ಪದವೀಧರರು, ಶಿಕ್ಷಕರ ಮತದಾನದ ಹಕ್ಕಿಗೆ ಅನುಚ್ಛೇದ 171(3) ತಿದ್ದುಪಡಿಗೆ ಮುದೇನೂರು, ಜಿನವೇರಿ ,ಆಗ್ರಹ
ಪದವೀಧರರು, ಶಿಕ್ಷಕರ ಮತದಾನದ ಹಕ್ಕಿಗೆ ಅನುಚ್ಛೇದ 171(3) ತಿದ್ದುಪಡಿಗೆ ಮುದೇನೂರು, ಜಿನವೇರಿ ,ಆಗ್ರಹ
ವಿಧಾನ ಪರಿಷತ್ತು ರಾಜಕೀಯ ಪುನರ್ವಸತಿ ಕೇಂದ್ರವಾಗದೆ, ತಜ್ಞರ ಚಿಂತನೆಯ ವೇದಿಕೆಯಾಗಲಿ
ಕಲಬುರಗಿ: ಪದವೀಧರರು, ಶಿಕ್ಷಕರು ಹಾಗೂ ವಿವಿಧ ಕ್ಷೇತ್ರಗಳ ಅರ್ಹರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ಹಕ್ಕು ಕಲ್ಪಿಸುವುದು ಮತ್ತು ಸದನದ ಘನತೆ ಎತ್ತಿಹಿಡಿಯಲು ಸಂವಿಧಾನದ ಅನುಚ್ಛೇದ 171(3)ಕ್ಕೆ ಸೂಕ್ತ ತಿದ್ದುಪಡಿ ತರಬೇಕು ಎಂದು ತಿದ್ದುಪಡಿ ಅಭಿಯಾನದ ರಾಜ್ಯಾಧ್ಯಕ್ಷ ಭಾಸ್ಕರ ಎಂ. ಮುದೇನೂರು ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ನ್ಯಾಯವಾದಿ ವಿನೋದ್ ಕುಮಾರ್ ಜಿನವೇರಿ ಹೇಳಿದರು
ನಗರದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಪದವಿ ಪಡೆದ ಮೂರು ವರ್ಷಗಳ ನಂತರವಷ್ಟೇ ಪದವೀಧರರ ಕ್ಷೇತ್ರದ ಮತದಾರರಾಗಲು ಅವಕಾಶವಿದ್ದು, ಶಿಕ್ಷಕರ ಕ್ಷೇತ್ರದಲ್ಲಿಯೂ ನಿರ್ದಿಷ್ಟ ಬೋಧನಾ ಅನುಭವದ ಷರತ್ತು ಇರುವುದರಿಂದ ಪ್ರಾಥಮಿಕ ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ತರಬೇತಿ ಪಡೆದ ಅನೇಕ ಅರ್ಹ ಅಭ್ಯರ್ಥಿಗಳು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು
ಪ್ರಜಾಪ್ರಭುತ್ವದಲ್ಲಿ ಜನರೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ, ಪ್ರಸ್ತುತ ವ್ಯವಸ್ಥೆಯಲ್ಲಿ ಅನೇಕ ಅರ್ಹರು ವಿಧಾನ ಪರಿಷತ್ ಚುನಾವಣೆಯ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ಕೃಷಿ, ಕಾನೂನು, ವೈದ್ಯಕೀಯ, ಶಿಕ್ಷಣ, ವಿಜ್ಞಾನ, ಪರಿಸರ, ಕ್ರೀಡೆ, ಮಾಧ್ಯಮ ಮತ್ತು ಕಾರ್ಮಿಕ ಕ್ಷೇತ್ರಗಳ ತಜ್ಞರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯುವಂತಾಗಬೇಕು ಎಂದು ಹೇಳಿದ್ದಾರೆ.
