ಭಾಲ್ಕಿಯಲ್ಲಿಮೂರು ದಿನಗಳ ಸಮ್ಮೇಳನ; ವಿವಿಧ ಕ್ಷೇತ್ರಗಳ 11 ಸಾಧಕರಿಗೆ ಪ್ರಶಸ್ತಿ ಪ್ರದಾನ
ಭಾಲ್ಕಿಯಲ್ಲಿ ಅ.23ರಿಂದ (ಇಂದು) ಕರ್ನಾಟಕ ಇತಿಹಾಸ ಅಕಾಡೆಮಿಯ 40ನೇ ರಾಷ್ಟ್ರೀಯ ಸಮ್ಮೇಳನ
ಮೂರು ದಿನಗಳ ಸಮ್ಮೇಳನ; ವಿವಿಧ ಕ್ಷೇತ್ರಗಳ 11 ಸಾಧಕರಿಗೆ ಪ್ರಶಸ್ತಿ ಪ್ರದಾನ
ಭಾಲ್ಕಿ, ಅ.22: ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು ಸಂಸ್ಥೆಯ 40ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 23, 24 ಮತ್ತು 25ರಂದು ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ಶ್ರೀ ಬಸವೇಶ್ವರ ಗುರುಕುಲದ ಆವರಣದಲ್ಲಿ ನಡೆಯಲಿದೆ.
ಸಮ್ಮೇಳನದ ಮೊದಲ ದಿನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂಜ್ಯ ನಾಡೋಜ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಈಶ್ವರ ಖಂಡ್ರೆ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಡಾ. ಎಫ್.ಟಿ. ಹಳ್ಳಿಕೇರಿ ಅವರು ‘ಇತಿಹಾಸ ದರ್ಶನ’ ಸಂಪುಟ 41ನ್ನು ಬಿಡುಗಡೆ ಮಾಡಲಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಇತಿಹಾಸ ಅಕಾಡೆಮಿಯ ಸದಸ್ಯರ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ರವೀಂದ್ರನಾಥ ವಹಿಸಲಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
11 ಸಾಧಕರಿಗೆ ವಿವಿಧ ಪ್ರಶಸ್ತಿ
ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 11 ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.
ಬಿ.ಆರ್. ಅಶೋಕಕುಮಾರ್ ಅವರು ತಮ್ಮ ತಾಯಿ-ತಂದೆ ಭೈಸಾನಿ ರುಕ್ಮಿಣಮ್ಮ–ರತ್ನಶೆಟ್ಟಿ ಅವರ ನೆನಪಿನಲ್ಲಿ ಸ್ಥಾಪಿಸಿರುವ ‘ಇತಿಹಾಸ ಸಂಸ್ಕೃತಿಶ್ರೀ’ ಪ್ರಶಸ್ತಿಯನ್ನು ಡಾ. ಜೆ.ಎಂ. ನಾಗಯ್ಯ ಮತ್ತು ಡಾ. ಸ್ಮಿತಾ ಸುರೇಬಾನಕರ ಅವರಿಗೆ ಪ್ರದಾನ ಮಾಡಲಾಗುವುದು. ಪ್ರಶಸ್ತಿಯೊಂದಿಗೆ ತಲಾ ಒಂದು ಲಕ್ಷ ರೂಪಾಯಿ ನಗದು ಹಾಗೂ ಫಲಕ ನೀಡಲಾಗುತ್ತದೆ.
ಡಾ. ಬಾ.ರಾ. ಗೋಪಾಲ್ ನೆನಪಿನ ಶಾಸನದತ್ತಿ ಪ್ರಶಸ್ತಿಗೆ ಹರಿಹರದ ಡಾ. ರವಿಕುಮಾರ ಕೆ. ನವಲಗುಂದ ಆಯ್ಕೆಯಾಗಿದ್ದಾರೆ.
ಅರಸೀಕೆರೆಯ ಮೇಲಣಮಠದ ಶ್ರೀ ಎಸ್. ಸಿದ್ದಣ್ಣಯ್ಯ ಮತ್ತು ಶ್ರೀಮತಿ ಗಂಗಮ್ಮ ಸ್ಮಾರಕ ಟ್ರಸ್ಟ್ ನೀಡುವ ‘ನೊಳಂಬಶ್ರೀ’ ಪ್ರಶಸ್ತಿಗೆ ಬೆಂಗಳೂರಿನ ಡಾ. ಕೆ.ಬಿ. ಶಿವತಾರಕ್ ಆಯ್ಕೆಯಾಗಿದ್ದಾರೆ.
ಶ್ರೀಮತಿ ಗೌರಮ್ಮ–ಗಂಗಾಧರಯ್ಯ ಅವರ ಹೆಸರಿನಲ್ಲಿ ನೀಡುವ ‘ಸಂಶೋಧನಶ್ರೀ’ ಪ್ರಶಸ್ತಿಗೆ ಮೈಸೂರಿನ ಡಾ. ಎಸ್.ಎನ್. ಶಿವರುದ್ರಸ್ವಾಮಿ ಆಯ್ಕೆಯಾಗಿದ್ದಾರೆ.
