ಸಮಾಜದ ನೈಜ ಸಮಸ್ಯೆಗಳಿಗೆ ಎಐ ತಂತ್ರಜ್ಞಾನ ಬಳಕೆಯಾಗಲಿ: ಅರುಣ್ ಪಾಟೀಲ್

ಸಮಾಜದ ನೈಜ ಸಮಸ್ಯೆಗಳಿಗೆ ಎಐ ತಂತ್ರಜ್ಞಾನ ಬಳಕೆಯಾಗಲಿ: ಅರುಣ್ ಪಾಟೀಲ್

ಸಮಾಜದ ನೈಜ ಸಮಸ್ಯೆಗಳಿಗೆ ಎಐ ತಂತ್ರಜ್ಞಾನ ಬಳಕೆಯಾಗಲಿ: ಅರುಣ್ ಪಾಟೀಲ್

- ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮ

ಕಲಬುರಗಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಸಮಾಜದ ನೈಜ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಬಳಸುವುದು ಇಂದಿನ ಇಂಜಿನಿಯರ್‌ಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಖ್ಯಾತ ಉದ್ಯಮ ತಜ್ಞ ಹಾಗೂ ಅರುಣ್ ಪಾಟೀಲ್ ಲ್ಯಾಬ್ಸ್ ಸಂಸ್ಥಾಪಕ ಅರುಣ್ ಪಾಟೀಲ್ ಹೇಳಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿಟಿಯು ಬೆಳಗಾವಿಯ ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆಯಾದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ (ECE) ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (AIML) ವಿಭಾಗಗಳ ವತಿಯಿಂದ ನವೆಂಬರ್ 21ರಂದು ಆಯೋಜಿಸಿದ್ದ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

IEEE PDACEK ಸ್ಟೂಡೆಂಟ್ ಬ್ರಾಂಚ್, IEEE ಬೆಂಗಳೂರು ಸೆಕ್ಷನ್ ಹಾಗೂ IEEE ಉತ್ತರ ಕರ್ನಾಟಕ ಸಬ್‌ಸೆಕ್ಷನ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮವು “ಯುಕ್ತ್ ಯಂತ್ರ: ತಳಮಟ್ಟದ ಸಬಲೀಕರಣ ಮತ್ತು ಕೌಶಲ್ಯವರ್ಧನೆಗಾಗಿ ಎಐನಲ್ಲಿ ನವೀನ ವ್ಯವಸ್ಥೆಗಳು” ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು.

ಎಐ, ಮೆಷಿನ್ ಲರ್ನಿಂಗ್, ಕಂಪ್ಯೂಟರ್ ವಿಷನ್, ರೊಬೊಟಿಕ್ಸ್ ಹಾಗೂ ಫಿಸಿಕಲ್ ಎಐ ಕ್ಷೇತ್ರಗಳ ಬೆಳವಣಿಗೆ ಕುರಿತು ಮಾತನಾಡಿದ ಅವರು, ಮುಂದಿನ 15ರಿಂದ 20 ವರ್ಷಗಳಲ್ಲಿ ಈ ತಂತ್ರಜ್ಞಾನಗಳು ಕೃಷಿ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆ ತರಲಿವೆ ಎಂದರು. ವಿದ್ಯಾರ್ಥಿಗಳು ಕೇವಲ ಸೈದ್ಧಾಂತಿಕ ಜ್ಞಾನಕ್ಕೆ ಸೀಮಿತವಾಗದೆ, ನೈಜ ಸಮಸ್ಯೆಗಳನ್ನು ಗುರುತಿಸಿ ತಂತ್ರಜ್ಞಾನದ ಮೂಲಕ ಪರಿಹಾರ ರೂಪಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಭಾರತದಲ್ಲಿ ಭಾರತೀಯ ಭಾಷೆಗಳ ಆಧಾರಿತ ಧ್ವನಿ ಎಐ ಹಾಗೂ ಫಿಸಿಕಲ್ ಎಐ ಅಭಿವೃದ್ಧಿಗೆ ಉತ್ತಮ ಅವಕಾಶಗಳಿವೆ. ಕೃಷಿ ಕ್ಷೇತ್ರದಲ್ಲಿ ಧ್ವನಿ ಆಧಾರಿತ ಎಐ ಸಹಾಯಕರು ರೈತರಿಗೆ ಬೆಳೆ ನಿರ್ವಹಣೆ, ಸಿಂಪರಣೆ ಹಾಗೂ ಕೃಷಿ ಸಂಬಂಧಿತ ನಿರ್ಧಾರಗಳಲ್ಲಿ ಮಾರ್ಗದರ್ಶನ ನೀಡಬಲ್ಲರು. ಇಂತಹ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ವಿದ್ಯಾರ್ಥಿಗಳು ಕ್ಷೇತ್ರಮಟ್ಟದ ಅನುಭವ ಪಡೆಯುವುದು ಅಗತ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಆರ್. ಪಾಟೀಲ್ ವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ. ಎಸ್.ಆರ್. ಹೊಟ್ಟಿ, ಡಾ. ಭಾರತಿ ಹರ್ಸೂರು, ಡಾ. ಜಯಶ್ರೀ ಅಗರಖೇಡ್ ಹಾಗೂ ಡಾ. ನಾಗೇಶ್ ಸಾಲಿಮಠ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ECE ವಿಭಾಗದ ಮುಖ್ಯಸ್ಥ ಡಾ. ನಾಗೇಂದ್ರ ಎಚ್. ಹಾಗೂ AIML ವಿಭಾಗದ ಮುಖ್ಯಸ್ಥ ಡಾ. ಬಸವರಾಜ ಎಸ್. ಮಠಪತಿ ಸಂಯೋಜಿಸಿದರು. ಎರಡೂ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿ ಸಂಯೋಜಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಶಶಿಲ್ ಜಿ. ನಮೋಶಿ, ಉಪಾಧ್ಯಕ್ಷ ಶ್ರೀ ರಾಜಾ ಬಿ. ಭೀಮಳ್ಳಿ ಹಾಗೂ ಕಾರ್ಯದರ್ಶಿ ಶ್ರೀ ಉದಯಕುಮಾರ ಎಸ್. ಚಿಂಚೊಳ್ಳಿ ಅವರು ಕಾರ್ಯಕ್ರಮದ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಎಐ ತಂತ್ರಜ್ಞಾನದ ಉದ್ಯಮದ ದೃಷ್ಟಿಕೋನ ಹಾಗೂ ಪ್ರಾಯೋಗಿಕ ಜ್ಞಾನ ನೀಡುವಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.