ಅನುಚ್ಛೇದ 171(3) ತಿದ್ದುಪಡಿಗೆ ರಾಜ್ಯಪಾಲರಿಗೆ ಮನವಿ
ಅನುಚ್ಛೇದ 171(3) ತಿದ್ದುಪಡಿಗೆ ರಾಜ್ಯಪಾಲರಿಗೆ ಮನವಿ
ಕಲಬುರಗಿ: ಅನುಚ್ಛೇದ 171(3)ಕ್ಕೆ ತಿದ್ದುಪಡಿ ತಂದು ವಿಧಾನ ಪರಿಷತ್ತಿನ ನಾಮನಿರ್ದೇಶನ ಕ್ಷೇತ್ರವನ್ನು ವಿಸ್ತರಿಸುವಂತೆ ಆಗ್ರಹಿಸಿ, ಅನುಚ್ಛೇದ 171(3) ತಿದ್ದುಪಡಿ ಹೋರಾಟ ಸಮಿತಿಯ ಕಲ್ಯಾಣ ಕರ್ನಾಟಕ ಭಾಗದ ಅಧ್ಯಕ್ಷ, ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅವರ ನೇತೃತ್ವದಲ್ಲಿ ಸೋಮವಾರ (ಸೆ.28) ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ತಹಸೀಲ್ದಾರ್ ಶಿವಪ್ರಭು ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಈಗಿರುವ ಕ್ಷೇತ್ರಗಳ ಜೊತೆಗೆ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುವ ವೈದ್ಯರು, ವಕೀಲರು, ಪತ್ರಕರ್ತರು, ಹಿರಿಯ ನಾಗರಿಕರು ಹಾಗೂ ರೈತರನ್ನೂ ಪರಿಗಣಿಸುವಂತೆ ಸಂವಿಧಾನದಲ್ಲಿ ಸೂಕ್ತ ತಿದ್ದುಪಡಿ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಅಲ್ಲದೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುವ ಇತರ ವರ್ಗಗಳನ್ನೂ ನಾಮನಿರ್ದೇಶನದ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಲಾಯಿತು.
ಈ ಕುರಿತು ರಾಜ್ಯ ಸರ್ಕಾರ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಿ, ಭಾರತದ ರಾಷ್ಟ್ರಪತಿಗಳ ಗಮನಕ್ಕೆ ತಂದು ಸಂವಿಧಾನ ತಿದ್ದುಪಡಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ವಕೀಲ ಮೇಘನಾಥ ಶಿವಾಚಾರ್ಯಮಠ, ಸಮಾಜಶಾಸ್ತ್ರ ಉಪನ್ಯಾಸಕ ಬಿ.ಎಂ. ರಾವೂರ್, ಮರತೂರ ಗ್ರಾಮದ ರೈತ ಹಾಗೂ ಸಮಾಜ ಸೇವಕ ಮಸಗಲ ಶಿವಶಂಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

