ಸಪ್ತ ನೇಕಾರ ಸೇವಾ ಸಂಘದಿಂದ ದಸರಾ ಪೂಜಾ ಉತ್ಸವ; ನೂತನ ನಾಮಫಲಕ ಅನಾವರಣ

ಸಪ್ತ ನೇಕಾರ ಸೇವಾ ಸಂಘದಿಂದ ದಸರಾ ಪೂಜಾ ಉತ್ಸವ; ನೂತನ ನಾಮಫಲಕ ಅನಾವರಣ

ಸಪ್ತ ನೇಕಾರ ಸೇವಾ ಸಂಘದಿಂದ ದಸರಾ ಪೂಜಾ ಉತ್ಸವ; ನೂತನ ನಾಮಫಲಕ ಅನಾವರಣ

ಕಲಬುರಗಿ: ನಗರದ ಸಪ್ತ ನೇಕಾರ ಸೇವಾ ಸಂಘದ ವತಿಯಿಂದ ದಸರಾ ಪೂಜಾ ಉತ್ಸವ ಹಾಗೂ ಸಂಘದ ನೂತನ ನಾಮಫಲಕ ಅನಾವರಣ ಕಾರ್ಯಕ್ರಮವನ್ನು ಅ. 20ರಂದು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಸಂತೋಷಕುಮಾರ ಕುಸಾಮಾ ಅವರು ಶಕ್ತಿದೇವತೆ ಮಹಾಮಾತೆ (ಅಂಬಾ ಭವಾನಿ) ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಾ. ಕಿರಣ ದೇಶಮುಖ ಅವರು ಸಂಘದ ನೂತನ ನಾಮಫಲಕವನ್ನು ಅನಾವರಣಗೊಳಿಸಿದರು.

ಇಬ್ಬರೂ ಗಣ್ಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ನೇಕಾರ ಸಮುದಾಯದ ಪ್ರತಿನಿಧಿತ್ವ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವುದು ಸಂತಸದ ಸಂಗತಿಯಾಗಿದ್ದು, ಮುಂಬರುವ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಸಮುದಾಯ ತನ್ನದೇ ಆದ ಛಾಪು ಮೂಡಿಸುವಂತಾಗಲಿ ಎಂದು ಹಾರೈಸಿದರು.

ಡಾ . ಕಿರಣ ದೇಶಮುಖ ಮಾತನಾಡಿ, ಕೈಮಗ್ಗ ಉದ್ಯಮ ಕ್ರಮೇಣ ನಶಿಸುತ್ತಿರುವ ಇಂದಿನ ಸಂದರ್ಭದಲ್ಲಿ ನೇಕಾರಿಕೆ ಮತ್ತು ಅದರ ಅಸ್ಮಿತೆಯನ್ನು ಸಮುದಾಯದಲ್ಲಿ ಸದಾ ಜಾಗೃತವಾಗಿರಿಸುವ ಸಪ್ತ ನೇಕಾರ ಸೇವಾ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ಸಂಘವು ಇನ್ನಷ್ಟು ಉನ್ನತ ಸ್ಥಾನಕ್ಕೆ ತಲುಪಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಶಿವಲಿಂಗಪ್ಪ ಅಷ್ಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನೇಕಾರ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ನೇಕಾರ ಸಮುದಾಯದ ನಿಗಮ ಸ್ಥಾಪನೆ ಹಾಗೂ ಕಲಬುರಗಿ ಮಹಾನಗರದಲ್ಲಿ ಪಿಎಂ ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಎಲ್ಲರೂ ಮುತುವರ್ಜಿ ವಹಿಸಿ ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲಪುರ ಸ್ವಾಗತಿಸಿದರು. ನ್ಯಾಯವಾದಿ ಜೆನವೇರಿ ವಿನೋದಕುಮಾರ ಕಾರ್ಯಕ್ರಮದ ನಿರೂಪಣೆ ಹಾಗೂ ಪ್ರಸ್ತಾವನೆ ನೆರವೇರಿಸಿದರು. ಸಂಘದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ ವಂದಿಸಿದರು.

ಕಾರ್ಯಕ್ರಮದಲ್ಲಿ ನಾಗರಾಜ್ ಕುಸಾಮಾ, ಮಲ್ಲಿನಾಥ್ ಕುಂಟೋಜಿ, ಡಾ. ಬಸವರಾಜ್ ಚನ್ನಾ, ವೀರಭಸವಂತಪ್ಪ ಬುಳ್ಳ, ಘಶನೇ, ಶರವಣಕುಮಾರ ಮುನ್ನೊಳ್ಳಿ, ರೇವಣಸಿದ್ಧಪ್ಪ ಗಡ್ಡದ, ಶಿವಚೇಲ್ಲಪ್ಪ ಪುರವಂತ, ನಿಂಬೆನೆಪ್ಪ ಸಾಹುಕಾರ ಮಂಗಲಗಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಪ್ತ ಸಮಾಜದ ಬಂಧುಗಳು ಭಾಗವಹಿಸಿದ್ದರು.