ನಿವೃತ್ತಿ ಜೀವನ ಸಾಧನೆಗೆ ಕೊನೆಯಲ್ಲ, ಸಾರ್ಥಕ ಬದುಕಿಗೆ ಪೂರಕ: 'ಶಿವರಾಜ ಅಂಡಗಿ
ನಿವೃತ್ತಿ ಜೀವನ ಸಾಧನೆಗೆ ಕೊನೆಯಲ್ಲ, ಸಾರ್ಥಕ ಬದುಕಿಗೆ ಪೂರಕ: 'ಶಿವರಾಜ ಅಂಡಗಿ
ಅಂತರ್ಜ್ಯೋತಿ' ಕೃತಿ ಲೋಕಾರ್ಪಣೆ ಸಮಾರಂಭ
ಕಲಬುರಗಿ, ಆ. 2: ನಿವೃತ್ತಿ ಜೀವನವು ಮಾನವನ ಸಾಧನೆಗೆ ತಡೆಗೋಡೆಯಲ್ಲ, ಬದಲಾಗಿ ಸಾರ್ಥಕ ಬದುಕಿಗೆ ಪೂರಕವಾಗುವ ಹೊಸ ಅಧ್ಯಾಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಅಭಿಪ್ರಾಯಪಟ್ಟರು.
ನಗರದ ದೇವಿನಗರದಲ್ಲಿರುವ ಸಿದ್ದರೂಢ ಸತ್ಸಂಗ ಸಮಿತಿ ಹಾಗೂ ಶ್ರೀ ರಾಮಲಿಂಗ ಚೌಡೇಶ್ವರಿ ಸೇವಾ ಪ್ರತಿಷ್ಠಾನ (ರಿ) ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಗುರುನಾಥ ಭೀಮಳ್ಳಿ ವಿರಚಿತ 'ಅಂತರ್ಜ್ಯೋತಿ'ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಕರ್ತವ್ಯದ ಜೊತೆಗೆ ಶಾಸ್ತ್ರ, ಪುರಾಣ ಹಾಗೂ ಆಧ್ಯಾತ್ಮಿಕ ಪ್ರವಚನಗಳಲ್ಲಿ ತೊಡಗಿಸಿಕೊಂಡು, ಶ್ರೀ ಸಿದ್ದಾರೂಢರ ಪರಮಭಕ್ತರಾಗಿರುವ ಗುರುನಾಥ ಭೀಮಳ್ಳಿರವರು ನಿವೃತ್ತಿಯ ಬಳಿಕ ತಮ್ಮ ಜ್ಞಾನವನ್ನು ಸಮಾಜದೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಕೃತಿಯನ್ನು ರಚಿಸಿರುವುದು ಶ್ಲಾಘನೀಯ. ಅವರ ಜೀವನ ಇಂದಿನ ನಿವೃತ್ತ ಹಿರಿಯರಿಗೆ ಆದರ್ಶವಾಗಿದೆ ಎಂದು ಹೇಳಿದರು.
ಆಧ್ಯಾತ್ಮಿಕ ಚಿಂತಕರಾದ ಬಿ. ಮಹೇಶ್ವರಿಜೀ ಅವರು ಕೃತಿ ಪರಿಚಯ ಮಾಡಿ, 'ಅಂತರ್ಜ್ಯೋತಿ'ಯಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಸರಳವಾಗಿ ನಿರೂಪಿಸಿದ್ದು, ಮಾನವ ಜೀವನವನ್ನು ಮೌಲ್ಯಾಧಾರಿತವಾಗಿ ರೂಪಿಸಿಕೊಳ್ಳಲು ಈ ಕೃತಿ ದಾರಿದೀಪವಾಗಲಿದೆ. ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಇದಾಗಿದೆ ಎಂದು ಹೇಳಿದರು.
