ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ. ರಶೀದ್ ಮುಂದುವರಿಸಿ, ಇಲ್ಲವೇ ಮುತ್ತಟ್ಟಿ ಅವರನ್ನು ನೇಮಿಸಿ :ಗೀತಾ ಬೊಗುಂಡಿ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ. ರಶೀದ್ ಮುಂದುವರಿಸಿ, ಇಲ್ಲವೇ ಮುತ್ತಟ್ಟಿ ಅವರನ್ನು ನೇಮಿಸಿ :ಗೀತಾ ಬೊಗುಂಡಿ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ. ರಶೀದ್ ಮುಂದುವರಿಸಿ, ಇಲ್ಲವೇ ಮುತ್ತಟ್ಟಿ ಅವರನ್ನು ನೇಮಿಸಿ :ಗೀತಾ ಬೊಗುಂಡಿ.

| 25 ವರ್ಷಗಳ ಬಳಿಕ ವೀರಶೈವ ಲಿಂಗಾಯತ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಲು ಮನವಿ|

ಶಹಾಬಾದ : ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಡಾ. ಎಂ.ಎ. ರಶೀದ ಮರ್ಚಂಟ್ ಅವರನ್ನು ಮುಂದುವರಿಸಬೇಕು. ಒಂದು ವೇಳೆ ಕೆಪಿಸಿಸಿ ನಿರ್ಧಾರದಂತೆ ಅಧ್ಯಕ್ಷರ ಬದಲಾವಣೆ ಅನಿವಾರ್ಯವಾದರೆ, ಬ್ಲಾಕ್ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ಹಾಗೂ ವೀರಶೈವ ಲಿಂಗಾಯತ ಸಮಾಜದ ಮಾಜಿ ಅಧ್ಯಕ್ಷ ವಿಜಯಕುಮಾರ ಮುತ್ತಟ್ಟಿ ಅವರನ್ನು ಶಹಾಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ನಗರಸಭೆಯ ಮಾಜಿ ಅಧ್ಯಕ್ಷೆ ಗೀತಾ ಸಾಹೇಬಗೌಡ ಬೊಗುಂಡಿ ಯವರು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಾ. ಎಂ.ಎ. ರಶೀದ್ ಅವರು ಹಲವು ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ವಿವಿಧ ಜಾತಿ ಮತ್ತು ಧರ್ಮಗಳ ಮುಖಂಡರನ್ನು ಒಗ್ಗೂಡಿಸಿಕೊಂಡು ಪಕ್ಷಕ್ಕೆ ಬಲ ತುಂಬುವ ಕಾರ್ಯ ಮಾಡಿದ್ದಾರೆ. ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು. ಆದರೆ, ಕೆಪಿಸಿಸಿ ಮಟ್ಟದಲ್ಲಿ ಅಧ್ಯಕ್ಷರ ಬದಲಾವಣೆಯ ನಿರ್ಧಾರ ಕೈಗೊಂಡರೆ, ಪಕ್ಷದ ನಿಷ್ಠಾವಂತ ಮುಖಂಡರಾಗಿರುವ ವಿಜಯಕುಮಾರ ಮುತ್ತಟ್ಟಿ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 

2016ರಲ್ಲಿ ಬ್ಲಾಕ್ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಪ್ರಭಾರ ಜವಾಬ್ದಾರಿ ವಹಿಸಿಕೊಂಡಿದ್ದ ಮುತ್ತಟ್ಟಿ ಅವರು ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಹುಮತದ ಗೆಲುವಿಗೆ ಕಾರಣರಾದವರಲ್ಲಿ ಒಬ್ಬರಾಗಿದ್ದರು ಎಂದು ಅವರು ಸ್ಮರಿಸಿದರು.

ಮುತ್ತಟ್ಟಿ ಕುಟುಂಬ ಕಳೆದ 40ರಿಂದ 50 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ, ಸಕ್ರಿಯವಾಗಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ, ತಾಲೂಕಿನಲ್ಲಿ ವಿವಿಧ ಜಾತಿ ಮತ್ತು ಧರ್ಮಗಳ ನಡುವೆ ಸಮನ್ವಯ ಕಾಪಾಡಿಕೊಂಡು ಬಂದಿರುವ ಮುತ್ತಟ್ಟಿ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ನೀಡಲಿದೆ ಎಂದು ಗೀತಾ ಸಾಹೇಬಗೌಡ ಬೊಗುಂಡಿ ಹೇಳಿದರು.

ಶಹಾಬಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹಿಂದೆ ಸಾಮಾನ್ಯ ವರ್ಗದ ವೀರಶೈವ ಲಿಂಗಾಯತ ಸಮಾಜದ ದಿವಂಗತ ಬಸವರಾಜ್ ಪಾಳ ಅವರು ಅಲಂಕರಿಸಿದ್ದರು, ಆನಂತರ ಸುಮಾರು 25 ವರ್ಷಗಳು ಕಳೆದಿದ್ದು, ಇದೀಗ ಮತ್ತೆ ಸಾಮಾನ್ಯ ವರ್ಗದ ವೀರಶೈವ ಲಿಂಗಾಯತ ಸಮಾಜಕ್ಕೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ವಿಜಯಕುಮಾರ ಮುತ್ತಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ನ್ಯಾಯಸಮ್ಮತವಾಗಿರುತ್ತದೆ ಎಂದು ಅವರು ಪ್ರತಿಪಾದಿಸಿದರು.

ರಾಜ್ಯ ಸರ್ಕಾರದ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ್, ಜಿ. ಪಂ. ಮಾಜಿ ಸದಸ್ಯ ಶಿವಾನಂದ ಪಾಟೀಲ ಮತ್ತು ಕಾಡಾ ಅಧ್ಯಕ್ಷರಾದ ಡಾ. ಎಂ.ಎ. ರಶೀದ್ ಅವರೊಂದಿಗೆ ಮುತ್ತಟ್ಟಿ ಅವರು ನಿಕಟ ಸಂಪರ್ಕ ಹೊಂದಿದ್ದಾರೆ. ಪಕ್ಷದ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಬ್ಲಾಕ್ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಲ್ಲರು. ಆದ್ದರಿಂದ ಪಕ್ಷದ ಹಿರಿಯ ನಾಯಕರು ಹಾಗೂ ಕಾಂಗ್ರೆಸ್ ಹೈಕಮಾಂಡ್ ಈ ಮನವಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಯುವ ಅಧ್ಯಕ್ಷ ಅನಿಲ್ ಕುಮಾರ್ ಇಂಗೀನಶೆಟ್ಟಿ, ಮುಖಂಡರಾದ ನಿರಂಜನ ಗೊಳೇದ, ವಿಶ್ವರಾಧ್ಯ ಬಿರಾಳ, ನಗರಸಭೆಯ ಮಾಜಿ ಸದಸ್ಯರಾದ ದೇವೇಂದ್ರಪ್ಪ ವಾಲಿ, ನಾಗಣ್ಣ ರಾಂಪುರ, ಮಲ್ಲಿಕಾರ್ಜುನ್ ವಾಲಿ, ಸಾಹೇಬಗೌಡ ಬೊಗುಂಡಿ, ಮಹಾರುದ್ರಪ್ಪ ಇಂಗಿನಶೆಟ್ಟಿ, ಸಿದ್ದರಾಮಪ್ಪ ಮುದಿಗೌಡ ಹಾಗೂ ಸೋಮಶೇಖರ ಇಂಗ್ಳೇಶ್ವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.