ಹತ್ತು ಪ್ರಮುಖ ಹಕ್ಕೊತ್ತಾಯಗಳು
ಪದವಿ ಪಡೆದ ವರ್ಷವೇ ಪದವೀಧರರಿಗೆ ಮತದಾನದ ಹಕ್ಕು ನೀಡಬೇಕು. ಶಿಕ್ಷಕರ ಕ್ಷೇತ್ರದ ಮತದಾರರ ಅರ್ಹತೆಯನ್ನು ವಿಸ್ತರಿಸಿ ಪ್ರಾಥಮಿಕ ಶಿಕ್ಷಕರು, ಅತಿಥಿ ಶಿಕ್ಷಕರು, ಅತಿಥಿ ಉಪನ್ಯಾಸಕರು ಹಾಗೂ ಶಿಕ್ಷಕರ ತರಬೇತಿ ಪಡೆದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಬೇಕು. ಇದಕ್ಕಾಗಿ ಪ್ರಜಾಪ್ರತಿನಿಧಿ ಕಾಯ್ದೆ, 1950ರ ಕಲಂ 27(5)(ಬಿ)ಗೆ ತಿದ್ದುಪಡಿ ತರಬೇಕು.
ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳ ಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳಿಗೆ ಐದು ವರ್ಷಗಳ ಬೋಧನಾ ಅನುಭವ ನಿಗದಿಪಡಿಸಬೇಕು. ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ಹಾಗೂ ಅಧಿಕಾರಾವಧಿಯಲ್ಲಿ ರಾಜೀನಾಮೆ ನೀಡಿದ ಜನಪ್ರತಿನಿಧಿಗಳಿಗೆ ಆರು ವರ್ಷಗಳವರೆಗೆ ವಿಧಾನ ಪರಿಷತ್ತಿಗೆ ಆಯ್ಕೆಯಾಗದಂತೆ ನಿಯಮ ರೂಪಿಸುವ ಕುರಿತು ಪರಿಶೀಲಿಸಬೇಕು.
ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸುವವರಿಗೆ ಎರಡು ಪೂರ್ಣಾವಧಿಗಳ ಸದಸ್ಯತ್ವದ ಅನುಭವ ಕಡ್ಡಾಯಗೊಳಿಸಬೇಕು. ಜನಪ್ರತಿನಿಧಿಗಳೇ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ರೈತರು, ಕಾರ್ಮಿಕರು, ನ್ಯಾಯವಾದಿಗಳು, ಕ್ರೀಡಾಪಟುಗಳು, ಪತ್ರಕರ್ತರು, ವೈದ್ಯರು ಹಾಗೂ ಪರಿಸರವಾದಿಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಸರ್ಕಾರ ಜನಾಭಿಪ್ರಾಯ ಸಂಗ್ರಹಿಸಬೇಕು.
ಅನುಚ್ಛೇದ 171(3)ರ ವ್ಯವಸ್ಥೆಗಳ ಕುರಿತು ವಿವಿಧ ಕ್ಷೇತ್ರಗಳ ತಜ್ಞರ ಸಭೆ ಕರೆದು ಸಮಗ್ರ ಚರ್ಚೆ ನಡೆಸಿ, ಅಗತ್ಯ ತಿದ್ದುಪಡಿಗಳ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಮುಖಂಡರು ತಿಳಿಸಿದ್ದಾರೆ.
“ಮತದಾನ ಯಾರೂ ನೀಡುವ ಭಿಕ್ಷೆಯಲ್ಲ; ಅದು ಪ್ರಜಾಪ್ರಭುತ್ವದ ಆಶಯ. ಅರ್ಹ ಸಮುದಾಯಗಳ ಹಕ್ಕುಗಳನ್ನು ರಕ್ಷಿಸಲು ಅನುಚ್ಛೇದ 171(3)ಕ್ಕೆ ಸೂಕ್ತ ತಿದ್ದುಪಡಿ ತರಬೇಕು” ಎಂದು ಭಾಸ್ಕರ ಎಂ. ಮುದೇನೂರು ಮತ್ತು ನ್ಯಾಯವಾದಿ ವಿನೋದ್ ಕುಮಾರ್ ಜಿನವೇರಿ ಜಂಟಿಯಾಗಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