ಮೈಂದರ್ಗಿ ಹಿರೇಮಠದ ಶ್ರೀ ಷ.ಬ್ರ. ಅಭಿನವ ರೇವಣಸಿದ್ದ ಪಟ್ಟದೇವರು ಆಶೀರ್ವಚನ ನೀಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಗ್ರಂಥಾಲಯಗಳ ಸ್ಥಾಪನೆ, ಸಾಮಾಜಿಕ ಹಾಗೂ ಧಾರ್ಮಿಕ ಸೇವೆ, ಸತ್ಸಂಗದ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಬೆಳೆಸುತ್ತಿರುವ ಗುರುನಾಥ ಭೀಮಳ್ಳಿರವರ ಸೇವೆ ಅನುಕರಣೀಯವಾಗಿದೆ. ಅವರ ಕೃತಿ ಆಧ್ಯಾತ್ಮಿಕ ಚಿಂತಕರಿಗೆ ಮಾರ್ಗದರ್ಶಕವಾಗಲಿದೆ ಎಂದು ಆಶೀರ್ವದಿಸಿದರು.
ಕೃತಿ ಲೇಖಕ ಗುರುನಾಥ ಭೀಮಳ್ಳಿರವರು ಮಾತನಾಡಿ, ಶ್ರೀ ಸಿದ್ದಾರೂಢರ ಪ್ರೇರಣೆ, ಸತ್ಸಂಗದ ಅನುಭವಗಳು ಹಾಗೂ ಗೆಳೆಯರ ಪ್ರೋತ್ಸಾಹವೇ ಈ ಕೃತಿಯ ರಚನೆಗೆ ಕಾರಣವಾಗಿದೆ. ಕೃತಿ ಪ್ರಕಟಣೆಗೆ ಸಹಕರಿಸಿದ ಶರತ್‌ಚಂದ್ರ ಪೊಲೀಸ್ ಪಾಟೀಲ, ಡಾ. ಕಾವ್ಯಶ್ರೀ ಮಹಾಗಾಂವಕರ್, ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಸತ್ಸಂಗ ಗೆಳೆಯರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕೆಕೆಆರ್‌ಡಿಬಿ ಅಧೀನ ಕಾರ್ಯದರ್ಶಿ ಶಿವಪುತ್ರಪ್ಪ ಕಂಠಿ, ಕೃತಿ ಲೇಖಕ ಗುರುನಾಥ ಭೀಮಳ್ಳಿ, ಶ್ರವಣಕುಮಾರ ಮುನ್ನೊಳ್ಳಿ ವೇದಿಕೆಯಲ್ಲಿದ್ದರು.
ನಿರ್ಮಲಾ ಸಿರಗಾಪೂರ ಸ್ವಾಗತಿಸಿದರು. ಕಾಶೀನಾಥ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ವಿನೋದಕುಮಾರ ಜನೇವರಿ ವಂದಿಸಿದರು.
ಸಮಾರಂಭದಲ್ಲಿ ರೇವಣಸಿದ್ದಪ್ಪ ಜೀವಣಗಿ, ಗಣೇಶ ಚಿನ್ನಾಕರ್, ನಾಗೇಂದ್ರಪ್ಪ ಬಂಟನಳ್ಳಿ, ಸಂಗಪ್ಪ ಭೀಮಳ್ಳಿ, ಗುರುನಾಥ ವಿಠ್ಠಪ್ಪ, ಶರಣಬಸಪ್ಪ ಭೀಮಳ್ಳಿ, ಮಲ್ಲಿಕಾರ್ಜುನ ಆಳಂದ, ಚಂದ್ರಶೇಖರ ಭೀಮಳ್ಳಿ, ಚಂದ್ರಮೋಹನ ಭೀಮಳ್ಳಿ, ವಿಜಯಕುಮಾರ ಭಾಲ್ಕಿ, ಶಿವಶರಣ ಭೀಮಳ್ಳಿ, ಶ್ರೀಮತಿ ಮಲ್ಲಮ್ಮ, ಶ್ರೀಮತಿ ರೇಣುಕಾದೇವಿ ಸೇರಿದಂತೆ ಸತ್ಸಂಗ ಸಮಿತಿಯ ಹಿರಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

