ದಾಸೋಹ ತತ್ವದಡಿ ಧರ್ಮಸ್ಥಳ ಮತ್ತು ಶರಣಬಸವೇಶ್ವರ ಸಂಸ್ಥಾನದ ಸಮಾಜ ಸೇವೆ ಗಾಂಧೀ ಸ್ಮೃತಿ - ಜನಜಾಗೃತಿ ಸಮಾವೇಶದಲ್ಲಿ ಮಾತೃಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹೇಳಿಕೆ

ದಾಸೋಹ ತತ್ವದಡಿ ಧರ್ಮಸ್ಥಳ ಮತ್ತು ಶರಣಬಸವೇಶ್ವರ ಸಂಸ್ಥಾನದ ಸಮಾಜ ಸೇವೆ   ಗಾಂಧೀ ಸ್ಮೃತಿ - ಜನಜಾಗೃತಿ  ಸಮಾವೇಶದಲ್ಲಿ ಮಾತೃಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹೇಳಿಕೆ

ದಾಸೋಹ ತತ್ವದಡಿ ಧರ್ಮಸ್ಥಳ ಮತ್ತು ಶರಣಬಸವೇಶ್ವರ ಸಂಸ್ಥಾನದ ಸಮಾಜ ಸೇವೆ

 ಗಾಂಧೀ ಸ್ಮೃತಿ - ಜನಜಾಗೃತಿ ಸಮಾವೇಶದಲ್ಲಿ ಮಾತೃಶ್ರೀ ಡಾ.ದಾಕ್ಷಾಯಿಣಿ ಅಪ್ಪ ಹೇಳಿಕೆ

 ಕಲಬುರಗಿ : ಧರ್ಮಸ್ಥಳ ಕ್ಷೇತ್ರ ಹಾಗೂ ಶರಣಬಸವೇಶ್ವರ ಸಂಸ್ಥಾನವು ದಾಸೋಹ ತತ್ವದಡಿ ಸಮಾಜ ಸೇವೆಯಲ್ಲಿ ಅಣ್ಣ- ತಮ್ಮನಂತೆ ಕಾರ್ಯ ಸಲ್ಲಿಸುತ್ತಿರುವ ಧಾರ್ಮಿಕ ಕೇಂದ್ರಗಳಾಗಿವೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಡಾ ದಾಕ್ಷಾಯಿಣಿ ಎಸ್ ಅಪ್ಪ ಹೇಳಿದರು.

     ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಅ. 8 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ನೇತೃತ್ವದಲ್ಲಿ ನಡೆದ ಗಾಂಧೀ ಸ್ಮೃತಿ ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟನೆ ಮಾಡಿ ಮಾತನಾಡಿ ಈ ಎರಡು ಧಾರ್ಮಿಕ ಕೇಂದ್ರಗಳು ಶಿಕ್ಷಣ, ಸಮಾಜ ಸೇವೆಗೆ ತನ್ನ ಸೇವೆಯನ್ನು ಮುಡಿಪಾಗಿಟ್ಟಿದ್ದು ಕಾಯಕ ದಾಸೋಹದಡಿ ಸಮಾಜ ಪರಿವರ್ತನೆಗೆ ಶ್ರಮಿಸುತ್ತಿದೆ.ಸಂಸ್ಥಾನದ ಶಿಕ್ಷಣ ಸಂಸ್ಥೆಗಳಲ್ಲಿ 300ಕ್ಕೂ ಅಧಿಕ ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದು ಅವರು ವೈದ್ಯ ಸೀಟುಗಳನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಸಾಮಾನ್ಯರು ಕೂಡ ವೈದ್ಯರಾಗುವ ಕನಸು ಈಡೇರುತ್ತಿದೆ.ಧರ್ಮಸ್ಥಳ ವ್ಯಸನಮುಕ್ತ ಸಮಾಜ ನಿರ್ಮಾಣದ ಪವಿತ್ರ ಕಾರ್ಯ ಮಾಡುತ್ತಿದೆ. ಗಾಂಧೀಜಿಯವರ ಆದರ್ಶ, ಗ್ರಾಮಾಭಿವೃದ್ಧಿ ಮೂಲಕ ದೇಶದ ಬೆನ್ನೆಲುಬು ರೈತರ ಸೇವೆ ಮಾಡುವುದರ ಮೂಲಕ ಮಾನವೀಯತೆ ಹಾಗೂ ದೇವರ ಸೇವೆ ಸದಾ ನಡೆಯುತ್ತಿದೆ ಎಂದರು . ನಂತರ ವಿವಿಧ ಫಲಾನುಭವಿಗಳಿಗೆ ಮನೆ ಹಂಚಿಕೆ,ಪಿಂಚಣಿ ಪತ್ರ, ವಿದ್ಯಾರ್ಥಿ ವೇತನ, ವಿಕಲಚೇತನರಿಗೆ ವೀಲ್ ಚೇರ್, ಶೌರ್ಯ ವಿಪತ್ತು ಕಾರ್ಯಕರ್ತರಿಗೆ ಸಲಕರಣೆ, ಸರಕಾರಿ ಶಾಲೆಗೆ ಅಧ್ಯಾಪಕರ ನೇಮಕ ಪತ್ರ ಹಸ್ತಾಂತರಿಸಿದರು.

*ಮದ್ಯಪಾನ ಕಡಿವಾಣಕ್ಕೆ ಹೊಸ ಅಬಕಾರಿ ನೀತಿ ಜಾರಿ :ಡಿಸಿ ಇಕ್ರಮ್ ಶರೀಫ್*

  ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸತ್ಯಾಗ್ರಹ ಗ್ರಾಮಸ್ವರಾಜ್ ಇಡೀ ಜಗತ್ತಿಗೆ ಆದರ್ಶವಾಗಿದೆ. ಗಾಂಧೀಜಿಯವರು ಕೇವಲ ಸ್ವಾತಂತ್ರ್ಯ ಹೋರಾಟಗಾರರು ಮಾತ್ರವಲ್ಲ. ಅವರು ಸ್ವಾಭಿಮಾನಿ, ಸ್ವಾವಲಂಬನೆಯ ಸಮೃದ್ಧ ಭಾರತ ಕಟ್ಟಲು ಶ್ರಮಿಸಿದ ಮಹಾನ್ ಚೇತನವಾಗಿದ್ದರು ಎಂದು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.

   ಗಾಂಧೀಜಿಯವರ ದೃಷ್ಟಿಯ ದುಶ್ಚಟ ಮುಕ್ತ ಮತ್ತು ಪಾನ ನಿಷೇಧದ ಸಮಾಜ ನಿರ್ಮಾಣದ ನೋಟದ ಹಾದಿ ತಪ್ಪುತ್ತಿದೆ ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ ಆದರೆ ಜನಜಾಗೃತಿ ವೇದಿಕೆಯ ಮೂಲಕ ಸಂಘಟಿತರಾಗಿ ಜಾಗೃತಿ ಆಗುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಮಾನ ನಿಷೇಧ ಅತ್ಯಂತ ಸೂಕ್ಷ್ಮ ವಿಷಯವಾಗಿದ್ದು ರಾಜ್ಯ ಸರಕಾರಕ್ಕೆ ಎರಡನೇ ಅತ್ಯಧಿಕ ಆದಾಯ ಮೂಲ ಕೊಡುವ ಅಬಕಾರಿ ಇಲಾಖೆಯ ಗಳಿಕೆಯ ಮೂಲಕ ಅಭಿವೃದ್ಧಿಗೆ ಹಣ ಬಳಸಲಾಗುತ್ತಿದೆ. ಆದರೆ ರಾಜ್ಯ ಸರಕಾರ ಜಾರಿ ಮಾಡಿದ ಹೊಸ ಅಬಕಾರಿ ನೀತಿಯ ಪ್ರಕಾರ ಹೆಚ್ಚು ಆಲ್ಕೋಹಾಲ್ ಹೊಂದಿರುವ ಮದ್ಯಕ್ಕೆ ಅಧಿಕ ತೆರಿಗೆ ಹಾಕುವ ಮೂಲಕ ಮದ್ಯಪಾನಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ. ಜನಜಾಗೃತಿ ವೇದಿಕೆಯು ಈ ರೀತಿ ಹಕ್ಕೊತ್ತಾಯದ ಮೂಲಕ ಜಾಗೃತಿ ಮೂಡಿಸಿ ಸಮಾಜದಲ್ಲಿ ಒಂದು ಪರಿವರ್ತನೆ ತರಲು ಸಾಧ್ಯ ಎಂದು ಹೇಳಿದರು.

   ಕಾರ್ಯಕ್ರಮದ ಪೂರ್ವಭಾವಿಯಾಗಿ ಜಗತ್ ವೃತ್ತದಿಂದ ಬೃಹತ್ ಜನಜಾಗೃತಿ ಜಾಥಾವನ್ನು ಕಲಬುರಗಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನರಸಿಂಹ ಮೆಂಡನ್ ಹಲಿಗೆ ಬಾರಿಸಿ ಚಾಲನೆ ನೀಡಿದರು. ಈ ಬಾರಿ ರಾಜ್ಯಮಟ್ಟದ ಗಾಂಧಿ ಜಯಂತಿ ನಿಮಿತ್ತ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಅಳಂದ ಮಾತೋಶ್ರೀ ಅಂಬವ್ವ ರುಕ್ಮಯ್ಯ ಗುತ್ತೇದಾರ್ ಸ್ಮಾರಕ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ವಿಜಯಲಕ್ಷ್ಮಿ ಪೋದ್ದಾರ್ ಅವರಿಗೆ ವಿಶೇಷ ಸನ್ಮಾನ ನೀಡಲಾಯಿತು. ಜನಜಾಗೃತಿಯ ಜಿಲ್ಲಾಧ್ಯಕ್ಷರಾದ ಸಿ ಎನ್ ಬಾಬಳಗಾoವ್ ಅಧ್ಯಕ್ಷತೆ ವಹಿಸಿ ಮಾತನಾಡಿದರು

 ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಜ್ಯ ಹೋಟೆಲ್ ಸಂಘದ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ,ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕರಾದ ಅಮಿತ್ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಪೂಜಾರಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಮಾತನಾಡಿದರು. ಜನ ಜಾಗೃತಿ ವೇದಿಕೆಯ ಅನಿಲ್ ಕುಮಾರ್, ಡಾ.ಸದಾನಂದ ಪೆರ್ಲ, ಚಂದ್ರಶೇಖರ್ ಕರ್ಜಗಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಶಾಂತಪ್ಪ ಕೋರೆ, ಮಾಲತಿ ರೇಷ್ಮಿ, ಸಿದ್ದು ಹಿರೇಮಠ, ನರಸಮ್ಮ ಆವುಂಟಿ ಹಾಗೂ ನರಸಿಂಹ ಮೆಂಡನ್ ಉಪಸ್ಥಿತರಿದ್ದರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಗಣಪತಿ ಮಾಳಂಜಿ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಲಕ್ಷ್ಮಿ ಪ್ರಾರ್ಥನಾ ಗೀತೆ ಹಾಡಿದರು. ಯೋಜನಾಧಿಕಾರಿ ಕೇಶವ ನಿರೂಪಿಸಿದರು. ಯೋಜನಾಧಿಕಾರಿ ಸಂಗಪ್ಪ ಧನ್ಯವಾದವಿತ್ತರು.

 ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸ್ವಸಹಾಯ ಗುಂಪುಗಳಿಂದ ರಾಜ್ಯದಲ್ಲಿ 53 ಲಕ್ಷಕ್ಕೂ ಹೆಚ್ಚು ಜನರು ಬ್ಯಾಂಕ್ ವ್ಯವಹಾರ ನಡೆಸುತ್ತಿದ್ದು ರಿಸರ್ವ್ ಬ್ಯಾಂಕಿನ ಮಹತ್ವಕಾಂಕ್ಷೆಯ ಆರ್ಥಿಕ ಸೇರ್ಪಡೆ ಯೋಜನೆಗೆ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮಹತ್ವದ ಕೊಡುಗೆ ನೀಡಿದೆ. ಗಳಿಸಿ-ಉಳಿಸಿ- ಬೆಳೆಸಿ ಮೂಲ ಮಂತ್ರದ ಮೂಲಕ ಮಹಿಳಾ ಸಬಲೀಕರಣವಾಗುತ್ತಿದ್ದು ಸರಕಾರದ ಮತ್ತು ಬ್ಯಾಂಕ್ ಮಾಡುವ ಕೆಲಸವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡುತ್ತಿದೆ.

 - *ಅಮಿತ್ ಶೆಟ್ಟಿ, ಬ್ಯಾಂಕ್ ಆಫ್ ಬರೋಡ, ಪ್ರಾದೇಶಿಕ ವ್ಯವಸ್ಥಾಪಕರು ಕಲಬುರಗಿ*

 ಜನಜಾಗೃತಿ, ಮಹಿಳಾ ಸಬಲೀಕರಣದ ಮೂಲಕ ಸಮಾಜ ಪರಿವರ್ತನೆಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಕನಸನ್ನು ದಕ್ಷಿಣದ ಧರ್ಮಸ್ಥಳ ಹಾಗೂ ಉತ್ತರದ ಧರ್ಮಸ್ಥಳವೆಂದೆ ಖ್ಯಾತಿ ಪಡೆದ ಶರಣಬಸವೇಶ್ವರ ಸಂಸ್ಥಾನ ಸೇರಿ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಇಂತಹ ಸಮಾಜ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ಕರ್ತವ್ಯ ಪ್ರಜ್ಞರಾಗಬೇಕಾಗಿದೆ. ಈ ಮೂಲಕ ಗಾಂಧೀಜಿಯವರ ಕನಸು ಈಡೇರಿಸಲು ಬದ್ಧರಾಗೋಣ.

 - ಬಾಬುರಾವ ಯಡ್ರಾಮಿ, ಅಧ್ಯಕ್ಷರು, ಕಾರ್ಯನಿರತ ಪತ್ರಕರ್ತರ ಸಂಘ ಕಲಬುರಗಿ

 ಧರ್ಮಸ್ಥಳದ ಖಾವಂದರ (ಹೆಗ್ಗಡೆಯವರು) ಸಮಾಜಮುಖಿ ಕೆಲಸದಿಂದ ಪರಿವರ್ತನೆಯ ಹೊಸ ಶಕೆ ಆರಂಭಿಸಿದ್ದಾರೆ. ಇದಕ್ಕೆ ರಾಜ್ಯ ಹೋಟೆಲ್ ಸಂಘ ವ್ಯಸನಮಕ್ತ ಸಮಾಜ ನಿರ್ಮಾಣ ಹಾಗೂ ಗ್ರಾಮ ಅಭಿವೃದ್ಧಿಯ ಕಾರ್ಯಕ್ಕೆ ಕೈಜೋಡಿಸುತ್ತದೆ.

 *ಸತ್ಯನಾಥ ಶೆಟ್ಟಿ, ಉಪಾಧ್ಯಕ್ಷರು, ರಾಜ್ಯ ಹೋಟೆಲ್ ಸಂಘ,ಬೆಂಗಳೂರು*