್ಬಾನಿ): ಪ್ರಾರ್ಥನೆಯ ನಂತರ, ಶಕ್ತರಿರುವವರು ಕುರಿ, ಮೇಕೆ ಅಥವಾ ಒಂಟೆಯನ್ನು ತ್ಯಾಗ ಮಾಡುತ್ತಾರೆ.

ದಾನ ಮತ್ತು ಹಂಚಿಕೆ: ತ್ಯಾಗ ಮಾಡಿದ ಪ್ರಾಣಿಯ ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಒಂದು ಭಾಗವನ್ನು ಬಡವರಿಗೆ, ಒಂದು ಭಾಗವನ್ನು ಬಂಧು-ಮಿತ್ರರಿಗೆ, ಮತ್ತು ಉಳಿದ ಭಾಗವನ್ನು ತಮ್ಮ ಕುಟುಂಬಕ್ಕೆ ಇಟ್ಟುಕೊಳ್ಳುತ್ತಾರೆ.

ಸಂಭ್ರಮ: ಈ ಹಬ್ಬವು ಕುಟುಂಬದವರು ಮತ್ತು ಸ್ನೇಹಿತರು ಒಟ್ಟಿಗೆ ಸೇರಿ, ಸಿಹಿ ಭಕ್ಷ್ಯಗಳನ್ನು ಸವಿದು ಪರಸ್ಪರ ಶುಭಾಶಯ ಕೋರುತ್ತಾರೆ. 

                               ಬಕ್ರೀದ್ ಹಬ್ಬದ ಮಹತ್ವ:

 ಸಹಾನುಭೂತಿ: ಈ ಹಬ್ಬವು ನಿಸ್ವಾರ್ಥತೆ ಮತ್ತು ಮಾನವೀಯತೆಯನ್ನು ಎತ್ತಿ ಹಿಡಿಯುತ್ತದೆ.

ಅಲ್ಲಾಹನಿಗೆ ನಿಷ್ಠೆ: ದೇವರ ಮೇಲೆ ನಂಬಿಕೆ ಮತ್ತು ಆತನ ಆದೇಶಗಳಿಗೆ ಶರಣಾಗುವುದನ್ನು ನೆನಪಿಸುತ್ತದೆ.

ಸಹೋದರತ್ವ: ಬಡವರೊಂದಿಗೆ ಆಹಾರವನ್ನು ಹಂಚಿಕೊಳ್ಳುವ ಮೂಲಕ ಸಮಾಜದಲ್ಲಿ ಐಕ್ಯತೆ ಮತ್ತು ಸಹೋದರತ್ವವನ್ನು ಉತ್ತೇಜಿಸುತ್ತದೆ. ಬಕ್ರೀದ್ ಹಬ್ಬವು ಕೇವಲ ಮಾಂಸದ ಹಂಚಿಕೆಯಲ್ಲ, ಬದಲಿಗೆ ದೇವನಿಷ್ಠೆ ಮತ್ತು ತ್ಯಾಗದ ಭವ್ಯ ಸಂಕೇತವಾಗಿದೆ.

                            