ಡಾ. ಲಕ್ಷ್ಮಣ್ ತೆಲಗಾವಿ ಸ್ಥಾಪಿಸಿರುವ ‘ನಾಯಕಶ್ರೀ’ ಪ್ರಶಸ್ತಿಗೆ ಡಾ. ಹಂ.ಗು. ರಾಜೇಶ್ ಆಯ್ಕೆಯಾಗಿದ್ದಾರೆ.
ಕೊಪ್ಪಳದ ಬಿ.ಸಿ. ಪಾಟೀಲ ಟ್ರಸ್ಟ್ ಸ್ಥಾಪಿಸಿರುವ ‘ಶ್ರೀಮತಿ ಸುಮಂಗಲ ಪಾಟೀಲ ಮಹಿಳಾ ಪ್ರಶಸ್ತಿ’ಗೆ ಲಿಂಗಸೂಗೂರಿನ ಡಾ. ಸುಜಾತ ಎಸ್. ನೇಟೇಕಲ್ ಆಯ್ಕೆಯಾಗಿದ್ದಾರೆ.
ಡಾ. ಸೂರ್ಯನಾಥ ಕಾಮತರ ಮಕ್ಕಳು ಸ್ಥಾಪಿಸಿರುವ ‘ಸೂರ್ಯಕೀರ್ತಿ’ ಪ್ರಶಸ್ತಿಗೆ ಬಳ್ಳಾರಿಯ ಟಿ.ಎಚ್.ಎಂ. ಬಸವರಾಜ್ ಆಯ್ಕೆಯಾಗಿದ್ದಾರೆ.
ಡಾ. ಸಿ.ಆರ್. ಶ್ಯಾಮಲಾ ಸ್ಥಾಪಿಸಿರುವ ‘ಡಾ. ಶ್ರೀನಿವಾಸ ಹಾವನೂರು ಸ್ಮರಣಾರ್ಥ’ ಪ್ರಶಸ್ತಿಗೆ ಉಡುಪಿಯ ಡಾ. ಟಿ. ಮುರುಗೇಶಿ ಆಯ್ಕೆಯಾಗಿದ್ದಾರೆ.
ಡಾ. ಬಂ.ಶಾ. ಶ್ಯಾಮಲಾ ರತ್ನಕುಮಾರಿ ಸ್ಥಾಪಿಸಿರುವ ‘ಡಾ. ಪ್ರತಿಭಾ ಚಿಣ್ಣಪ್ಪ ಸ್ಮರಣಾರ್ಥ’ ಪ್ರಶಸ್ತಿಗೆ ಕಲಬುರಗಿಯ ಡಾ. ಶಿವಾನಂದ ಬಂಟನೂರು ಆಯ್ಕೆಯಾಗಿದ್ದಾರೆ.
ಡಾ. ಲಕ್ಷ್ಮಣ್ ತೆಲಗಾವಿ ಸ್ಥಾಪಿಸಿರುವ ಹುಲ್ಲೂರು ಶ್ರೀನಿವಾಸ ಜೋಯಿಸ್ ಸ್ಮಾರಕ ಅತ್ಯುತ್ತಮ ಗ್ರಂಥ ಪ್ರಶಸ್ತಿಗೆ ಮೈಸೂರಿನ ಎಂ.ಎನ್. ಪ್ರಭಾಕರ ಅವರ ‘ದೇವಾಲಯ ವಾಸ್ತು ದೀಪಿಕೆ’ ಗ್ರಂಥ ಆಯ್ಕೆಯಾಗಿದೆ.
ಖ್ಯಾತ ಪುರಾತತ್ವ ತಜ್ಞ ಹಾಗೂ ಪುಣೆಯ ಡೆಕ್ಕನ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಡಾ. ಪದ್ದಯ್ಯ ಕೆ. ಸ್ಥಾಪಿಸಿರುವ ‘ಡಾ. ಎಂ.ಎಚ್. ಕೃಷ್ಣ ಮೆರಿಟ್ ಅವಾರ್ಡ್’ಗೆ ತುಮಕೂರಿನ ಡಾ. ಯು. ಜಗನ್ನಾಥ ಆಯ್ಕೆಯಾಗಿದ್ದಾರೆ.
ಮೂರು ದಿನಗಳ ಸಮ್ಮೇಳನದಲ್ಲಿ ಇತಿಹಾಸ, ಶಾಸನ, ಪುರಾತತ್ವ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ಹಾಗೂ ಸಂಶೋಧನಾ ಪ್ರಬಂಧಗಳ ಮಂಡನೆ ನಡೆಯಲಿದೆ.

