ಲೋಹಿಯಾ ಸಮತಾ ಸಮಾಜದ ಬಹು ದೊಡ್ಡ ಕನಸುಗಾರ :ಬಿ ಆರ್ ಪಾಟೀಲ್
ಲೋಹಿಯಾ ಸಮತಾ ಸಮಾಜದ ಬಹು ದೊಡ್ಡ ಕನಸುಗಾರ :ಬಿ ಆರ್ ಪಾಟೀಲ್
ನಟರಾಜ್ ಹುಳಿಯಾರ್ ಅವರ ಲೋಹಿಯಾ ಕುರಿತ " ಡಾಕ್ಟರ್ ಸಾಹೇಬ್" ಎರಡನೇ ಮುದ್ರಣ ಬಿಡುಗಡೆ
ಕಲಬುರಗಿ : ಡಾ. ರಾಮ ಮನೋಹರ್ ಲೋಹಿಯಾ ಭಾರತದಲ್ಲಿ ಸಮತಾ ಸಮಾಜ ನಿರ್ಮಾಣದ ಕನಸು ಹೊತ್ತ ಬಲುದೊಡ್ಡ ಹೋರಾಟಗಾರರು ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರು ಹಾಗೂ ಶಾಸಕರಾದ ಬಿ ಆರ್ ಪಾಟೀಲ್ ಹೇಳಿದರು.
ಕಲಬುರಗಿಯ ರಂಗಾಯಣದಲ್ಲಿ ನಟರಾಜ್ ಹುಳಿಯಾರ್ ಅವರು ಬರೆದ ಡಾ. ರಾಮ ಮನೋಹರ್ ಲೋಹಿಯಾ ಅವರ ಜೀವನಯಾನದ " ಡಾಕ್ಟರ್ ಸಾಹೇಬ್ " ಕೃತಿಯ 2ನೇ ಮುದ್ರಣವನ್ನು ಮಂಗಳವಾರ
(ಅ. 20ರಂದು) ಬಿಡುಗಡೆಗೊಳಿಸಿ ಮಾತನಾಡಿ ಲೋಹಿಯಾ ಅವರು ನಿಷ್ಟುರವಾದಿ ಚಿಂತಕರಾಗಿದ್ದು ನಾನು ಇರುವವರೆಗೆ ನನ್ನ ಮಾತುಗಳನ್ನು ಯಾರೂ ನಂಬುವುದಿಲ್ಲ. ಆದರೆ ನಾನು ಸತ್ತ ಮೇಲೆ ನನ್ನ ವಿಚಾರಗಳನ್ನು ಎಲ್ಲರೂ ನಂಬುತ್ತಾರೆ ಎಂದು ಸ್ವತಃ ಅವರೇ ಹೇಳಿದರಲ್ಲದೆ ಗಾಂಧೀಜಿಯವರ ಜೊತೆ ಸೇರಿ ಲೋಹಿಯಾ ಚಿಂತನೆಯನ್ನು ಪ್ರತಿಪಾದಿಸಿ ಸಾಮಾಜಿಕ ಪರಿವರ್ತನೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ವಿಕೇಂದ್ರಿಕೃತ ಆಡಳಿತ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿರುವ ಲೋಹಿಯಾ ಅವರು ಗ್ರಾಮ, ಜಿಲ್ಲೆ, ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಆಡಳಿತ ಅಗತ್ಯ ಎಂದು ಪ್ರತಿಪಾದಿಸಿದವರು. ಚುನಾವಣೆಯಲ್ಲಿ ಹಣ ಬಳಕೆಯನ್ನು ಕಟುವಾಗಿ ವಿರೋಧಿಸಿ ಭಾರತದ ರಾಜಕಾರಣಕ್ಕೆ ಹೊಸ ಆಯಾಮ ನೀಡಿದ ರಾಜಕಾರಣಿಯಾಗಿದ್ದರು. ಅಕ್ಕಮಹಾದೇವಿಯವರ ಚಿಂತನೆಗಳಿಂದ ಪ್ರೇರಿತರಾಗಿ ಪುರುಷ ಪ್ರಧಾನ ವ್ಯವಸ್ಥೆಯನ್ನು ವಿರೋಧಿಸಿದರು. ಕಲಬುರಗಿಯ ಸಮಾಜವಾದಿ ಚಿಂತಕರಾಗಿದ್ದ ವೀರಣ್ಣ ತಿಮ್ಮಾಜಿ ಅವರ ಮೂಲಕ ಅಕ್ಕಮಹಾದೇವಿ,ಬಸವಣ್ಣ ತತ್ವಗಳನ್ನು ತಿಳಿದುಕೊಂಡಿದ್ದರು. ಸಮೃದ್ಧ ಭಾರತ ನಿರ್ಮಾಣಕ್ಕೆ ಸಮತಾ ಸಮಾಜದ ಚಿಂತನೆ ಇಂದು ಅತ್ಯಂತ ಅಗತ್ಯವಾಗಿದೆ. ಆ ಕಾರಣಕ್ಕಾಗಿ ಕರ್ನಾಟಕದಲ್ಲಿ ಅನೇಕ ಸಮಾಜವಾದಿ ಚಿಂತಕರು ವಿಚಾರಧಾರೆಯಲ್ಲಿ ಬೆಳೆದರು. ಈ ಕೃತಿ ಲೋಹಿಯಾ ಚಿಂತನೆಗಳ ಪ್ರಚಾರಕ್ಕೆ ಪ್ರೇರಣೆ ನೀಡಲಿದೆ ಎಂದು ಹೇಳಿದರು.
ಲೋಹಿಯಾ ಮಾನವತಾವಾದಿ ವ್ಯಕ್ತಿತ್ವದವರು. ಭಾರತದ ಬಡತನ ಮತ್ತು ಹಸಿವನ್ನು ಹುಡುಕಿ ಹೊರಟ ದೂರದೃಷ್ಟಿಯ ಚಿಂತಕರಾದ್ದರು ಎಂದು ಸಾಹಿತಿ, ಅನುವಾದಕಿ ಡಾ.ಹೇಮಾ ಪಟ್ಟಣಶೆಟ್ಟಿ ಹೇಳಿದರು.
ಮಾನವೀಯತೆ, ತರ್ಕ ಬುದ್ಧಿ ಹೊಂದಿ ಸಮಾಜವಾದದ ಮೂಲಕ ಪ್ರಜಾಪ್ರಭುತ್ವದಲ್ಲಿ ಗಂಡು ಹೆಣ್ಣಿನ ಸಮಾನತೆಯ ಬಗ್ಗೆ ತೀವ್ರ ಪ್ರತಿಪಾದಕರಾಗಿದ್ದರು.ಲೋಹಿಯಾ ಅವರ ಸಮಗ್ರ ವ್ಯಕಿತ್ವವನ್ನು ಲೇಖಕ ಹುಳಿಯಾರ್ ತಮ್ಮ ಮೂರು ದಶಕಗಳ ಧ್ಯಾನದ ಫಲವಾಗಿ ಸತ್ಯನಿಷ್ಟವಾಗಿ ಬರೆದು ಓದುಗರಿಗೆ ಕೃತಿ ನೀಡಿದ್ದಾರೆ.ಲೋಹಿಯಾ ಸಮಾನತವಾದಕ್ಕೆ ನೂರಾರು ಲೇಖಕರು ಆಕರ್ಷಿತರಾಗಿ ಬರಹಗಳನ್ನು ನೀಡಿದ್ದರು ಎಂದು ಹೇಳಿದರು.
ಲೋಹಿಯಾ ಮತ್ತು ಅಂಬೇಡ್ಕರ್ ರಾಜಕಾರಣ ಕೂಡದ ಕಾಲಘಟ್ಟದಲ್ಲಿ ನಟರಾಜ ಹುಳಿಯಾರ್ ಒಳಗಣ್ಣಿನ ವಿಚಾರದಿಂದ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಹೇಳಿದರು.
ಈ ಕೃತಿಯು ದೋಷಿಯಾ ವೈಯಕ್ತಿಕ ಜೀವನ ಲೂಸಿಯ ವಿಚಾರಧಾರೆ ಹಾಗೂ ರಾಜಕಾರಣದ ಸಾಧ್ಯತೆಗಳನ್ನು ಮತ್ತು ಭಾರತೀಯ ಸಂಸ್ಕೃತಿ ಗ್ರಹಿಸಿದ ರೀತಿಯನ್ನು ಜೀವನ ಯಾನದಲ್ಲಿ ಕಟ್ಟಿಕೊಡಲಾಗಿದೆ. ಚರಿತ್ರೆ ಓದುವ ಬಗೆಯ ಬಗ್ಗೆ ಎಚ್ಚರ ಕೊಟ್ಟ ಲೋಹಿಯಾ ಚಿಂತನೆಗಳನ್ನು ತಿಳಿಸಲಾಗಿದೆ.ನಿರಾಕರಣೆ ಮತ್ತು ಸ್ವೀಕರಣೆಯ ಬಗೆಯನ್ನು ತಿಳಿಸುವ ದೊಡ್ಡ ಕೃತಿ ಇದು ಎಂದರು.
ಇಂತಹ ಕೃತಿ ರಚನೆಗೊಳ್ಳಲು ಚಿಂತನೆಯ ಬರಹಗಾರರ ಅನೇಕ ಲೇಖನಗಳು ನನ್ನನ್ನು ಪ್ರೇರೇಪಿಸಿದ್ದು ಯಾವುದೇ ಲೇಖಕನು ಕೃತಿಯನ್ನು ಬರೆಯಬೇಕಾದರೆ ಮೊದಲು ಆತ್ಮಕಥನದ ಮೂಲಕ ಸತ್ಯವನ್ನು ದಾಖಲಿಸುವ ಪ್ರಯತ್ನ ಮಾಡಬೇಕು ಆಗ ಮಾತ್ರ ನಿಜವಾದ ಲೇಖಕನಾಗಿ ಬೆಳೆಯಲು ಸಾಧ್ಯ ಇಂದು ಕೃತಿಕಾರ ನಟರಾಜ ಹುಳಿಯಾರ್ ಹೇಳಿದರು. ಮೊದಲ ಮುದ್ರಣವನ್ನು ಬಿಡುಗಡೆ ಮಾಡಿ ಎಲ್ಲ ಒಂದು ಸಾವಿರ ಕೃತಿಗಳು ಪೂರ್ಣ ಮಾರಾಟಗೊಂಡಿದ್ದು ಎರಡನೆಯ ಮುದ್ರಣಕ್ಕೆ ಬೇಡಿಕೆ ಬಂದಿರುವುದು ಓದುಗರಲ್ಲಿ ಲೋಹಿಯಾ ಅವರ ಚಿಂತನೆಗಳ ಮೇಲಿದ್ದ ಪ್ರೀತಿಗೆ ಸಾಕ್ಷಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕು. ಪೂಜಾ ಪ್ರಾರ್ಥನಾ ಗೀತೆ ಹಾಡಿದರು.
ಪಲ್ಲವ ಪ್ರಕಾಶನದ ವೆಂಕಟೇಶ್ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಅಜೀಮ್ ಪಾಷಾ ವಂದನಾರ್ಪಣೆಗೈದರು.
ಕಿರಣ್ ವಲ್ಯಾಪುರೆ ನಿರೂಪಣೆ ಮಾಡಿದರು.

