ನರೇಗಲ್ಲನಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ
ನರೇಗಲ್ಲನಲ್ಲಿ ಪಶ್ಚಿಮ ಪದವೀಧರರ ಕ್ಷೇತ್ರದ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ
ನರೇಗಲ್ಲ: ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ನರೇಗಲ್ಲ ಪಟ್ಟಣ ಹಾಗೂ ಸುತ್ತಮುತ್ತಲಿನ ಮತಗಟ್ಟೆಗಳಲ್ಲಿ ಬಿರುಸಿನ ಹಾಗೂ ಶಾಂತಿಯುತ ಮತದಾನ ನಡೆಯಿತು. ಪದವೀಧರ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬೆಳಗ್ಗೆಯಿಂದಲೇ ಮತಗಟ್ಟೆಗಳ ಮುಂದೆ ಪದವೀಧರರು ಸಾಲುಗಟ್ಟಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಂಡ ಯುವ ಪದವೀಧರರು ಹಾಗೂ ಹಿರಿಯ ಮತದಾರರು ಉತ್ಸಾಹದಿಂದ ಭಾಗವಹಿಸಿದರು.
ಮತದಾರರಿಗೆ ಕುಡಿಯುವ ನೀರು, ನೆರಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಹಿರಿಯ ನಾಗರಿಕರಿಗೆ ಸಹಾಯಕ ವ್ಯವಸ್ಥೆ ಮಾಡಲಾಗಿದ್ದು, ಪೊಲೀಸ್ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮತಪತ್ರ ಹಾಗೂ ಪ್ರಾಶಸ್ತ್ಯದ ಮತದಾನ ಪದ್ಧತಿಯ ಕುರಿತು ಅಧಿಕಾರಿಗಳು ಮತದಾರರಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ,ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು, ವಿಶೇಷವಾಗಿ ಯುವನಿಧಿ ಯೋಜನೆ, ನಿರುದ್ಯೋಗಿ ಯುವ ಪದವೀಧರರಲ್ಲಿ ಭರವಸೆ ಮೂಡಿಸಿವೆ. ಯುವಜನರ ಸಮಸ್ಯೆಗಳಿಗೆ ಸ್ಪಂದಿಸುವ ಸರ್ಕಾರದ ಕ್ರಮಗಳಿಗೆ ಪದವೀಧರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಶಾಸಕ ಕಳಕಪ್ಪ ಬಂಡಿ ಮಾತನಾಡಿ,ಸಂಕನೂರ ಅವರು ಕ್ಷೇತ್ರದಾದ್ಯಂತ ನಡೆಸಿರುವ ಸಂಘಟನೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು ಯುವ ಪದವೀಧರರ ಗಮನ ಸೆಳೆದಿವೆ. ಅವರ ಪರಿಶ್ರಮಕ್ಕೆ ಮತದಾರರು ಬೆಂಬಲ ನೀಡಿ ಗೆಲುವು ತಂದುಕೊಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಶಿವರಾಜ ಬಂಡಿ, ಮುತ್ತಣ್ಣ ಕಡಗಾದ, ಉಮೇಶ ಸಂಗನಾಳಮಠ, ಯಲ್ಲಪ್ಪ ಮಣ್ಣೊಡ್ಡರ, ಮಹೇಶ ಶಿವಶಿಂಪಿ, ಜ್ಯೋತಿ ಪಾಯಪ್ಪಗೌಡ್ರ ಹಾಗೂ ಕಾಂಗ್ರೆಸ್ ಪಕ್ಷದ ಮೈಲಾರಪ್ಪ ಚಳ್ಳಮರದ, ನಿಂಗಪ್ಪ ಲಕ್ಕನಗೌಡ್ರು, ಅಲ್ಲಾಭಕ್ಷ ನದಾಫ್, ಸಂತೋಷ ಹನಮಸಾಗರ, ಮುತ್ತಣ್ಣ ಹಡಪದ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.
— ಹುಚ್ಚೀರಪ್ಪ ವೀರಪ್ಪ ಈಟಿ
ಜಿಲ್ಲಾ ವರದಿಗಾರರು, ಕಲ್ಯಾಣ ಕಹಳೆ, ಗದಗ.