                                           ಪಾಲಿಸಬೇಕಾದ ನಿಯಮ

              ಈದ್-ಉಲ್-ಅದಾ ಅಥವಾ ಬಕ್ರೀದ್ ಹಬ್ಬದ ಮೊದಲು ಹಾಗೂ ನಂತರ ಮುಸ್ಲಿಂ ಬಾಂಧವರು ಹಲವಾರು ನಿಯಮಗಳು ಹಾಗೂ ಆಚರಣೆಗಳನ್ನು ಅನುಸರಿಸುತ್ತಾರೆ. ಅದರಲ್ಲೂ ಇನ್ನಷ್ಟು ಪ್ರಮುಖವಾದ ಅಂಶಗಳು ಇಲ್ಲಿವೆ ನೋಡಿ. ಈದ್-ಉದ್-ಅದಾದಂದು, ಈದ್ ಸಲಾ ಎಂಬ ವಿಶೇಷ ಪ್ರಾರ್ಥನೆಯನ್ನು ಕೈಗೊಳ್ಳಲಾಗುತ್ತದೆ. ಸಮುದಾಯ ಬಾಂಧವರೆಲ್ಲರೂ ಒಟ್ಟಾಗಿ ಈ ಪ್ರಾರ್ಥನೆ ಕೈಗೊಳ್ಳುತ್ತಾರೆ. ಹೆಚ್ಚಾಗಿ ಈ ಪ್ರಾರ್ಥನೆಯನ್ನು ಮಸೀದಿ ಅಥವಾ ಮೈದಾನಗಳಂತ ಮುಕ್ತವಾದ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಮೆಕ್ಕಾಗೆ ಎದುರಾಗಿರುವ ದಿಕ್ಕಿನಲ್ಲಿ ಪ್ರಾರ್ಥನೆಯನ್ನು ಮಾಡಲಾಗುತ್ತದೆ. ನಂತರ ಬಲಿದಾನ ಮತ್ತು ಆಹಾರ ವಿತರಣೆ ಮಾಡುತ್ತಾರೆ.

                                  ಹಜ್‌ನ ಕೊನೆಯಲ್ಲಿ ಬಕ್ರೀದ್ ಹಬ್ಬ

ಈ ಹಬ್ಬವು ಹಜ್ಜ್ ಯಾತ್ರೆಯ ಅಂತ್ಯವನ್ನು ಸೂಚಿಸುತ್ತದೆ. ಈ ಹಬ್ಬವು ಇಸ್ಲಾಮಿಕ್ ಸಂಸ್ಕೃತಿಯಲ್ಲಿನ ತ್ಯಾಗ, ಸಹಾನುಭೂತಿ ಮತ್ತು ದೇವನಿಷ್ಠೆಯ ಮಹತ್ವವನ್ನು ಪ್ರತಿಪಾದಿಸುತ್ತದೆ. ಇದು ಸಮುದಾಯದ ಐಕ್ಯತೆ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಹಬ್ಬವನ್ನು ಸಣ್ಣದಾಗಿ ಸರಳವಾಗಿ ಆಚರಿಸಿದರೂ ಹಬ್ಬ ಅತ್ಯಂತ ಧಾರ್ಮಿಕವಾಗಿದ್ದು ಪವಿತ್ರ ಎಂದೆನಿಸಿದೆ. ಈ ದಿನ ದೇವರ ಮೇಲಿನ ನಂಬಿಕೆ ಹಾಗೂ ನಿಷ್ಠೆಯನ್ನು ನೆನಪಿಸುವ ಆಚರಣೆ ಎಂದೆನಿಸಿದೆ. ಈ ದಿನ ಮುಸ್ಲಿಂ ಬಾಂಧವರು ಪ್ರಾಣಿಗಳನ್ನು ಬಲಿಕೊಡುವುದು ಮಾತ್ರವಲ್ಲದೆ ತಮ್ಮೊಳಗಿನ ಕೆಟ್ಟ ಅಭ್ಯಾಸಗಳು ಹಾಗೂ ಆಚರಣೆಗಳನ್ನು ಬಲಿನೀಡುತ್ತಾರೆ ಎಂಬರ್ಥವನ್ನು ಹೊಂದಿದೆ. ಮೆಕ್ಕಾಗೆ ವಾರ್ಷಿಕ ತೀರ್ಥಯಾತ್ರೆಯಾದ ಇಸ್ಲಾಮ್‌ನ ಐದು ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾದ ಹಜ್‌ನ ಕೊನೆಯಲ್ಲಿ ಬಕ್ರೀದ್ ಹಬ್ಬವು ಬರುತ್ತದೆ.

                                  ಡಾ.ಸತೀಶ್‌ ಕುಮಾರ್‌ ಎಸ್.‌ ಹೊಸಮನಿ

                                                      ನಿರ್ದೇಶಕರು

          ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು.