ಮನಸ್ಸು ಶಾಂತವಾಗಿದ್ದರೆ ಬದುಕು ಸುಂದರ: ಜಗದ್ಗುರು ಮುಪ್ಪಿನ ಬಸವಲಿಂಗ ಶ್ರೀಗಳು

ಮನಸ್ಸು ಶಾಂತವಾಗಿದ್ದರೆ ಬದುಕು ಸುಂದರ: ಜಗದ್ಗುರು ಮುಪ್ಪಿನ ಬಸವಲಿಂಗ ಶ್ರೀಗಳು

ಮನಸ್ಸು ಶಾಂತವಾಗಿದ್ದರೆ ಬದುಕು ಸುಂದರ: ಜಗದ್ಗುರು ಮುಪ್ಪಿನ ಬಸವಲಿಂಗ ಶ್ರೀಗಳು

ನರೇಗಲ್ಲ: ಜೀವನದಲ್ಲಿ ಸುಖ-ದುಃಖ, ಟೀಕೆ-ನಿಂದನೆಗಳು ಬರುವುದು ಸಹಜ. ಇತರರು ಆಡುವ ಮಾತುಗಳ ಬಗ್ಗೆಯೇ ಚಿಂತಿಸುತ್ತಾ ಸಮಯ ವ್ಯರ್ಥ ಮಾಡದೆ, ಮನಸ್ಸಿನ ನೆಮ್ಮದಿಗೆ ಮೊದಲ ಆದ್ಯತೆ ನೀಡಬೇಕು. ಕಾಯಕದಲ್ಲಿ ನಿಷ್ಠೆ ತೋರಿ ಮುನ್ನಡೆದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ಮನಸ್ಸಿನ ಶಾಂತಿಯೇ ಜೀವನದ ಬಹುದೊಡ್ಡ ಸಂಪತ್ತು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಜಗದ್ಗುರು ಡಾ. ಮುಪ್ಪಿನ ಬಸವಲಿಂಗ ಮಹಾಸ್ವಾಮೀಜಿ ನುಡಿದರು.

ಸಮೀಪದ ಜಕ್ಕಲಿ ಗ್ರಾಮದ ಹಾಲಕೆರೆ ಶಾಖಾ ಅನ್ನದಾನೇಶ್ವರ ಮಠದಲ್ಲಿ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ತಿಂಗಳ ಪರ್ಯಂತ ಹಮ್ಮಿಕೊಳ್ಳಲಾಗಿದ್ದ ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರ ಪುರಾಣದ ಮಹಾಮಂಗಲೋತ್ಸವ ಹಾಗೂ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮುಂದುವರಿದು ಮಾತನಾಡಿದ ಶ್ರೀಗಳು, ಟೀಕೆಗಳಿಗೆ ಧೃತಿಗೆಡದೆ, ಅನಗತ್ಯ ಚಿಂತೆಗಳನ್ನು ದೂರವಿಟ್ಟು ಪ್ರತಿಯೊಬ್ಬರೂ ತಮ್ಮ ಗುರಿಯತ್ತ ಗಮನಹರಿಸಬೇಕು. ಶರಣರ ಪುರಾಣ ಮತ್ತು ಪುಣ್ಯಕಥೆಗಳನ್ನು ಕೇವಲ ಕಿವಿಯಾರೆ ಕೇಳುವುದಷ್ಟೇ ಭಕ್ತಿಯಲ್ಲ; ಶರಣರು ಹಾಕಿಕೊಟ್ಟ ಕಾಯಕ, ದಯೆ, ಸಮಾನತೆ ಮತ್ತು ದಾಸೋಹ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಿಜವಾದ ಶ್ರದ್ಧೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಕುಟುಂಬದಲ್ಲಿ ಪ್ರೀತಿ-ವಿಶ್ವಾಸದಿಂದ ಬಾಳಬೇಕು. ಜಕ್ಕಲಿ ಗ್ರಾಮದ ಧಾರ್ಮಿಕ ಪರಂಪರೆ ಮತ್ತಷ್ಟು ಉತ್ತುಂಗಕ್ಕೇರಲಿ ಹಾಗೂ ಗ್ರಾಮದಲ್ಲಿ ಉದ್ದೇಶಿತ ಸಮುದಾಯ ಭವನ ನಿರ್ಮಾಣದ ಸಂಕಲ್ಪ ಶೀಘ್ರ ಈಡೇರಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಡಗುಂದಿ ಕೊಪ್ಪದ ಶಾಖಾ ಶಿವಯೋಗ ಮಂದಿರದ ಪೂಜ್ಯ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಪುರಾಣ, ಪುಣ್ಯಕಥೆಗಳ ಶ್ರವಣದಿಂದ ಸಮಾಜದಲ್ಲಿ ಸತ್ಸಂಸ್ಕಾರ ಹಾಗೂ ಧಾರ್ಮಿಕ ಜಾಗೃತಿ ಮೂಡುತ್ತದೆ. ಇಂದಿನ ಯುವಪೀಳಿಗೆ ಮತ್ತು ಮಕ್ಕಳು ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದರು.

ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಜಿಗೇರಿಯ ಪೂಜ್ಯ ಶ್ರೀ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅನ್ನದಾಸೋಹ ಹಾಗೂ ಜ್ಞಾನದಾಸೋಹಗಳು ಸಮಾಜದ ಸರ್ವಾಂಗೀಣ ಏಳಿಗೆಗೆ ಪ್ರಮುಖ ದಾರಿದೀಪಗಳಾಗಿವೆ. ವಿನಯ, ಸಮಾನತೆ ಮತ್ತು ತ್ಯಾಗ ಮನೋಭಾವದಿಂದ ಎಲ್ಲರೂ ಸಮಾಜಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಬನವಾಸಿಯ ಪೂಜ್ಯ ಶ್ರೀ ಶಿವಲಿಂಗ ದೇಶಿಕರು ಉಪಸ್ಥಿತರಿದ್ದು ಆಶೀರ್ವದಿಸಿದರು.

 ಸೂರಟೂರಿನ ಶಿಕ್ಷಕ ಹಾಗೂ ಸಾಹಿತಿ ಶರಣು ಕಲಾಲ ಅವರು ವಿಶೇಷ ಉಪನ್ಯಾಸ ನೀಡಿದರು. ಗದುಗಿನ ಶ್ರೀ ವೀರೇಶ್ವರ ಪುಣ್ಯಾಶ್ರಮದ ಪಂಡಿತ ಗುರುಸಿದ್ದೇಶ್ವರ ಶಾಸ್ತ್ರಿಗಳು ಪುರಾಣಕ್ಕೆ ಮಂಗಲ ಹಾಡಿದರು. ಆಕಾಶವಾಣಿ ಕಲಾವಿದ ಸುರೇಶ ಬೆನಕಟ್ಟಿ ತಬಲಾ ಸಾಥ್ ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರವೀಣ ಹೊಸಮನಿ ಪ್ರಾರ್ಥಿಸಿದರು. ಪ್ರಕಾಶ ಹೊಸಮನಿ ಸ್ವಾಗತಿಸಿದರು. ಪ್ರಕಾಶ ವಾಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಜಕ್ಕಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಪಾರ ಸಂಖ್ಯೆಯ ಸದ್ಭಕ್ತರು ಪಾಲ್ಗೊಂಡಿದ್ದರು

ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